ಗುಲ್ಬರ್ಗ: ಲಿಂ. ಚಂದ್ರಶೇಖರ ಪಾಟೀಲ್ ರೇವೂರ ಅವರ 56ನೇ ಜನ್ಮದಿನದ ನೆನಪಿನ ಅಂಗವಾಗಿ ಅವರ ಅಭಿಮಾನಿಗಳ ಬಳಗವು ಸೋಮವಾರ ನಗರದ ಶರಣಬಸವೇಶ್ವರ ದೇವಸ್ಥಾನದ ಮೈದಾನದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 151 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಸಿದರು.
23 ಜೋಡಿ ತಿರಸ್ಕಾರ: ನಗರದ ಹೊರವಲಯ ಕೋಟನೂರ ಮಠದಲ್ಲಿ ಉಚಿತ ಸಾಮೂಹಿಕ ಮಾಡಿಕೊಳ್ಳುವ ನವ ಜೋಡಿಗಳ ಹೆಸರು ನೋಂದಾಯಿಸುವ ವ್ಯವಸ್ಥೆ ಮಾಡಲಾಗಿತ್ತು. ವಧುವಿಗೆ 18 ವರ್ಷ ಮತ್ತು ವರನಿಗೆ 21 ವರ್ಷಗಳಾಗಿರಬೇಕೆಂಬ ನಿಯಮ ಅನುಷ್ಠಾನಗೊಳಿಸಲು ವಧು- ವರರ ವಯಸ್ಸನ್ನು ಪ್ರಮಾಣೀಕರಿಸಲು ಜನ್ಮ ದಿನಾಂಕ ಪ್ರಮಾಣ ಪತ್ರ, ಎಸ್ಎಸ್ಎಲ್ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗಿತ್ತು.
ಇದಕ್ಕಾಗಿ ತಹಸೀಲ್ದಾರ್ ಪ್ರಕಾಶ ಚಿಂಚೋಳಿಕರ್ ನೇತೃತ್ವದಲ್ಲಿ ಜಿಲ್ಲಾ ಗ್ರಾಮೀಣ ಆರೋಗ್ಯಾಧಿಕಾರಿ ಡಾ. ಶಿವಶರಣಪ್ಪ, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಕೇಶ ಚವ್ಹಾಣ, ಸಿಡಿಪಿಒ ತಮ್ಮಣ್ಣ ಅವರನ್ನೊಳಗೊಂಡ ತಂಡ ದಾಖಲಾತಿ ಪರಿಶೀಲಿಸಿ ಸಮರ್ಪಕ ದಾಖಲಾತಿಗಳ ಮೇಲೆ ನೋಂದಾಯಿಸಿದ ಹೆಸರನ್ನು ಮಾನ್ಯ ಮಾಡಲಾಗುತ್ತಿತ್ತು.
ಒಟ್ಟು 174 ವಧು- ವರರು ಹೆಸರು ನೋಂದಾಯಿಸಲಾಗಿತ್ತು. ಈ ಪೈಕಿ 20 ಜನ ವಧುಗಳ ಹೆಸರನ್ನು ಭಾನುವಾರ ಸಂಜೆ ತಿರಸ್ಕರಿಸಲಾಗಿತ್ತು ಮತ್ತು ಸೋಮವಾರ ಬೆಳಗ್ಗೆ ಮತ್ತೆ 3 ವಧುಗಳ ಹೆಸರನ್ನು ತಿರಸ್ಕರಿಸಲಾಗಿದೆ ಎಂದು ತಹಸೀಲ್ದಾರ್ ಪ್ರಕಾಶ ಚಿಂಚೋಳಿಕರ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ರಾಜಕೀಯ ಭಾಷಣ, ಸನ್ಮಾನ ನಂತರ ಅಕ್ಷತಾರೋಹಣ: ಬೆಳಗ್ಗೆ 10.30ಕ್ಕೆ ಧಾರ್ಮಿಕ ಕಾರ್ಯಕ್ರಮ ನಡೆಸಿ ಮಧ್ಯಾಹ್ನ 12. 25ಕ್ಕೆ 151 ಜೋಡಿಗಳಿಗೆ ಅಕ್ಷತಾರೋಹಣ ನೆರವೇರಿಸಬೇಕಾಗಿತ್ತು. ಆದರೆ, ವಿವಿಧ ಮಠಾಧೀಶರ ಮತ್ತು ರಾಜಕೀಯ ಗಣ್ಯರ ಭಾಷಣ ಮತ್ತು ಸನ್ಮಾನ ಕಾರ್ಯಕ್ರಮ ನಡೆಸಿದ ನಂತರ ಮಧ್ಯಾಹ್ನ 2. 10ಕ್ಕೆ ಅಕ್ಷತಾರೋಹಣ ನೆರವೇರಿಸಲಾಯಿತು.
ಮಧ್ಯಾಹ್ನ 12.25ಕ್ಕೆ ವಿವಾಹ ನಡೆಯಲಿದೆ ಎಂದು ಜಿಲ್ಲೆಯ ವಿವಿಧ ಗ್ರಾಮಗಳಿಂದ ಹೆಸರು ನೋಂದಾಯಿಸಿ ವಧು- ವರರು ಮತ್ತು ಅವರ ಸಂಬಂಧಿಕರು ಹಾಗೂ ಸಾವಿರಾರು ಸಾರ್ವಜನಿಕರು ಕಾದು ಸುಸ್ತಾದರು.
ಆದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ಮಧುಗಿರಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಸಾಧನೆ ಮತ್ತು ಸಮಾರಂಭ ಸಂಘಟಿಸಿದ ಹಾಲಿ ಶಾಸಕಿ ಅರುಣಾ ಪಾಟೀಲ್ ರೇವೂರ್ ಸುಪುತ್ರ ದತ್ತಾತ್ರೇಯ ಪಾಟೀಲ್ ರೇವೂರ್ ಅವರಿಗೆ ಮುಂದಿನ ಚುನಾವಣೆ ಅಭ್ಯರ್ಥಿಯಾಗಿ ಘೋಷಣೆ ಮಾಡುವ ಮೂಲಕ ವಿವಾಹ ವೇದಿಕೆ ರಾಜಕೀಯ ಭಾಷಣದ ವೇದಿಕೆಯಾಗಿ ಮಾರ್ಪಟ್ಟಿತ್ತು.
ನೂಕುನುಗ್ಗಲು, ಲಘು ಲಾಠಿ ಪ್ರಹಾರ: ಅದ್ಧೂರಿಯಾಗಿ ಆಯೋಜಿಸಿದ ಉಚಿತ ಸಾಮೂಹಿಕ ವಿವಾಹ ಸಮಾರಂಭಕ್ಕೆ ಸುಮಾರು 50 ಸಾವಿರಕ್ಕೂ ಅಧಿಕ ಜನತೆ ಆಗಮಿಸಿದ್ದರು. ಸಮಾರಂಭ ವೀಕ್ಷಿಸಲು ಜನತೆಯಲ್ಲಿ ನೂಕುನುಗ್ಗಲು ನಡೆಯಿತು. ಜನತೆಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಸಾರಿಗೆ ಬಸ್ ಬಳಕೆ: ಉಚಿತ ಸಾಮೂಹಿಕ ವಿವಾಹಕ್ಕೆ ಹೆಸರು ನೋಂದಾಯಿಸಿದ 151 ಜೋಡಿಗಳಿಗೆ ಮತ್ತು ಅವರ ಪಾಲಕರಿಗೆ ಮತ್ತು ಸಂಬಂಧಿಕರಿಗೆ ನಗರದ ಹೊರ ವಲಯದ ಕೋಟನೂರ ಮಠದಿಂದ ಸಮಾರಂಭ ನಡೆಯುವ ಸ್ಥಳಕ್ಕೆ ಕರೆ ಕರಲು ಈಶಾನ್ಯ ಸಾರಿಗೆ ಸಂಸ್ಥೆಯ ಸುಮಾರು 7 ನೃಪತುಂಗ ನಗರ ಸಾರಿಗೆ ಬಸ್ ಬಳಸಲಾಗಿತ್ತು. ನಗರದ ವಿವಿಧ ಬಡಾವಣೆಗಳಿಗೆ ಸಂಚರಿಸಬೇಕಾದ ಬಸ್ಗಳು ಬಾರದೆ ಇದ್ದುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಸಮಾರಂಭ ನಡೆಯುವ ಸುತ್ತಮುತ್ತಲಿನ ರಸ್ತೆಗಳು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಂದ್ ಮಾಡಿರುವುದರಿಂದ ವಾಹನ ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿತು.