ಶರಣರ ಕೊಡುಗೆ ಅಪಾರ
ಸಂತರು, ಸತ್ಪುಷರು ತಮ್ಮ ಹೆಸರಿನಲ್ಲಿ ಭಿನ್ನತೆ ಹೊಂದಿರುವರೇ ಹೊರತಾಗಿ ಅವರ ಜೀವನದಲ್ಲಲ್ಲ. ಅವರೆಲ್ಲರೂ ಸಮಾಜ ಸುಧಾರಣೆಗೆ ತಮ್ಮ ಜೀವನವನ್ನು ಮುಡುಪಾಗಿಡುವ ಮಹಾನ್ ಚೇತನರಾಗಿದ್ದಾರೆಂದು ಬಿಜಾಪುರ ಜ್ಞಾನ ಯೋಗಾಶ್ರವುದ ಸಿದ್ಧೇಶ್ವರ ಶ್ರೀ ಹೇಳಿದರು.
ಅವರು ಶುಕ್ರವಾರ ನಗರದ ಕೆ.ಎಚ್. ಪಾಟೀಲ್ ಸಭಾಭವನದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಗದಗ ಇವರ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಬಾಳಿದ ಶರಣರೆಲ್ಲರೂ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ಪ್ರಾಮಾಣಿಕರಾಗಿ ಶ್ರಮಿಸಿದ್ದಾರೆ. ಯುವಕರು ಇಂತಹ ವ್ಯಕ್ತಿಗಳ ತತ್ವಾದರ್ಶ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಪ್ರೊ. ಗುರುಲಿಂಗ ಕಾಪಸೆ ಮಾತನಾಡಿ, ಸ್ವಾಮಿ ವಿವೇಕಾನಂದರು ವಿಶ್ವ ಮಹಾನ್ ಸಂತರಲ್ಲಿ ಒಬ್ಬರು. ಅವರ ವಿಚಾರಧಾರೆಗಳು ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗಿವೆ. ತಮ್ಮ ಕಿರಿಯ ವಯಸ್ಸಿನಲ್ಲಿಯೇ ಮಹಾನ್ ಸಾಧನೆ ಮಾಡುವ ಮೂಲಕ ಈ ನಾಡಿನ ಮಹಾನ್ ಚೇತನರಾಗಿ ಹೊರಹೊಮ್ಮಿದ್ದಾರೆ. ಅಂಥಹ ಮಹಾನ್ ಚೇತನರ ಸಮಗ್ರ ಚಿಂತನೆ ಕುರಿತು ಅವಲೋಕಿಸುವ ಕಾರ್ಯವಾಗಬೇಕಿದೆ. ಸಮಾಜದಲ್ಲಿ ಸ್ವಾಸ್ಥ್ಯ ಬೆಳೆಸಲು ಹಾಗೂ ಅಭಿವೃದ್ಧಿಗೆ ಇಂಥವರ ಆದರ್ಶ ಸಹಕಾರಿಯಾಗಿದೆ. ವರ್ಗರಹಿತ, ವರ್ಣರಹಿತ ಸಮಾಜ ನಿರ್ಮಾಣ ಮಾಡುವುದು ಇಂದಿನ ಯುವ ಸಮೂಹದ ಕರ್ತವ್ಯವಾಗಿದೆ. ಯುವಕರಿಗೆ ವಿವೇಕಾನಂದರು ಆದರ್ಶರಾಗಿದ್ದಾರೆ. ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಸಂಚರಿಸಿ, ಸಮಾಜದಲ್ಲಿರುವ ಜಾತಿ, ಅಧರ್ಮ, ಅಂಧಕಾರ ಕುರಿತು ತಿಳಿದುಕೊಳ್ಳುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದವರಾಗಿದ್ದಾರೆ ಎಂದರು.
ದೇಶದಲ್ಲಿ ಉಪವಾಸದಿಂದ ಬಳಲುವವರು, ಉಡಲು ಬಟ್ಟೆಯಿಲ್ಲದವರು, ಶೋಷಣೆಗೊಳಗಾದವರು, ಅನಕ್ಷರಸ್ಥರು, ಅಸಹಾಯಕ ಮಹಿಳೆಯರ ಪರವಾಗಿ ಧ್ವನಿ ಎತ್ತಿದರು. ಇಂಥ ಜನರ ಉಳಿತಿಗಾಗಿ ದೇಶಾದ್ಯಂತ ಸಂಚರಿಸುವ ಮೂಲಕ ಜನರಲ್ಲಿ ಜಾಗೃತಿಯನ್ನುಂಟು ಮಾಡಿ ಸಮಾಜ ಸುಧಾರಣೆಗೆ ಶ್ರಮಿಸಿದರು. ಜನರ ಜಾಗೃತಿಗಾಗಿ, ಸಮೃದ್ಧ ನಾಡುಕಟ್ಟಲು ದೇಶಾದ್ಯಂತ ಸ್ವಾಮಿ ವಿವೇಕಾನಂದರು ಆಶ್ರಮಗಳನ್ನು ನಿರ್ಮಿಸಿದರು. ಈ ಆಶ್ರಮಗಳ ಮೂಲಕ ಸಮಾಜವನ್ನು ಪರಿವರ್ತನೆಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಯುವ ಪೀಳಿಗೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜ ಪರಿವರ್ತನೆಗೆ ಕೈಜೋಡಿಸುವಂತೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಶ್ರೀಗಳು ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಗೌಡರ, ನಿಜಗುಣ ಶ್ರೀಗಳು, ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯ ಮಂಡಿಸಿದರು. ಬಳಿಕ ಡಾ. ಎಚ್.ಎನ್. ಮುರಳೀಧರ, ಪ್ರೊ. ಜಿ.ಎಸ್. ಜಯದೇವ, ಡಾ. ಎಚ್.ಬಿ. ಪೂಜಾರ ಅವರಿಂದ ವಿವಿಧ ಗೋಷ್ಠಿ ಜರುಗಿದವು. ಮಾಜಿ ಶಾಸಕ ಡಿ.ಆರ್. ಪಾಟೀಲ ಸ್ವಾಗತಿಸಿದರು. ಕೆ.ಬಿ. ತಳಗೇರಿ ನಿರೂಪಿಸಿದರು.
ಬಸ್ಗಾಗಿ ಎಸ್ಎಫ್ಐ ಮನವಿ
ಬ್ಯಾಡಗಿ: ಗ್ರಾಮೀಣ ಪ್ರದೇಶಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕು ಎಸ್ಎಫ್ಐ ಘಟಕ ಶುಕ್ರವಾರ ಸಾರಿಗೆ ನಿಯಂತ್ರಕರಿಗೆ ಮನವಿ ಸಲ್ಲಿಸಿತು.
ಇಲ್ಲಿನ ಬಸ್ ನಿಲ್ದಾಣಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದರು. ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಮಂಜು ಪೂಜಾರ ಮಾತನಾಡಿ, ಬ್ಯಾಡಗಿಯಿಂದ ಚಿಕ್ಕಬಾಸೂರ ಮಾರ್ಗವಾಗಿ ಮೊದಲಿದ್ದ ಸಾರಿಗೆ ಬಸ್ಗಳನ್ನು ಸ್ಥಗಿತಗೊಳಿಸಲಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದರು.
ಬ್ಯಾಡಗಿಯಿಂದ ತಿಳವಳ್ಳಿಗೆ ಚಿಕ್ಕಬಾಸೂರು ಮಾರ್ಗವಾಗಿ ಸಂಚರಿಸಲು ಹೆಚ್ಚಿನ ಬಸ್ ಒದಗಿಸಬೇಕು. ಶಾಲಾ ಅವಧಿಯಲ್ಲಿ ಬಸ್ಗಳಿಲ್ಲದೆ ಒಂದೇ ಬಸ್ನಲ್ಲಿ 200 ವಿದ್ಯಾರ್ಥಿಗಳು ಸಂಚರಿಸುವಂತಾಗಿದೆ. ಹೀಗಾಗಿ ವಿದ್ಯಾರ್ಥಿನಿಯರು ಹಾಗೂ ವೃದ್ಧರಿಗೆ ತೊಂದರೆಯಾಗುತ್ತಿದೆ. ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಆಗ್ರಹಿಸಿದರು.
ತಾಲೂಕು ಘಟಕದ ಅಧ್ಯಕ್ಷ ವಸಂತ ಬ್ಯಾಟಪ್ಪನವರ ಮಾತನಾಡಿ, ಕಾಗಿನೆಲೆ ಮಾರ್ಗವಾಗಿ ಚಿಕ್ಕಬಾಸೂರ ಕಡೆ ಸಂಚರಿಸುವ ಬಸ್ನ ವೇಳೆ ಬದಲಾಯಿಸಬೇಕು. ಬ್ಯಾಡಗಿಯಿಂದ ತಿಳವಳ್ಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿದರು. ಶಾಲೆ ಮಕ್ಕಳು ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದಾರೆ. ಅಧಿಕಾರಿಗಳು ಭರವಸೆ ನೀಡುತ್ತಾರೆಯೇ ಹೊರತು, ಬಸ್ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೇಳೆಗೆ ಸರಿಯಾಗಿ ಬಸ್ ಓಡಿಸಲಾಗುತ್ತಿದೆ. ಕೆಲ ತಾಂತ್ರಿಕ ಕಾರಣಗಳಿಂದ ಸಮರ್ಪಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಹಂತ ಹಂತವಾಗಿ ನೂತನ ಮಾರ್ಗದ ಬಸ್ ಬಿಡಲಾಗುವುದು. ಬ್ಯಾಡಗಿ ತಿಳವಳ್ಳಿ ಕಡೆ ಸಂಚರಿಸುತ್ತಿರುವ ಬಸ್ನ್ನು 2 ಬಾರಿ ಹೆಚ್ಚಿಗೆ ಓಡಿಸುವ ಮೂಲಕ ಸಮಸ್ಯೆ ಪರಿಹರಿಸಲಾಗುವುದು ಎಂದು ಸಾರಿಗೆ ನಿಯಂತ್ರಕ ಎಸ್.ಪಿ. ಎರೆಸೀಮೆ ತಿಳಿಸಿದರು.
ಸಣ್ಣಗೌಡ್ರ ಪಾಟೀಲ, ಸಂಗೀತಾ ದೇವರಗುಡ್ಡ, ಎಸ್. ವಿಜಯಕುಮಾರ, ಚನ್ನಬಸಪ್ಪ ಅರಳಿಕಟ್ಟಿ, ಸಂತೋಷ ಮಡಿವಾಳರ, ಗುಡ್ಡಪ್ಪ ಕಂಬಳಿ, ಎಸ್. ಲಿಂಗರಾಜ ಪಾಲ್ಗೊಂಡಿದ್ದರು.