ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗುಣಮಟ್ಟ ಶಿಕ್ಷಣದಿಂದ ಯುವಕರನ್ನು ಮುನ್ನಡೆಸಿ

Srinivasa Murthy VN
Updated On : 17 Feb 2013, 2:48 am

ಹಾನಗಲ್ಲ: ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಯುವಕರನ್ನು ಸರಿದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಎಲ್ಲ ಹಂತದ ಶಿಕ್ಷಕರು ಹೊರಬೇಕಾಗಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಕರೆ ನೀಡಿದರು.
ಹಾನಗಲ್ಲಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದಿಂದ ದೇಶ ಉನ್ನತಿ: ಮನುಷ್ಯನು ಗುಣ-ಸ್ವಭಾವದ ಮೂಲಕ ದೊಡ್ಡವನಾಗಬೇಕು. ಕ್ರಿಯಾಶೀಲತೆ ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ನಾವು ನಮ್ಮ ಜವಾಬ್ದಾರಿ ಅರಿತು ನಡೆಯುವುದು ಮುಖ್ಯ. ಶೈಕ್ಷಣಿಕ ಉನ್ನತಿಯೇ ದೇಶದ ಉನ್ನತಿ ಹಾಗೂ ಅಭಿವೃದ್ಧಿ. ಒಂದು ಕಾಲದಲ್ಲಿ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತವಾಗುವ ಸಂದರ್ಭಗಳೇ ಹೆಚ್ಚಾಗಿರುತ್ತಿದ್ದವು.
ನಾಡಿ, ನುಡಿ ಅಭಿಮಾನವಿರಲಿ: ಆದರೀಗ ಸುಲಭವಾಗಿ ಶಿಕ್ಷಣ ಸಿಗುವಂತೆ ಗ್ರಾಮೀಣ ಪರಿಸರದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಸೇವೆ ಸಲ್ಲಿಸುತ್ತಿವೆ. ಇದರ ಸದುಪಯೋಗಕ್ಕೆ ಮುಂದಾಗುವಂತೆ ಕರೆ ನೀಡಿದ ಅವರು, ನಾಡು ನುಡಿ ಅಭಿಮಾನ ಬೆಳೆಸಿಕೊಳ್ಳಿ ಎಂದರು.
ಹರಿಹರದ ಜಾನಪದ ವಿದ್ವಾಂಸ ಪ್ರೊ. ಲಿಂಗರಾಜ ಕಮ್ಮಾರ ಮಾತನಾಡಿ, ಹೆತ್ತವರಿಗೆ ಮಕ್ಕಳ ಕಾಳಜಿ ಬೇಕಾಗಿದೆ ಎಂದರು.
ಬದುಕು ಅರಳಲಿ: ಶಿಗ್ಗಾಂವಿಯ ಚನ್ನಪ್ಪ ಕುನ್ನೂರ ಕಾಲೇಜು ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಸಾಹಿತ್ಯ-ಸಂಸ್ಕೃತಿ ನಮ್ಮ ಬದುಕಿನ ನಡೆ ನಿರ್ಧರಿಸುತ್ತದೆ. ನಾಳಿನ ಬದುಕಿಗಾಗಿ ಓದು ಮಾತ್ರವಲ್ಲ ಕ್ರಿಯಾಶೀಲತೆ ಮೈಗೂಡಿಸಿಕೊಳ್ಳಬೇಕು. ನಮ್ಮೊಳಗಿನ ಪ್ರತಿಭೆ ಹಾಗೂ ಕ್ರಿಯಾಶೀಲತೆ ಜಾಗೃತಗೊಳಿಸಿ ಬದುಕನ್ನು ಅರಳಿಸಿಕೊಳ್ಳಬೇಕು ಎಂದರು.
ಅವಧಿ ಸದುಪಯೋಗವಾಗಲಿ: ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಸಿ. ಪೀರಜಾದೆ ಮಾತನಾಡಿ, ಪಾಲಕರು ಶಿಕ್ಷಕರು ವಿದ್ಯಾರ್ಥಿಗಳ ಸಮನಾದ ಜವಾಬ್ದಾರಿಯಿಂದ ಮಾತ್ರ ಶೈಕ್ಷಣಿಕ ಉನ್ನತಿ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಯುವೋತ್ಸಾಹ ದಾರಿ ತಪ್ಪುತ್ತಿರುವುದು ದುರಂತ. ಶೈಕ್ಷಣಿಕ ಅವಧಿ ಸದುಪಯೋಗಪಡಿಸಿಕೊಳ್ಳದಿದ್ದರೆ ಪಶ್ಚಾತಾಪ ಪಡಬೇಕಾದೀತು ಎಂದು ಎಚ್ಚರಿಸಿದರು.
ಸನ್ಮಾನ: ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪಿ.ಎಂ. ಪಾಟೀಲ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಸದಸ್ಯರಾದ ಜೆ.ಜಿ. ಉಪ್ಪಿನ, ಸುಜಾತಾ  ನಂದಿಶೆಟ್ಟರ, ಯಲ್ಲಪ್ಪ ಶೇರಖಾನೆ, ಗುರುಸಿದ್ದಪ್ಪ ಅಕ್ಕಿವಳ್ಳಿ ಅತಿಥಿಗಳಾಗಿದ್ದರು. ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ ಆಂಗ್ಲಭಾಷಾ ಉಪನ್ಯಾಸಕ ಸುರೇಶ ಹೀರೂರರನ್ನು ಸನ್ಮಾನಿಸಲಾಯಿತು. ವಿದ್ಯಾ ಬಿದರಳ್ಳಿ, ಲಕ್ಷ್ಮೀ ಇಟಗಿಮಠ, ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಬಿ.ಎಂ. ಕಾಡಪ್ಪನವರ ಸ್ವಾಗತಿಸಿದರು. ಸಾಹಿತಿ ಮಾರುತಿ ಶಿಡ್ಲಾಪುರ ಪ್ರಾಸ್ತಾವಿಕ ಮಾತನಾಡಿದರು. ಮಹೇಂದ್ರ ಬಾರಿಕರ ನಿರೂಪಿಸಿದರು. ಎಸ್.ಬಿ. ಕಮಾಟಿ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಣಾ ದೇವರಗುಡಿ, ದೇಸಾಯಿ ಆಯೋಜಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement