ವೇತನ ಬಾಡಿಗೆ ತಾರತಮ್ಯ ನಿವಾರಿಸಿ
ಹಾವೇರಿ: ಕೇಂದ್ರ ಸರ್ಕಾರ ಹಾಗೂ ನೆರೆಯ ರಾಜ್ಯಗಳು ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಉತ್ತಮ ವೇತನ ನೀಡುತ್ತಿವೆ. ಅಲ್ಲದೇ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಮನೆ ಬಾಡಿಗೆಯನ್ನೂ ಉತ್ತಮವಾಗಿ ನೀಡುತ್ತಿವೆ. ಆದರೆ, ರಾಜ್ಯ ಸರ್ಕಾರ ವೇತನ ಹಾಗೂ ಮನೆ ಬಾಡಿಗೆಗಳಲ್ಲಿ ಆಗುತ್ತಿರುವ ವೇತನ ತಾರತಮ್ಯ ನಿವಾರಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ್ಗೆ ಮನವಿ ಸಲ್ಲಿಸಿದರು.
ವಿಷಾದಕರ ಸಂಗತಿ: ಈ ಸಂದರ್ಭ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಬೈರಮ್ಮನವರ ಮಾತನಾಡಿ, ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಉಪನ್ಯಾಸಕರು ಅತ್ಯಂತ ಕಡಿಮೆ ಮೂಲವೇತನ ಪಡೆಯುತ್ತಿದ್ದಾರೆ. ಈ ಕುರಿತು ಹಲವಾರು ಬಾರಿ ಮನವಿ ಮಾಡಿದ್ದರೂ ಈವರೆಗೆ ಸರ್ಕಾರ ಪರಿಗಣಿಸದಿರುವುದು ವಿಷಾದಕರ ಸಂಗತಿ.
ಕೇಂದ್ರ ಮಾದರಿಯಲ್ಲಿ ನಿಗದಿಪಡಿಸಿ: ಇತರೆ ಇಲಾಖೆಗಳಲ್ಲಿ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ನೀಡುವ ವಿಶೇಷ ವೇತನವನ್ನು ಮೂಲವೇತನದಲ್ಲಿ ವಿಲೀನಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೇ ಕೇಂದ್ರ ಸರ್ಕಾರ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆ, ನಗರ ಭತ್ಯೆ ಹೆಚ್ಚಿಸುವಂತೆ ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಎಂ.ಆರ್. ಮಕಾಂದಾರ ಮಾತನಾಡಿ, 6ನೇ ವೇತನ ಸಮಿತಿ ಶಿಫಾರಸಿನಂತೆ ಸರ್ಕಾರ ಅನುಷ್ಟಾನಕ್ಕೆ ತರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮನೆ ಬಾಡಿಗೆ ಭತ್ಯೆಗಳನ್ನು 2001ರ ಜನಗಣತಿ ಆಧಾರದ ಮೇಲೆ ಪುನರ್ ವರ್ಗೀಕರಿಸಿ 2012ರ ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಪರಿಷ್ಕರಿಸಿತ್ತು. ಅದರಂತೆ 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಟ್ಟಣವನ್ನು ಡಿ ದರ್ಜೆ ಎಂದೂ ಅಲ್ಲಿ ವಾಸಿಸುವ ಸರ್ಕಾರಿ ನೌಕರರಿಗೆ ಶೇ. 7ರ ಮನೆ ಬಾಡಿಗೆ ಭತ್ಯೆ ನೀಡಲಾಗುತ್ತಿತ್ತು.
ಆದರೆ, ಪ್ರಸ್ತುತ ಹಾವೇರಿ ಜಿಲ್ಲೆ ಸಿ ವರ್ಗೀಕರಣಕ್ಕೆ ಬರುವುದರಿಂದ ಮೂಲವೇತನವನ್ನು ಶೇ. 10ರಷ್ಟು ಹೆಚ್ಚಿಸುವಂತೆ ಅಲ್ಲದೇ ಬೆಂಗಳೂರಿನಲ್ಲಿ ಶೇ. 30ರಷ್ಟು ಮನೆ ಬಾಡಿಗೆ ಭತ್ಯೆ ಹೆಚ್ಚಿಸುತ್ತಿದ್ದು, ಇದೇ ಮಾದರಿಇತರೆಡೆ ಶೇ. 20ರಷ್ಚು ಮನೆ ಬಾಡಿಗೆ ಹೆಚ್ಚಿಸುವಂತೆ ಆಗ್ರಹಿಸಿದರು. ಈ ಸಂದರ್ಭ ಸಂಘಟನೆ ಪದಾಧಿಕಾರಿಗಳಾದ ಎಸ್.ಬಿ. ನರಗುಂದ, ಜಿ.ಎನ್. ಜಾವೂರ, ಎಸ್.ಎಂ. ಬಡಿಗೇರ, ಬಿ.ಪಿ. ಬಿದರಿ, ಸಿ.ಎನ್. ಕಲಕೋಟಿ, ಸಿ.ಎಸ್. ಹಾರ್ನಳ್ಳಿ, ಹಾವೇರಿ, ಈ.ಎಸ್. ಹೊಳಿಯಪ್ಪನವರ, ಎಸ್.ಆರ್. ಅಣ್ಣಯ್ಯನವರ, ವಿ.ಬಿ. ಆಲದಕಟ್ಟಿ, ಎನ್.ಎಚ್. ಆದವಾನಿ ಇದ್ದರು.