ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಟ್ಟುನಿಟ್ಟಿನ ಕ್ರಮಗಳ ಮಧ್ಯೆ ತುರುಸಿನ ಪ್ರಚಾರ

Srinivasa Murthy VN
Updated On : 30 Apr 2013, 11:47 am

-ಬಿ.ಕೆ. ಮಹೇಂದ್ರ
ಹಾವೇರಿ: ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮ ವಿವಿಧ ರಾಜಕೀಯ ಪಕ್ಷಗಳ ಮೇಲೆ ಕರಾಳ ಛಾಯೆ ಬೀರಿದ್ದರೂ ಬಹಿರಂಗ ಪ್ರಚಾರ ಸಭೆಗಳ 'ಕಾವು' ಮಾತ್ರ ಕಮ್ಮಿಯಾಗಿಲ್ಲ.
ವಿಧಾನಸಭೆಗೆ ಮೇ. 5ರಂದು ಜರುಗಲಿರುವ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಾರ್ಥ ಬಿಜೆಪಿ, ಕಾಂಗ್ರೆಸ್, ಕೆಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಷ್ಟ್ರೀಯ ನಾಯಕರನ್ನು ರಾಜ್ಯದ ವಿವಿಧ ಭಾಗಗಳಿಗೆ ಆಹ್ವಾನಿಸಿ ಮತದಾರ ಪ್ರಭುವಿನ ಮನವೊಲಿಸುವ ಭರ್ಜರಿ ತಯಾರಿ ನಡೆಸಿವೆ.
ಆದರೆ, ಚುನಾವಣಾ ಆಯೋಗ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮದಿಂದಾಗಿ ಭವಿಷ್ಯದ ಪ್ರಧಾನಿ ಎಂದು ಬಿಂಬಿಸಲ್ಪಟ್ಟಿರುವ ರಾಹುಲ್ ಗಾಂಧಿ, ದೇಶದ ಮಾಜಿ ಉಪಪ್ರಧಾನಿ ಲಾಲಾಕೃಷ್ಣ ಆಡ್ವಾಣಿ, ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಮತ್ತಿತರ ಗಣ್ಯಾತಿಗಣ್ಯ ನಾಯಕರು ಪ್ರಚಾರಕ್ಕೆ ಆಗಮಿಸಿದ್ದರೂ ಅದ್ಧೂರಿ ಸ್ವಾಗತವಿರಲಿ, ಕನಿಷ್ಠ ವ್ಯವಸ್ಥೆ ಮಾಡಲಾರದ ಸ್ಥಿತಿ ಆಯಾ ಪಕ್ಷಗಳ ರಾಜ್ಯ, ಸ್ಥಳೀಯ ನಾಯಕರು ಸಿಲುಕಿದ್ದಾರೆ.
ಕೇವಲ 15 ಅಡಿ: ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಹಿರಂಗ ಸಭೆಯನ್ನುದ್ದೇಶಿಸಿ ಭಾಷಣ ಮಾಡಲು ರಾಷ್ಟ್ರೀಯ ನಾಯಕರು ರಾಜ್ಯದ ವಿವಿಧ ಜಿಲ್ಲೆ, ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಆಗಮಿಸಿದ್ದ ಸಂದರ್ಭದಲ್ಲಿ 15 ಅಡಿ ಅಗಲ ಹಾಗೂ 10 ಅಡಿ ಉದ್ದದ ವೇದಿಕೆ ನಿರ್ಮಿಸಲಾಗುತ್ತಿದೆ.
ಕೇವಲ ನಾಲ್ಕಾರು ನಾಯಕರು ಆಸೀನರಾಗುವ ವ್ಯವಸ್ಥೆ ವೇದಿಕೆ ಮೇಲೆ ಮಾಡಲಾಗಿರುತ್ತದೆ. ಇದರಿಂದಾಗಿ, ಆಯಾ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೂ ಸಹ ವೇದಿಕೆ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದ ಸನ್ನಿವೇಶ ಬಹುತೇಕ ಕಡೆಗಳಲ್ಲಿ ಕಂಡು ಬರುತ್ತಿದೆ. ರಾಷ್ಟ್ರೀಯ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಕ್ಕಿತ್ತಲ್ಲ ಎಂಬ ಸಂತಸದಲ್ಲಿ ಸ್ಥಳೀಯ ಮುಖಂಡರ ಆಸೆ ಮೇಲೆ ಆಯೋಗದ ಕ್ರಮ ತಣ್ಣೀರೆರಚಿದ್ದು ಸುಳ್ಳಲ್ಲ.
ಕುಂದದ ಹುಮ್ಮಸ್ಸು: ಭಾಷಣಗಳ ಮೂಲಕ ನೆರೆದ ಜನರನ್ನು ಮಂತ್ರಮುಗ್ದಗೊಳಿಸುವ ಕಲೆ ಕರಗತ ಮಾಡಿಕೊಂಡಿರುವ ರಾಷ್ಟ್ರೀಯ ನಾಯಕರ ಭಾಷಣ ಕೇಳುವುದೆಂದರೆ ಮತದಾರರಿಗೆ ಒಂದು ರೀತಿ ಹುಮ್ಮಸ್ಸು. ಇದೇ ಕಾರಣಕ್ಕಾಗಿ ಘಟಾನುಘಟಿ ನಾಯಕರು ತಮ್ಮ ಜಿಲ್ಲೆಗೆ ಆಗಮಿಸಿ ಭಾಷಣ ಮಾಡಲಿದ್ದಾರೆ ಎಂಬ ಸುದ್ದಿ ಮೊದಲೇ ತಿಳಿದುಕೊಂಡು ಉರಿ ಬಿಸಿಲಿನ ಮಧ್ಯೆಯೂ ಜನತೆ ಭಾಷಣ ಆಲಿಸಲು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸುತ್ತಿರುವುದು ಸಾಮಾನ್ಯವಾಗಿದೆ.
ಜನತೆಯಲ್ಲಿನ ಉತ್ಸಾಹ ಪಕ್ಷಗಳ ರಾಷ್ಟ್ರೀಯ ನಾಯಕರ ವರ್ಚಸ್ಸು ಎಷ್ಟರಮಟ್ಟಿಗೆ ಇದೆ ಎಂಬುದನ್ನು ತೋರಿಸಿಕೊಡುವ ಮಾನದಂಡವಾಗಿ ಪರಿಣಮಿಸುತ್ತಿದೆ. ಅಲ್ಲದೇ, ವಿವಿಧ ಪಕ್ಷಗಳಿಂದ ಚುನಾವಣೆ ಕಣಕ್ಕಿಳಿದಿರುವ ಅಭ್ಯರ್ಥಿಗಳಲ್ಲಿ ಮತ್ತಷ್ಟು ಪ್ರಚಾರ ಕಾರ್ಯಕೈಗೊಳ್ಳಲು ಚೈತನ್ಯ ಮೂಡಿಸುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ನೀರಿಗೂ ಬರ: ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರ ಕಾರ್ಯ ನಡೆಸಿದ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗದ ಸ್ಥಿತಿಯಲ್ಲಿವೆ. ಹಿಂದಿನ ಚುನಾವಣೆಗಳಲ್ಲಿ ಬಹಿರಂಗ ಪ್ರಚಾರದ ಸಂದರ್ಭದಲ್ಲಿ ಜಮಾವಣೆಗೊಂಡಿರುವ ಜನತೆಗೆ ಫಲಾವ್ ಪ್ಯಾಕೆಟ್ ಅಥವಾ ಮತ್ತ್ಯಾವುದಾದರೂ ಉಪಹಾರವನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿತ್ತು. ಈ ವ್ಯವಸ್ಥೆ ಕಲ್ಪಿಸಿಕೊಡಲು ಸಾಧ್ಯವೇ ಇಲ್ಲವೆಂಬಂತ ಪರಿಸ್ಥಿತಿ ಇದ್ದಾಗ ಕುಡಿಯುವ ನೀರಿನ ವ್ಯವಸ್ಥೆಯಾದರೂ ಇದ್ದೇ ಇರುತ್ತಿತ್ತು.
ಆದರೆ, ಈ ಬಾರಿ ಇಂತಹ ವ್ಯವಸ್ಥೆ ಕಂಡುಬರುತ್ತಿಲ್ಲ. ಪ್ರಚಾರ ಭಾಷಣ ಆಲಿಸಲು ಜಮಾಯಿಸುವ ಜನರು, ಬಾಯಾರಿಕೆಯಿಂದಲೇ ತಮ್ಮ ನೆಚ್ಚಿನ ನಾಯಕರ ಮಾತುಗಳನ್ನಾಲಿಸಿ ಖುಷಿ ಪಡಬೇಕಾಗಿದೆ.
ಇದೆಂಥ ಸಂಹಿತೆ: ಬಹಿರಂಗ ಪ್ರಚಾರ ನಡೆಸುವ ಕಡೆ ಆಯಾ ಪಕ್ಷಗಳ ನಾಯಕರು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅಡ್ಡಿಪಡಿಸಿದರುವ ಚುನಾವಣಾ ಆಯೋಗದ ಕ್ರಮ ಬಗ್ಗೆ ಇದೆಂಥ ನೀತಿ ಸಂಹಿತೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಸಕ್ತ ಚುನಾವಣೆ ಕ್ರಮದಿಂದ ಜನರಲ್ಲಿ ಬೇಸರ ತಂದಿದ್ದು ಸುಳ್ಳಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement