ಬಿಜೆಪಿ ಭ್ರಷ್ಟಾಚಾರ ವಿಚಾರಣೆಗೆ ವಿಶೇಷ ನ್ಯಾಯಾಲಯ
ರಾಣಿಬೆನ್ನೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 5 ವರ್ಷಗಳ ರಾಜ್ಯವನ್ನಾಳುವ ಸಮಯದಲ್ಲಿ ಬಿಜೆಪಿ ಮತ್ತು ಈಗಿನ ಕೆಜೆಪಿಯಲ್ಲಿರುವ ನಾಯಕರು ನಡೆಸಿರುವ ಎಲ್ಲಾ ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲು ವಿಶೇಷ ನ್ಯಾಯಾಲಯವನ್ನು ತೆರೆದು ವಿಚಾರಣೆ ನಡೆಸಿ, ತಪ್ಪಿತಸ್ಧರೆಂದು ಸಾಭಿತಾದ ನಂತರ ಅವರನ್ನು ಜೈಲಿಗೆ ಹಾಕುತ್ತೆವೆ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಏರ್ಪಡಿಸಿದ್ದ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಾಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ನಾಯಕರು ತಮ್ಮ ಸ್ವಾರ್ಥ ಸಾಧನೆಗಳ ಈಡೇರಿಕೆಗಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರು ಎಂದು ದೂರಿದರು.
ಬಿಜೆಪಿ ನಾಯಕರು ಅಭಿವೃದ್ಧಿ ಕುರಿತು ಚಿಂತನೆ ಮಾಡುವ ಬದಲು, ವಿಧಾನಸೌಧದಲ್ಲಿ ನೀಲಿ ಚಿತ್ರ ವೀಕ್ಷಿಸಿದರು. ರಾಜ್ಯದ ಖನಿಜ ಸಂಪತ್ತನ್ನು ಲೂಟಿ ಮಾಡಿ ಜೈಲು ಸೇರಿ ಹೊರಬಂದು ಕೆಜೆಪಿ ಕಟ್ಟಿಕೊಂಡಿರುವ ಯಡಿಯೂರಪ್ಪನಿಂದಾಗಲಿ, ಬಿಜೆಪಿಯಲ್ಲಿ ಉಳಿದಿರುವವರಿಂದಾಗಲಿ ರಾಜ್ಯ ಅಭಿವೃದ್ಧಿ ಸಾಧ್ಯವಿಲ್ಲ ಎಂದ ಅವರು, ವಿಧಾನಸೌಧದಲ್ಲಿ ನೀಲಿ ಚಿತ್ರ ವೀಕ್ಷಣೆ, ಮಿತ್ರನ ಹೆಂಡತಿಯ ಶೀಲ ಹಾಳು ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಪಕ್ಷವಿಂದು ಒಡೆದು ಬಿಜೆಪಿ, ಕೆಜೆಪಿ, ಬಿಎಸ್ಆರ್ ಎಂಬ 3 ಪಕ್ಷಗಳಾಗಿವೆ. ಈ ಮೂರು ಪಕ್ಷಗಳ ನಾಯಕರೆಲ್ಲಾ ರಾಜ್ಯವನ್ನು ಲೂಟಿ ಮಾಡಿದವರ ಪಟ್ಟಿಯಲ್ಲಿದ್ದಾರೆ. ಜೆಡಿಎಸ್ ರಾಜ್ಯದ 5 ರಿಂದ 6 ಜಿಲ್ಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಪಕ್ಷವಾಗಿದೆ. ಆದ ಕಾರಣ ಮತದಾರರು ಇವರಿಗೆಲ್ಲಾ ಮತ ನೀಡುವುದಕ್ಕಿಂತ ಮುನ್ನ ಯೋಚಿಸಿ ಕಾಂಗ್ರೆಸ್ಗೆ ಮತ ನೀಡಿ ಎಂದು ಮನವಿ ಮಾಡಿಕೊಂಡ ಅವರು, ರಾಣಿಬೆನ್ನೂರು ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಕೆ.ಬಿ. ಕೋಳಿವಾಡರಿಗೆ ಮತ ನೀಡಬೇಕೆಂದು ವಿನಂತಿಸಿದರು. ಅಭ್ಯರ್ಥಿ ಮಾಜಿ ಸಚಿವ ಕೆ.ಬಿ.ಕೋಳಿವಾಡ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಕೆಪಿಸಿಸಿ ರಾಜ್ಯ ಮಹಿಳಾ ಕಾರ್ಯದರ್ಶಿ ರುಕ್ಮಿಣಿ ಸಾಹುಕಾರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಕಂಬಳಿ, ನಗರಾಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ಚಂದ್ರಪ್ಪ ಬೇಡರ, ರವಿಂದ್ರಗೌಡ ಎಫ್. ಪಾಟೀಲ, ಎನ್.ಎಂ. ಕುಸಗೋರು, ಶಶಿಧರ ಬಸೆನಾಯ್ಕರ, ರತ್ನಾ ಪುನೀತ, ಶರಿನತಾಜೆ ಶೇಖ, ಬಿಬಿಜಾನ ನಂದ್ಯಾಲ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದಾಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.