ಎಲ್ಲೆಡೆ ಸಂಭ್ರಮದ ಶಿವರಾತ್ರಿ ಆಚರಣೆ
ಸವಣೂರು: ನಗರ ಹಾಗೂ ತಾಲೂಕಿನಾದ್ಯಂತ ಮಹಾಶಿವರಾತ್ರಿ ಆಚರಣೆಯನ್ನು ಶ್ರದ್ಧಾ ಭಕ್ತಿಪೂರ್ವಕವಾಗಿ ಕೈಗೊಳ್ಳಲಾಯಿತು. ಶಿವ ಸನ್ನಿಧಿಗಳಲ್ಲಿ, ಮಠ-ಮಂದಿರಗಳಲ್ಲಿ ಪರಶಿವನ ಸ್ಮರಣೆ, ಅರ್ಚನೆ, ಅಭಿಷೇಕ ಮಾಡಿ, ಪ್ರಾರ್ಥಿಸಲಾಯಿತು. ಸವಣೂರಿನ ಗೌಡ್ರಗುರುಸ್ವಾಮಿ ಮಠದಲ್ಲಿ ವರದಶಂಕರ ಪೂಜೆಯೊಂದಿಗೆ 108 ಪೂರ್ಣಕುಂಭ - ಕಲಶ, ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ, ಪೂಜಿಸಲಾಯಿತು. ವಿರೂಪಾಕ್ಷ ಶಾಸ್ತ್ರಿಗಳಿಂದ ಧರ್ಮಬೋಧನೆ, ಶಿವರಾತ್ರಿ ಕಥಾಶ್ರವಣ, ಭಜನೆ ಕೈಗೊಳ್ಳಲಾಯಿತು. ಸವಣೂರಿನ ವಿಠ್ಠಲ ಹರಿಮಂದಿರದಲ್ಲಿ 1151 ಶಿವಲಿಂಗ ಪ್ರತಿಷ್ಠಾಪನೆ, ನಿರಂತರ ನಾಮಸ್ಮರಣೆ, ಕೀರ್ತನೆ, ಜಾಗರಣೆ ಮಾಡಲಾಯಿತು. ಭಾವಸಾರ ಕ್ಷತ್ರಿಯ ದೈವ ಮಂಡಳಿಯ ಸದಸ್ಯರು, ಸಮಾಜದ ಬಾಂಧವರು ಪಾಲ್ಗೊಂಡ್ದಿದರು. ನಗರದ ಔದುಂಬರೇಶ್ವರ ದೇವಸ್ಥಾನ, ಜೋಶಿ ಓಣಿಯ ಈಶ್ವರ ದೇವಸ್ಥಾನ, ಕಲ್ಮೇಶ್ವರ ದೇವಸ್ಥಾನಗಳಲ್ಲೂ ಶಂಕರನ ಪೂಜೆಯನ್ನು ವಿಧ್ಯುಕ್ತವಾಗಿ ಕೈಗೊಳ್ಳಲಾಯಿತು. ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಶಿವರಾತ್ರಿ ಆಚರಿಸಲಾಗಿದ್ದು, ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ಗಂಗಾಜಲವನ್ನು ಪೂರೈಸಿದ ಕಂದಾಯ ಇಲಾಖೆ, ಭಕ್ತರ ಭಾವನೆಗಳಿಗೆ ಸ್ಪಂದಿಸಿತು.
ಇಂದು ತಾಪಂ ಸಭೆ
ಹಾವೇರಿ: ಹಾವೇರಿ ತಾಪಂ ಸಾಮಾನ್ಯ ಸಭೆ ಮಾ. 13ರಂದು ಬೆಳಗ್ಗೆ 11 ಗಂಟೆಗೆ, ತಾಪಂ ಸಭಾಂಗಣದಲ್ಲಿ ಜರುಗಲಿದೆ. ತಾಪಂ ಅಧ್ಯಕ್ಷೆ ಮೆಹರುನ್ನಿಸಾ ಜಿಗಳೂರ ಅಧ್ಯಕ್ಷತೆ ವಹಿಸುವರು ಎಂದು ತಾಪಂ ಇಓ ಡಾ ಬಸವರಾಜಪ್ಪ ತಿಳಿಸಿದ್ದಾರೆ.
ಕಿಶೋರಿ ಕಾರ್ಯಾಗಾರ
ಸವಣೂರು: ಹದಿಹರೆಯದ ಮಕ್ಕಳಿಗೆ ಆರೋಗ್ಯದ ಸೂತ್ರಗಳನ್ನು ವಿವರಿಸುವ ಕಿಶೋರಿ ಕಾರ್ಯಾಗಾರವನ್ನು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಇತ್ತೀಚೆಗೆ ಕೈಗೊಳ್ಳಲಾಯಿತು. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಾಧ್ಯಾಪಕ ಎಸ್.ಜಿ. ಸಣ್ಣಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಎಂ.ಎಂ. ಪಾಟೀಲ ಭಾಗವಹಿಸಿದ್ದರು.
ನದಿಯಲ್ಲಿ ಮುಳುಗಿ ಸಾವು
ಹಾವೇರಿ: ವರದಾ ನದಿಯಲ್ಲಿ ಎತ್ತುಗಳನ್ನು ತೊಳೆಯಲೆಂದು ನೀರಿಗಿಳಿದಿದ್ದ ವ್ಯಕ್ತಿ ಈಜು ಬಾರದೆ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾನಗಲ್ಲ ತಾಲೂಕು ಮಲಗುಂದ ಗ್ರಾಮದಲ್ಲಿ ಜರುಗಿದೆ. ಮೃತನನ್ನು ಕುಮಾರ ರುದ್ರಪ್ಪ ಮಳಿಯಣ್ಣನವರ (35) ಎಂದು ಗುರುತಿಸಲಾಗಿದೆ. ಈ ಕುರಿತಂತೆ ಈತನ ತಂದೆ ರುದ್ರಪ್ಪ ಭರಮಪ್ಪ ಮಳಿಯಣ್ಣನವರ ಆಡೂರ ಪೊಲೀಸ್ ಠಾಣೆಯಲ್ಲಿ ವರದಿ ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
ಗ್ರಾಮಸಭೆ ಯಶಸ್ವಿ
ಸವಣೂರು: ತಾಲೂಕಿನ ತೊಂಡೂರ ಗ್ರಾಮದಲ್ಲಿ ಪ್ರಸಕ್ತ ಸಾಲಿನ ಗ್ರಾಮಸಭೆ ನಡೆಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮಾಡಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಾಚಪ್ಪ ಬಶೆಟ್ಟಪ್ಪನವರ, ಸದಸ್ಯರಾದ ರಾಜು ಅಂಗಡಿ, ಶ್ರೀಕಾಂತ ದೊಡ್ಡೂರ, ಬಸವರಾಜ ದೇವಸೂರ, ಶಿಲಾಲಬಿ ಕುಂದೂರ, ತಳವಾರ, ರಾಜಬಿ ಕರ್ಜಗಿ, ಗೌರವ್ವ ಮೂಲಿಮನಿ, ಇಲಾಖೆ ಪ್ರತಿನಿಧಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ರಮೇಶ ನೆಲೋಗಲ್ಲ, ಆರ್.ಎಸ್. ನದಾಫ ನಿರ್ವಹಿಸಿದರು. ಪಂಚಾಯ್ತಿ ಸಿಬ್ಬಂದಿ ಉಪಸ್ಥಿತರಿದ್ದರು.
ಪುಟ್ಟರಾಜರ ಜಯಂತಿ ಆಚರಣೆ
ಸವಣೂರು: ತಾಲೂಕಿನ ಹುರಳಿಕುಪ್ಪಿ ಗ್ರಾಮದ ವೀರಭದ್ರೇಶ್ವರ ಯುವಕ ಮಂಡಳ ಹಾಗೂ ಪುಟ್ಟರಾಜ ಗವಾಯಿಗಳ ಯುವ ಸಂಘದ ಆಶ್ರಯದಲ್ಲಿ ಕವಿ ಪುಟ್ಟರಾಜ ಗವಾಯಿಗಳ ಜನ್ಮದಿನಾಚರಣೆ ಕಾರ್ಯಕ್ರಮ ಜರುಗಿತು. ಗವಾಯಿಗಳ ಭಾವಚಿತ್ರಕ್ಕೆ ಪೂಜೆ, ಆರತಿ, ಮಹಿಳೆಯರಿಂದ ಭಕ್ತಿಗೀತೆ ಗಾಯನ ಏರ್ಪಡಿಸಲಾಗಿತ್ತು. ಗವಾಯಿಗಳ ಜೀವನ-ಸಾಧನೆಗಳನ್ನು ಸ್ಮರಿಸಲಾಯಿತು. ಗದಿಗೆಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಕಲಾವಿದ ವೀರಯ್ಯ ಸಂಕಿನಮಠ, ಸಿದ್ದಲಿಂಗಯ್ಯ ಹಿರೇಮಠ, ವೀರಣ್ಣ ಮಡಿವಾಳ, ಮಲ್ಲಪ್ಪ ಅಕ್ಕಿ, ನೀಲಪ್ಪ ಕೂಡಲ, ರುದ್ರಗೌಡ, ದ್ಯಾಮನಗೌಡ ಇದ್ದರು.