ಯಾದಗಿರಿ: ನಾಗರ ಪಂಚಮಿ ಹಬ್ಬ ನಿಮಿತ್ತ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯುತ್ತಿವೆ.
ಸಮೀಪದ ಖಾನಾಪುರ ಗ್ರಾಮದ ಸಹೋದರರು, ಖಾನಾಪುರ ಗ್ರಾಮದಿಂದ ಯಾದಗಿರಿ ಕೇಂದ್ರ ಬಸ್ ನಿಲ್ದಾಣವರೆಗೆ(15 ಕಿ.ಮೀ.) 4 ಕ್ವಿಂಟಾಲ್ ಭಾರದ ಚಕ್ಕಡಿ ಎಳೆದು ತರುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ.
ಯಂಕಪ್ಪ ಕೊಂಚೆಟ್ಟಿ ಮತ್ತು ಲಕ್ಷ್ಮಣ ಕೊಂಚೆಟ್ಟಿ ಸಹೋದರರು ಶನಿವಾರ ಹೆದ್ದಾರಿ ಮಧ್ಯೆ ನಿಲ್ಲದೇ ಬಂಡಿ ಎಳೆದು ಸಾಹಸ ಪ್ರದರ್ಶಿಸಿದರು.
ಚಕ್ಕಡಿಗಳ ಗಾಲಿಗಳು ನಿಲ್ಲದೆ ಯಾದಗಿರಿವರೆಗೆ ಚಕ್ಕಡಿ ಎಳೆಯಬೇಕು ಎಂಬ ಷರತ್ತು ವಿಧಿಸಲಾಯಿತು. ಇದಕ್ಕೆ ಗ್ರಾಮದ ಸಹೋದರರಾದ ಯಂಕಪ್ಪ ಕೊಂಚೆಟ್ಟಿ ಮತ್ತು ಲಕ್ಷ್ಮಣ ಕೊಂಚೆಟ್ಟಿ, ಚಕ್ಕಡಿ ಎಳೆಯಲು ಮುಂದಾದರು. ಚಕ್ಕಡಿಯ ಹಿಂದೆಯೇ ಖಾನಾಪುರದ ಗ್ರಾಪಂ ಮಾಜಿ ಅಧ್ಯಕ್ಷ ಗೋವಿಂದಪ್ಪ ಕೊಂಚೆಟ್ಟಿ, ಯುವಕರಾದ ಪಾಂಡುರಂಗ ಪೂಜಾರಿ, ಮರಿಲಿಂಗ ಕೊಂಚೆಟ್ಟಿ, ಸೈದಪ್ಪ ರಂಗೈನೋರ್, ಮುನಿಯಪ್ಪ ಬರೆಗಲ್ಲ್, ನಿಂಗಪ್ಪ ಕೊಂಚೆಟ್ಟಿ, ಲಕ್ಷ್ಮಣ, ದೇವಿಂದ್ರಪ್ಪ, ಚಂದಪ್ಪ, ಭೀಮರಾವ ಮಡಿವಾಳ, ಅಯ್ಯಪ್ಪ ಆಶನಾಳ, ದೊಡ್ಡ ಮುನಿಯಪ್ಪ, ತಿಮ್ಮಣ್ಣ ಗುಂಪು ಸಹ ಹೆಜ್ಜೆ ಹಾಕಿತು.
ಯುವಕರ ಸಾಧನೆ ಮೆಚ್ಚಿ ಸ್ನೇಹಿತರು, ಸಹೋದರರಿಗೆ 5 ಸಾವಿರ ಬಹುಮಾನ ನೀಡಿ ಸನ್ಮಾನಿಸಿದರು.
--
ಗುರುಮಠಕಲ್ ಪಪಂ ಮೇಲ್ದರ್ಜೆಗೇರಿಸಿ
ಗುರುಮಠಕಲ್: 2011ರ ಜನಗಣತಿ ಪ್ರಕಾರ ಸರ್ಕಾರದ ಸುತ್ತೋಲೆಗನುಸಾರವಾಗಿ ಪ.ಪಂ.ಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಅರ್ಹತೆ ಮತ್ತು ಎಲ್ಲ ಸೌಕರ್ಯಗಳನ್ನು ಹೊಂದಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪಪಂ ಅಧ್ಯಕ್ಷೆ ರೇಣುಕಾ ಎಸ್. ಚಂದಾಪುರ ನೇತೃತ್ವದಲ್ಲಿ ಸರ್ವ ಸದಸ್ಯರ ಒಕ್ಕೂಟ ಮನವಿ ಸಲ್ಲಿಸಿತು. ಸದಸ್ಯರಾದ ರವೀಂದ್ರರೆಡ್ಡಿ, ಅಬ್ದುಲ್ ಖದೀರ್, ಪ್ರಕಾಶ ನೀರೆಟಿ, ವೀರಪ್ಪ ಪ್ಯಾಟಿ, ಚಾಂದಪಾಷ, ಮುಖ್ಯಾಧಿಕಾರಿ ಭೀಮಾಶಂಕರ ಬೆಳಮಗಿ, ಮರಲಿಂಗಪ್ಪ ಇದ್ದರು.