ಮಹಿಳೆ ಅಭಿವೃದ್ಧಿಗೆ ಶ್ರಮಿಸಿದ ಬಿಜೆಪಿ
ಶಿಗ್ಗಾಂವಿ: ರಾಜ್ಯದಲ್ಲಿ ಅಲ್ಪಾವಧಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಮಹಿಳಾ ಪರ ಅಭಿವೃದ್ಧಿ ಯೋಜನೆಗೆ ಸಾಕಷ್ಟು ಆದ್ಯತೆ ನೀಡಿದೆ. ಅದರಿಂದ ಇಂದು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ಎಂದು ಚನ್ನಮ್ಮಾ ಬೊಮ್ಮಾಯಿ ಹೇಳಿದರು. ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಪರ ಪಾದಯಾತ್ರೆ ಮೂಲಕ ಮನೆ-ಮನೆಗೆ ತೆರಳಿ ಮತಯಾಚನೆ ನಡೆಸಿದ ನಂತರ ಮಾತನಾಡಿದರು. ಮಹಿಳಾ ಶಿಕ್ಷಣ, ಉದ್ಯೋಗ ಹಾಗೂ ಮಹಿಳಾ ಸ್ತ್ರೀ-ಶಕ್ತಿ ಸ್ವ ಸಹಾಯ ಸಂಘಗಳಿಗೆ ಸಾಲ ಸೌಲಭ್ಯ, ಗ್ರಾಮೀಣ ಹೈನುಗಾರಿಕೆ ಉತ್ತೇಜನ ನೀಡುವ ಉದೇಶದಿಂದ ಪ್ರತಿ ಲೀಟರ್ಗೆ ರು. 2ಗಳ ಪ್ರೋತ್ಸಾಹ ಧನ, ಸಂಧ್ಯಾ ಸುರಕ್ಷತೆ, ಮಹಿಳಾ ಕಲ್ಯಾಣಕ್ಕಾಗಿ ಭಾಗ್ಯಲಕ್ಷ್ಮೀ ರು. 2 ಲಕ್ಷಕ್ಕೆ ಏರಿಕೆ. ಗೃಹ ಕಸಬುಗಳಿಗೆ ಸಹಾಯಧನ. ಮಹಿಳಾ ಸಂಘಗಳಿಗೆ ವಿಮಾ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದೆ. ಆದ್ದರಿಂದ ಮಹಿಳೆಯರು ಇಂದು ಸಂಪೂರ್ಣ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಪುರಸಭೆ ಅಧ್ಯಕ್ಷೆ ಚಂದ್ರಕಲಾ ವನಹಳ್ಳಿ, ತಾಲೂಕು ಪಂಚಾಯ್ತಿ ಅಧ್ಯಕ್ಷತೆ ಉಷಾ ಬಿಳಿಕುದರಿ, ತಾಪಂ ಸದಸ್ಯೆ ಶಾಂತಮ್ಮಾ ಬೊಮ್ಮಹಳ್ಳಿ, ಪುರಸಭೆ ಸದಸ್ಯರಾದ ಎನ್.ವಿ. ಪದ್ಮಾ, ಯ್ಲಲಮ್ಮಾ ಈರಪ್ಪನವರ, ಸುನೀತಾ ಬೇಟಗೇರಿ, ಲಕ್ಷ್ಮೀ ವೆಂಕಣ್ಣನವರ, ಹೊನ್ನಪ್ಪ ಹೂಗಾರ, ಸಂಗಪ್ಪ ಹರವಿ, ಮಹೇಶ ಕೋತಂಬ್ರಿ, ಚನ್ನಪ್ಪ ಹಳವಳ್ಳಿ, ಮಾಲತೇಶ ಬಾಬುಸಿಂಗ್ನವರ, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ನಾರಾಯಣಪುರ, ಮುಖಂಡರಾದ ಸತೀಶ ವನಹಳ್ಳಿ ಶಿವಾನಂದ ಬಿಳಿಕುದರಿ ಮತ್ತಿತರರು ಉಪಸ್ಥಿತರಿದ್ದರು.
ಹಿರೇಕೆರೂರು ಅಭಿವೃದ್ಧಿಗೆ 'ಕೈ'ಗೆ ಮತ ನೀಡಿ
ಹಿರೇಕೆರೂರು: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಶಾಸಕ ಬಿ.ಸಿ. ಪಾಟೀಲ್ಗೆ ತಮ್ಮ ಅಮೂಲ್ಯ ಮತ ನೀಡುವ ಮೂಲಕ ಆಶೀರ್ವದಿಸಬೇಕೆಂದು ರಟ್ಟಿಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯ ಶಂಭಣ್ಣ ಗೂಳಪ್ಪನವರ ಮನವಿ ಮಾಡಿದರು. ತಾಲೂಕಿನ ರಟ್ಟಿಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಹಿರೇಕೆರೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಬಿ.ಸಿ. ಪಾಟೀಲ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿ.ಸಿ. ಪಾಟೀಲ್ ಶಾಸಕರಾಗಿ ತಾಲೂಕಿನ ಸರ್ವ ಜನಾಂಗದವರ ಬಗ್ಗೆ ವಿಶೇಷ ಕೆಲಸಗಳನ್ನು ಮಾಡಿದ್ದಾರೆ. ಅವರು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತ ನೀಡಿ ಆಯ್ಕೆ ಮಾಡಿ ಎಂದರು. ಪುಟ್ಟನಗೌಡ ಪಾಟೀಲ, ರಾಮಣ್ಣ ವಾಲ್ಮೀಕಿ, ಶಿವು ದ್ಯಾವಕ್ಕಳವರ ಇದ್ದರು.