ಹಿರೇಕೆರೂರಿಗೆ ಸರ್ವಜ್ಞ ವರದಾನ
ಹಿರೇಕೆರೂರು: ವರಕವಿ, ತ್ರಿಪದಿ ಬ್ರಹ್ಮ ಸರ್ವಜ್ಞ ಹಿರೇಕೆರೂರು ತಾಲೂಕಿನ ವರದಾನವಾಗಿದ್ದಾನೆ. ಸರ್ವಜ್ಞ ಹೆಸರಲ್ಲಿ ತಾಲೂಕು ಅಭಿವೃದ್ಧಿ ಹೊಂದಲು ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಸಂಶೋಧಕ, ಸರ್ವಜ್ಞ ಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಭೋಜರಾಜ ಪಾಟೀಲ ಸಲಹೆ ಮಾಡಿದರು.
ತಾಲೂಕಿನ ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಸಿದ್ದಲಿಂಗೇಶ್ವರ ವಿದ್ಯಾಪೀಠ ಪ್ರಸಕ್ತ ಸಾಲಿನಿಂದ ಕೊಡಮಾಡುತ್ತಿರುವ ಸರ್ರ್ವಜ್ಞ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಜವಾಬ್ದಾರಿ ಹೆಚ್ಚಿದೆ: ಸರ್ರ್ವಜ್ಞ ಪ್ರಾಧಿಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಾಲೂಕಿನ ಪ್ರಗತಿಗೆ ಸರ್ಕಾರ ತಕ್ಷಣ ಕಾರ್ಯೋನ್ಮುಖವಾಗಬೇಕಿದೆ. ಸರ್ವಜ್ಞ ಶ್ರೀ ಪ್ರಶಸ್ತಿ ಕವಿ ಸರ್ವಜ್ಞನಿಗೆ ಮೀಸಲಾದುದು. ಸರ್ಕಾರ ಮಾಡದ ಕೆಲಸವನ್ನು ರಟ್ಟಿಹಳ್ಳಿ ಕಬ್ಬಿಣಕಂತಿಮಠ ಮಾಡಿರುವುದು ಶ್ಲಾಘನೀಯ. ಈ ಮೂಲಕ ತಮ್ಮ ಮೇಲಿನ ಜವಾಬ್ದಾರಿ ಹೆಚ್ಚಿಸಲಾಗಿದೆ ಎಂದರು.
ಅನುದಾನ ಸಂತಸ ತಂದಿದೆ: ಪ್ರಶಸ್ತಿ ಆಕಸ್ಮಿಕ. ಅದಕ್ಕೆ ನಾನು ಅಭಾರಿ ಎಂದ ಡಾ. ಬೋಜರಾಜ ಪಾಟೀಲ, ಸರ್ವಜ್ಞ ಪ್ರಶಸ್ತಿ ಹೆಚ್ಚಿನ ಸಂಶೋಧನೆಯತ್ತ ನನ್ನನ್ನು ಪ್ರೇರೆಪಿಸಿದೆ. ಕವಿ ಸರ್ರ್ವಜ್ಞ ಕನ್ನಡ ನಾಡಿನ ಎಲ್ಲ ವಿಷಯಗಳನ್ನು ಬಲ್ಲವನಾಗಿದ್ದ. ಆತನ ತ್ರಿಪದಿ ಬ್ರಹ್ಮ ಬಿರುದು ಜನರಿಂದ ಸಿಕ್ಕಿದ್ದು. ಇದು ಸರ್ವಕಾಲಿಕ ಸತ್ಯ. ಸರ್ಕಾರ ಸರ್ವಜ್ಞ ಪ್ರಾಧಿಕಾರಕ್ಕೆ ರು. 2 ಕೋಟಿ ಅನುದಾನ ನೀಡಿರುವುದು ಸಂತಸ ತಂದಿದೆ.
ಶೀಘ್ರ ಗ್ರಂಥ ಬಿಡುಗಡೆ: ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪರ ಹೆಚ್ಚಿನ ಅನುದಾನ ಲಭಿಸಲಿದೆ. ಸರ್ವಜ್ಞನ ವಚನಗಳ ಪುನರ್ ಮುದ್ರಣ, ಅವರ ಲೇಖನಗಳ ಪ್ರಕಟಣೆ ಹಾಗೂ ವಿಮರ್ಶಾ ಕೃತಿಗಳ ಸಂಗ್ರಹದ ಕಾರ್ಯವನ್ನು ಸರ್ಕಾರ ಮಾಡಬೇಕಿದೆ. ಈ ನಿಟ್ಟಿನಲ್ಲಿ ಹಂಪಿ ವಿವಿಯ 4 ಸಂಪುಟಗಳ ಗ್ರಂಥ ಬಿಡುಗಡೆಗೆ ಸಿದ್ಧವಾಗಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಎಸ್.ಪಿ. ಗೌಡರ ಮಾತನಾಡಿದರು. ಮಾಜಿ ವಿಧಾನ ಸಭಾಧ್ಯಕ್ಷ ಬಿ.ಜಿ. ಬಣಕಾರ ಅಧ್ಯಕ್ಷತೆ ವಹಿಸಿದ್ದರು.
ಕಬ್ಬಿಣ ಕಂತಿಮಠದ ಶಿವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಬಿಇಓ ಎಂ.ಸಿ. ಆನಂದ, ತಾಪಂ ಮಾಜಿ ಅಧ್ಯಕ್ಷ ಹೇಮಣ್ಣ ಮುದಿರೆಡ್ಡೇರ, ಜಗದೀಶ ಅಂಗಡಿ, ಡಾ. ಕೊಟ್ಟೋರೇಶ, ಲೀಲಾವತಿ ಪಾಟೀಲ, ಕೆ.ಎಸ್. ಸಣ್ಣಗೌಡ್ರ, ಇನ್ನಿತರರು ಉಪಸ್ಥಿತರಿದ್ದರು.
ಬಳಿಕ ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಶಾರದಾ ಸಂಕಣ್ಣನವರ ಸ್ವಾಗತಿಸಿದರು. ಚನ್ನವೀರ ಚಕ್ರಸಾಲಿ ನಿರ್ವಹಿಸಿದರು. ಎಂ.ಎಚ್. ಹರವಿಶೆಟ್ಟರ ವಂದಿಸಿದರು.