ಪ್ಯಾರಾಗ್ಲೈಡರ್ ಜಾಗೃತಿ ಪರಿಣಾಮಕಾರಿ: ಉಮೇಶ
ಕನ್ನಡಪ್ರಭ ವಾರ್ತೆ, ಹಾವೇರಿ, ಏ.29
ಮತದಾರರ ಜಾಗೃತಿ ಮೂಡಿಸುವುದಕ್ಕಾಗಿ ವಿನೂತನ ಪ್ರಯೋಗವಾದ ಪ್ಯಾರಾಗ್ಲೈಡರ್ ಮೂಲಕ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ನೀಡಿರುವ ಸಂದೇಶದ ಬಿತ್ತಿಪತ್ರವನ್ನು ಗಾಳಿಯಲ್ಲಿ ಹಾರಿಬಿಡುವ ಮೂಲಕ ಸೋಮವಾರ ಚಾಲನೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಿಂದ ಸೋಮವಾರ ಸಂಜೆ ಆರಂಭವಾದ ಪ್ಯಾರಾಗ್ಲೈಡರ್ ಹಾರಾಟವು ಹಾವೇರಿ ಸುತ್ತಲಿನ ವ್ಯಾಪ್ತಿ ಪ್ರದೇಶದ ಮೇಲೆ ಹಾರಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ನಗರದ ಪ್ರಮುಖ ರಸ್ತೆಗಳ ಮೇಲೆ ಬೀಳಿಸಿದರು.
ಮತದಾರರಲ್ಲಿ ಜಾಗೃತಿ ಮೂಡಿಸುವ ಬೃಹತ್ ಬ್ಯಾನರ್ನ್ನು ಪ್ಯಾರಾಗ್ಲೈಡರ್ಗೆ ಅಳವಡಿಸಲಾಗಿದ್ದು, ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಮೂರು ಚಕ್ರಗಳನ್ನು ಒಳಗೊಂಡ ಸೈಕಲ್ ಮಾದರಿ ವಾಹನ ಹಾಗೂ ಅದರ ಮೇಲಿಂದ ಪ್ಯಾರಾಚೂಟನ್ನು ಒಳಗೊಂಡ ಪ್ಯಾರಾಗ್ಲೈಡಿಂಗ್ 450 ಕೆಜಿ ಭಾರವನ್ನು ಹೊಂದಿದೆ. ಪ್ಯಾರಾಗ್ಲೈಡಿಂಗ್ ಆಗಸದಲ್ಲಿ ಸತತ 8 ಗಂಟೆಗಳ ಕಾಲ ಹಾರುವ ಸಾಮರ್ಥ್ಯ ಹೊಂದಿದ್ದು, ನೆಲದಿಂದ ಐದು ಅಡಿಯಿಂದ 18 ಸಾವಿರ ಅಡಿ ಎತ್ತರದವರೆಗೆ ಹಾರಬಲ್ಲದು. ಮತದಾರರಲ್ಲಿ ಜಾಗೃತಿ ಮೂಡಿಸಲು ಎಲ್ಲಾ ಮಾಧ್ಯಮಗಳನ್ನು ಬಳಸಲಾಗುತ್ತಿದ್ದು, ಅದಕ್ಕೆ ಪ್ಯಾರಾಗ್ಲೈಡಿಂಗ್ ಹೊಸ ಸೇರ್ಪಡೆಯಾಗಿದೆ. ಸಾರ್ವಜನಿಕರು ಕುತೂಹಲದಿಂದ ಪ್ಯಾರಾಗ್ಲೈಡರ್ ಹಾರಾಟವನ್ನು ವೀಕ್ಷಿಸಿದರು.
ಹಾವೇರಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಉಮೇಶ ಕುಸುಗಲ್ಲ ಮಾತನಾಡಿ, ಬರುವ ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ಯಾರಾಗ್ಲೈಡರ್ ಹೊಸ ಪ್ರಯೋಗವಾಗಿದ್ದು, ಜಾಗೃತಿ ಮೂಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಮೇ 5ರಂದು ನಡೆಯುವ ಚುನಾವಣೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿಕೊಂಡರು.
ಅಪರ ಜಿಲ್ಲಾಧಿಕಾರಿ ಜಿ. ಜಗದೀಶ, ಹಾವೇರಿ ಉಪ ವಿಭಾಗಾಧಿಕಾರಿ ಕೆ. ಚನ್ನಬಸಪ್ಪ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಮಹಮ್ಮದ್ ಜುಬೇರ, ಪರೀಕ್ಷಾರ್ಥಿ ಉಪ ವಿಭಾಗಾಧಿಕಾರಿ ಸತೀಶಕುಮಾರ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಶಿವಪುತ್ರಪ್ಪ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೆ. ಮುತ್ತು ಕಾಮಾಚ್ಚಿ, ಚುನಾವಣಾ ಶಾಖೆ ತಹಸೀಲ್ದಾರ್ ಪಾಟೀಲ್, ಜಿಪಂ ಸಹಾಯಕ ಕಾರ್ಯದರ್ಶಿ ಸಿದ್ದನಗೌಡರ್ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.
ಇಂದು ಪ್ಯಾರಾಗ್ಲೈಡರ್ ಹಾರಾಟ: ಮತದಾರರ ಜಾಗೃತಿ ಕಾರ್ಯಕ್ರಮಕ್ಕಾಗಿ ಆಯೋಜಿಸಲಾಗಿದ್ದ ಯಂತ್ರಚಾಲಿತ ಪ್ಯಾರಾಗ್ಲೈಡಿಂಗ್ ಏ. 29ರಂದು ತಾಂತ್ರಿಕ ಕಾರಣ, ಸೂಕ್ತ ಹವಾಮಾನದ ಕೊರತೆಯಿಂದಾಗಿ ಹಾವೇರಿಯಲ್ಲಿ ಹಾರಾಟವನ್ನು ಅಲ್ಪ ಪ್ರಮಾಣದಲ್ಲಿ ನಡೆಸಿದ್ದು, ಏ. 30ರಂದು ಬೆಳಗ್ಗೆ ಹಾವೇರಿ ಜಿಲ್ಲಾ ಕ್ರೀಡಾಂಗಣದಿಂದ ಹಾರಾಟ ಆರಂಭಿಸಿ ನಗರದ ಸುತ್ತ ಮತದಾರರ ಜಾಗೃತಿಯ ಸಂದೇಶ ಪತ್ರಗಳನ್ನು ಗಾಳಿಯಲ್ಲಿ ಹಾರಿಬಿಡಲಿದೆ.