ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಆಟೋ ಪಲ್ಟಿ: ಸಾವು

Srinivasa Murthy VN
Updated On : 17 Feb 2013, 2:48 am

ಹಾವೇರಿ: ನೋಂದಣಿಯಾಗದ ಹೊಸ ಆಟೋವೊಂದನ್ನು ನಿರ್ಲಕ್ಷ್ಯ ಹಾಗೂ ವೇಗವಾಗಿ ಚಾಲನೆ ಮಾಡಿ  ನಿಯಂತ್ರಿಸಲಾಗದೇ ತಿರುವಿನಲ್ಲಿ ಆಟೋ ಉರುಳಿ ಬಿದ್ದ ಪರಿಣಾಮ ಆಟೋದಲ್ಲಿದ್ದ 4 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟು, ಆಟೋ ಚಾಲಕ ನಾಪತ್ತೆಯಾದ ಘಟನೆ ಹಿರೇಕೆರೂರು ತಾಲೂಕು ರಟ್ಟಿಹಳ್ಳಿ ಬ್ಯಾಡಗಿ ರಸ್ತೆಯಲ್ಲಿ ಜರುಗಿದೆ. ಮೃತ ಬಾಲಕಿಯನ್ನು ಐಶ್ವರ್ಯ ಚಂದ್ರಪ್ಪ ಲಮಾಣಿ (4) ಎಂದು ಗುರುತಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿ ನಿಂಗರಾಜ ದೇವಲೆಪ್ಪ ಲಮಾಣಿ ವಿರುದ್ಧ ದಿಳ್ಳೇಪ್ಪ ಕರಿಯಪ್ಪ ಗೌಡಗೇರಿ ಅಲಿಯಾಸ್ ಲಮಾಣಿ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಆಟೋ ಡಿಕ್ಕಿ: ಗಾಯ
ಹಾವೇರಿ: ಪ್ರಯಾಣಿಕರ ಆಟೋವನ್ನು ನಿರ್ಲಕ್ಷ್ಯದಿಂದ ಚಾಲನೆ ಮಾಡಿ ಮೈಲಿಗಲ್ಲಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡ ಘಟನೆ ರಾಣಿಬೆನ್ನೂರು ತಾಲೂಕು ಮೆಡ್ಲೇರಿಯಲ್ಲಿ ಜರುಗಿದೆ. ಈ ಕುರಿತಂತೆ ದಿಳ್ಳೆಪ್ಪ ಈರಪ್ಪ ಅಣ್ಣೇರ ವಿರುದ್ಧ ದಿಳ್ಳೆಪ್ಪ ಹುಚ್ಚಪ್ಪ ಬಡಪ್ಪಳವರ ರಾಣಿಬೆನ್ನೂರು ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.

ಅಪಘಾತ: 4ಜನ ಗಾಯ
ಹಾವೇರಿ: ನಿರ್ಲಕ್ಷ್ಯದಿಂದ ಟಿಪ್ಪರ್ ಚಾಲನೆ ಮಾಡಿ ಬ್ರಿಡ್ಜ್ ಮೇಲೆ ಸಾಗುತ್ತಿದ್ದ ಕಾರು ಕೆಳಕ್ಕೆ ಬೀಳುವಂತೆ ಮಾಡಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ತೀವ್ರ ಗಾಯಗೊಂಡ ಘಟನೆ ರಾಣಿಬೆನ್ನೂರಿನ ಛತ್ರದ ಬಳಿ ಜರುಗಿದೆ. ಗಾಯಗೊಂಡವರನ್ನು ವಿಜಯಲಕ್ಷ್ಮಿ ಚುಟೇಶ್ವರರಾವ್, ಸುಮಾ ಶ್ರೀನಿವಾಸರಾವ್, ನವ್ಯಾ ರಾಮಕೃಷ್ಣ, ಶ್ರೀನಿವಾಸರಾವ್ ಧರ್ಮಯ್ಯ ಎಂದು ಗುರುತಿಸಲಾಗಿದೆ. ಈ ಕುರಿತಂತೆ ಟಿಪ್ಪರ್ ಚಾಲಕ ರಾಜಕುಮಾರ ಯಮನಪ್ಪ ರಾಠೋಡ ವಿರುದ್ಧ ಉದಯಕಲ್ಯಾಣ ಶ್ರೀನಿವಾಸರಾವ್ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಶಾರ್ಟ್ ಸರ್ಕ್ಯೂಟ್: ನಷ್ಟ
ಹಾವೇರಿ: ಶಾರ್ಟ್ ಸರ್ಕ್ಯೂಟ್ನಿಂದಾಗಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ರು. 1.10 ಲಕ್ಷ ಮೌಲ್ಯದ ಕಿರಾಣಿ ಸಾಮಗ್ರಿ ಸುಟ್ಟು ಭಸ್ಮವಾದ ಘಟನೆ ಶಿಗ್ಗಾಂವಿ ತಾಲೂಕು ದುಂಡಸಿ ಗ್ರಾಮದಲ್ಲಿ ಜರುಗಿದೆ. ದಿನಸಿ ಅಂಗಡಿ ದಾದಾಪೀರ ಅಲ್ಲಿಸಾಬ ಶೇಖಅಲಿಗೆ ಸೇರಿತ್ತೆನ್ನಲಾಗಿದೆ. ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅಂಗಡಿಯಲ್ಲಿದ್ದ ಅಕ್ಕಿ, ಬೇಳೆ, ಬೆಲ್ಲ, ಸಕ್ಕರೆ ಇತ್ಯಾದಿ ಕಿರಾಣಿ ಸಾಮಾನುಗಳು ಸುಟ್ಟು ಕರಕಲಾಗಿವೆ. ಈ ಕುರಿತಂತೆ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನ ಕೊಡಿಸುವುದಾಗಿ ನಂಬಿಸಿ ಮೋಸ: ದೂರು
ಹಾವೇರಿ: ಬಂಗಾರ ಕೊಡಿಸುವುದಾಗಿ ಹೇಳಿ ನಕಲಿ ಬಂಗಾರ ಕೊಡಿಸಿ ರು. 2.30 ಲಕ್ಷ ಮೋಸವೆಸಗಿದ ಘಟನೆ ಹಾವೇರಿ ಶಹರದಲ್ಲಿ ಜರುಗಿದೆ. ಈ ಕುರಿತಂತೆ ಮೋಸ ಮಾಡಿದ ವ್ಯಕ್ತಿ ಹಾವೇರಿ ತಾಲೂಕಿನ ಹೊಸಳ್ಳಿ ಗ್ರಾಮದ ರಾಘು ಹಾಗೂ ಇತರ ಇಬ್ಬರ ವಿರುದ್ಧ ಮೋಸ ಹೋದ ವ್ಯಕ್ತಿ ಚಂದ್ರಶೇಖರ ನಾಯ್ಡು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಟೇಲರಿಂಗ್ ಕಲಿಕೆಗೆ ಹೋದ ಯುವತಿ ಕಾಣೆ
ಹಾವೇರಿ: ಟೇಲರಿಂಗ್ ಕಲಿಯಲೆಂದು ಮನೆಯಿಂದ ಹೊರಹೋದ ಯುವತಿಯೋರ್ವಳು ತಿರುಗಿ ಮನೆಗೆ ಬಾರದೇ ನಾಪತ್ತೆಯಾದ ಘಟನೆ ಹಾನಗಲ್ಲ ತಾಲೂಕಿನ ಗೆಜ್ಜಿಹಳ್ಳಿಯಲ್ಲಿ ಜರುಗಿದೆ. ಕಾಣೆಯಾದ ಯುವತಿಯನ್ನು ಶಿಲ್ಪಾ ತಿಪ್ಪಣ್ಣ ಮಲಗುಂದ (17) ಎಂದು ಗುರುತಿಸಲಾಗಿದೆ. ಈಕೆ ಹಾನಗಲ್ಲಿನ ಕಮಾಟಗೇರಿ ಓಣಿಯ ಶೈಲಾ ಸಂಗೂರು ಅವರ ಬಳಿ ಟೇಲರಿಂಗ್ ಕಲಿಯಲು ಹೋಗುತ್ತೇನೆಂದು ಹೇಳಿ ಹೋದವಳು ತಿರುಗಿ ಬಾರದೇ ಕಾಣೆಯಾಗಿದ್ದಾಳೆ ಎಂದು ಅವಳ ತಾಯಿ ಶಿವಲಿಂಗವ್ವ ಹಾನಗಲ್ಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ.
ಕಾಣೆಯಾದವಳ ಚಹರೆ: 4.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿಗೆಂಪು ಬಣ್ಣ, ದುಂಡು ಮುಖ, ಬಲಗಡೆ ಮುಂದೆಲೆಯ ಮೇಲೆ ಹಳೆ ಸುಟ್ಟ ಕಲೆ ಇದೆ. ಕನ್ನಡ ಓದಲು ಮತ್ತು ಬರೆಯಲು ಬರುತ್ತದೆ. ಮನೆಯಿಂದ ಹೋದಾಗ ಚಾಕಲೇಟ ಬಣ್ಣದ ಚೂಡಿದಾರ ಧರಿಸಿದ್ದಳು. ಯುವತಿ ಪತ್ತೆಯಾದಲ್ಲಿ ಹಾನಗಲ್ಲ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಪ್ರಸನ್ನ ವಿಷ್ಣು ಪಾಸ್ತೆ ನಿಧನ
ಹಾವೇರಿ: ರಾಣಿಬೆನ್ನೂರು ನಗರದ ಅಂಚೆ ಕಚೇರಿ ಹಿಂಭಾಗದ ನಿವಾಸಿ ಪ್ರಸನ್ನ (ಪಿಂಕಿ) ವಿಷ್ಣು ಪಾಸ್ತೆ (36) ಶನಿವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಗಳು ಇದ್ದಾರೆ.

ಇಂದು ಕಲಾವಿದ ಬಾಳಿಕಾಯಿ ಜತೆ ಸಂವಾದ
ಹಾವೇರಿ: ಪ್ರಸಕ್ತ ತಿಂಗಳು ಸಾಧಕರೊಬ್ಬರನ್ನು ಕರೆಯಿಸಿ ಅವರ ಸಾಧನೆಯ ಪ್ರೇರಣೆಗಳನ್ನು ಚರ್ಚಿಸುವ ತಿಂಗಳ ಸಂವಾದದಲ್ಲಿ ಈ ಬಾರಿ ನಾಡಿನ ಹಿರಿಯ ಚಿತ್ರ ಕಲಾವಿದ, ಲಲಿತಕಲಾ ಅಕಾಡೆಮಿ ಸದಸ್ಯ ಎಂ.ಆರ್. ಬಾಳಿಕಾಯಿ ಪಾಲ್ಗೊಳ್ಳಲಿದ್ದು, ಅವರೊಂದಿಗೆ ಸಂವಾದ ಹಾಗೂ ಅವರ ಕುಂಚದಿಂದ ಮೂಡಿದ ಚಿತ್ರಗಳ ಪ್ರಾತ್ಯಕ್ಷಿಕೆ ಜರುಗಲಿದೆ. ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಫೆ. 17ರಂದು ಸಂಜೆ 6 ಗಂಟೆಗೆ ಸಂವಾದ ಜರುಗಲಿದೆ. ಅಧ್ಯಕ್ಷತೆಯನ್ನು ಹಿರಿಯ ಕಲಾವಿದ, ರಾಕ್ ಗಾರ್ಡನ್ ರೂವಾರಿ ಟಿ.ಬಿ. ಸೊಲಬ್ಬಕ್ಕನವರ ವಹಿಸುವರು. ಸಂವಾದಕ್ಕೆ ಆಸಕ್ತರು ಆಗಮಿಸಬೇಕೆಂದು ಸಾಹಿತಿಗಳು ಮತ್ತು ಕಲಾವಿದರ ಬಳಗ ಮನವಿ ಮಾಡಿದೆ.

ರಾಣಿಬೆನ್ನೂರು: ನಾಳೆಯಿಂದ ಎನ್ನೆಸ್ಸೆಸ್ಸ್ ಶಿಬಿರ
ರಾಣಿಬೆನ್ನೂರು: ಇಲ್ಲಿನ ಕೆಎಲ್ಇ ಶಿಕ್ಷಣ ಸಂಸ್ಧೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ 2012-13ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ತಾಲೂಕಿನ ದೇವಗೊಂಡನಕಟ್ಟಿ ಗ್ರಾಮದಲ್ಲಿ ಫೆ. 18ರಿಂದ 24ರ ವರೆಗೆ ನಡೆಸಲಾಗುವುದು. ಫೆ. 18ರಂದು ಸಂಜೆ 5.30ಕ್ಕೆ ದೇವಗೋಂಡನಕಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶಿಬಿರದ ಉದ್ಘಾಟನೆ ಜರುಗಲಿದೆ. ಕಮದೋಡ ಗ್ರಾಪಂ ಅಧ್ಯಕ್ಷೆ ಬಸಮ್ಮ ಫಕ್ಕಿರಪ್ಪ ಗುತ್ತಲ ಅಧ್ಯಕ್ಷತೆ ವಹಿಸುವರು. ಸಂಸ್ಥೆ ಸ್ಧಾನಿಕ ಆಡಳಿತ ಮಂಡಳಿ ಅಧ್ಯಕ್ಷ ವಿ.ಪಿ. ಲಿಂಗನಗೌಡ್ರ ಉದ್ಘಾಟಿಸುವರು. ಜಗದೀಶ ಹನಗೋಡಿಮಠ, ಸದಸ್ಯ ಜಿ.ಸಿ. ಹುಲ್ಮನಿ, ಬಿ.ಎಸ್. ಪಟ್ಟಣಶೆಟ್ಟಿ, ಈರಣ್ಣ ಅಂಗಡಿ, ಪತ್ರಕರ್ತ ನಾಗರಾಜ, ತಾಪಂ ಸದಸ್ಯೆ ಚನ್ನಬಸಮ್ಮ ಗೌಡ್ರ, ದೇವಸ್ಧಾನ ಕಮಿಟಿ ಸದಸ್ಯ ಮಹದೇವಪ್ಪ ಅಂಗಡಿ, ಹುಚ್ಚಪ್ಪ ಗುಗ್ಗರಿ, ಸೋಮನಗೌಡ ಪಾಟೀಲ, ಬಸಪ್ಪ ಗುಗ್ಗರಿ, ಬಸವರಾಜ ಹರವಿಶೆಟ್ಟರ, ಇತರರು ಆಗಮಿಸುವರು.

ಇಂದು ಮೌನೇಶ್ವರ ಶ್ರೀಗಳ ಮಹೋತ್ಸವ
ರಾಣಿಬೆನ್ನೂರು: ನಗರದ ಕುರುಬಗೇರಿ ಕ್ರಾಸ್ ಹತ್ತಿರವಿರುವ ಮೌನೇಶ್ವರ ದೇವಸ್ಧಾನದಲ್ಲಿ ಫೆ. 17ರಂದು ಮುಂಜಾನೆ 10ಕ್ಕೆ ಮೌನೇಶ್ವರ ಶ್ರೀಗಳ ಮಹೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹಾಸನದ ಸುಜ್ಞಾನಪ್ರಭು ಪೀಠದ ಶಿವಸುಜ್ಞಾನತೀರ್ಥ ಶ್ರೀಗಳು ಸಾನ್ನಿಧ್ಯ ವಹಿಸುವರು. ಅಂತರವಳ್ಳಿ ಗ್ರಾಮದ ಮೂರುಜಾವಧೀಶ್ವರ ಮಠದ ನಿರಂಜನ ಶ್ರೀಗಳು, ಮಾಜಿ ಶಾಸಕ ಜಿ. ಶಿವಣ್ಣ, ಮಾಜಿ ಸಚಿವ ಕೆ.ಬಿ. ಕೋಳಿವಾಡ, ಕೈಗಾರಿಕಾ ವಿಸ್ತರಣಾಧಿಕಾರಿ ಶಿವಾನಂದ ಕಮ್ಮಾರ, ವಿಶ್ವಕರ್ಮ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹನುಮಂತಾಚಾರ ಅರ್ಕಾಚಾರ, ಬಸವರಾಜ ಬಡಿಗೇರ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ಹಾನಗಲ್ ಪುರಸಭೆ ಆಡಳಿತಾಧಿಕಾರಿ ಆಯ್ಕೆ
ಹಾನಗಲ್ಲ: ಸ್ಥಳೀಯ ಸಂಸ್ಥೆಗಳ ಸದಸ್ಯರ ಆಡಳಿತಾವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಶುಕ್ರವಾರ ಹಾನಗಲ್ಲ ಪುರಸಭೆಯ ಆಡಳಿತಾಧಿಕಾರಿಯಾಗಿ ಸವಣೂರು ಉಪವಿಭಾಗಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅಧಿಕಾರ ವಹಿಸಿಕೊಂಡರು. ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಎ. ರಮೇಶ, ಎಂಜಿನಿಯರ್ ನಾಗರಾಜ ಮಿರ್ಜಿ, ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ, ಆರೋಗ್ಯ ನಿರೀಕ್ಷಕ ಎಂ.ಎ. ಚೂಡಿಗಾರ ಮತ್ತಿತರರು ಹಾಜರಿದ್ದರು.

ಎನ್ಟಿಟಿಎಫ್ ವಿದ್ಯಾರ್ಥಿ ನೇಣಿಗೆ ಶರಣು
ಹಾವೇರಿ: ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯೊಬ್ಬ ಮನನೊಂದು ವಸತಿ ನಿಲಯದಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ನಡೆದಿದೆ. ನಗರದ ಎನ್ಟಿಟಿಎಫ್ ಕಾಲೇಜಿನ ವಿದ್ಯಾರ್ಥಿ, ಮೂಲತ ಹಾವೇರಿ ಜಿಲ್ಲೆಯ ಅಕ್ಕಿಹಾಲೂರಿನ ರಾಕೇಶ್ ಮನೋಹರ ಹೆಬ್ಬಾಳ(17) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ತಾನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿಷಯ ಮನೆಯಲ್ಲಿ ಗೊತ್ತಾದರೆ ತಂದೆ ಆಘಾತಗೊಳ್ಳುತ್ತಾರೆಂದು ಭಾವಿಸಿದ ರಾಕೇಶ್ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement