ಬಿಜೆಪಿ ಸಾಧನೆಗಳೆ ಗೆಲವಿಗೆ ಶ್ರೀರಕ್ಷೆ: ಪೂಜಾರ
ರಾಣಿಬೆನ್ನೂರು: 5 ವರ್ಷಗಳಲ್ಲಿ ಮಾಡಿರುವ ಬಿಜೆಪಿ ಸರ್ಕಾರ ಸಾಧನೆಗಳೆ ನನ್ನ ಗೆಲವಿಗೆ ಶ್ರೀರಕ್ಷೆಯಾಗಲಿವೆ ಎಂದು ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಹೇಳಿದರು.
ನಗರದ ಚೌಡೇಶ್ವರಿ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ಮೂಲಕ ಮತ ಯಾಚನೆ ನಡೆಸಿದ ನಂತರ, ಪೋಸ್ಟ್ ಸರ್ಕಲ್ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
5 ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಭಿವೃದ್ಧಿಯ ಹೊಸ ಶಕೆಯನ್ನೇ ಪ್ರಾರಂಭಿಸಿದ್ದು, ಬಿಜೆಪಿ ಸರ್ಕಾರ ಕೈಗೊಂಡಿರುವ ಕಾರ್ಯಗಳು ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು.
ರಾಜ್ಯದ ಮತದಾರರು ಬಿಜೆಪಿಗೆ ಮತ ನೀಡಲು ಮುಂದಾಗಿದ್ದು, ರಾಣಿಬೆನ್ನೂರು ಕ್ಷೇತ್ರದಿಂದ ನಾನು ಗೆಲ್ಲುವುದರಲ್ಲಿ ಎರಡು ಮಾತಿಲ್ಲವೆಂದು ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಹೇಳಿದರು.
ರೋಡ್ ಶೋದಲ್ಲಿ ಭಾಗವಹಿಸಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಓಲೇಕಾರ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಜಂಬಗಿ, ತಾಲೂಕು ಬಿಜೆಪಿ ಅಧ್ಯಕ್ಷ ಡಾ.ಬಸವರಾಜ ಕೇಲಗಾರ, ನಗರಾಧ್ಯಕ್ಷ ರಾಜಶೇಖರಯ್ಯ ಸುರಳಿಕೇರಿಮಠ, ಬಸವರಾಜ ಲಕ್ಷೇಶ್ವರ, ಸಂಕಪ್ಪ ಮಾರನಾಳ ಮಾತನಾಡಿದರು.
ನಗರಸಭಾ ಸದಸ್ಯರಾದ ಪ್ರಭುಸ್ವಾಮಿ ಕರ್ಜಗಿಮಠ, ಉಮೇಶಪ್ಪ ಹೊನ್ನಾಳಿ, ಶಿವರಾಜ ಬ್ಯಾಡಗಿ, ದೊಡ್ಡಪೇಟೆಯ ಚರ್ಮನ್ ಚಂದ್ರಪ್ಪ ರೊಡ್ಡನವರ, ಮಲ್ಲಿಕಾರ್ಜುನ ಪೂಜಾರ, ಕಿರಣ ಅಂಗಡಿ, ಮೈತ್ರಾ ಹದಡಿ, ವೀರಣ್ಣ ಅಂಗಡಿ, ಲೀಲಾ ಜಂಬಗಿ, ಮಲ್ಲಣ್ಣ ಅಂಗಡಿ, ರಾಜಣ್ಣ ಜಂಬಗಿ, ಕಾರ್ಯಕರ್ತರು ಇದ್ದರು.
ಬಿಜೆಪಿಯಿಂದ ಜನತೆಗೆ ಮೋಸ: ಶಿವಣ್ಣವರ
ಬ್ಯಾಡಗಿ: ಮತದಾರ ನೀಡಿದ್ದ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳದ ಬಿಜೆಪಿ, ಅಸಾಂವಿಧಾನಿಕ ಆಡಳಿತ ನಡೆಸುವ ಮೂಲಕ 5 ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಪರಿಚಯಿಸಿ ಜನರಿಗೆ ಮೋಸ ಮಾಡಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಶಿವಣ್ಣವರ ಆರೋಪಿಸಿದರು. ಗುರುವಾರ ಕೆರೂಡಿ ಗ್ರಾಮದಲ್ಲಿ ಮತಯಾಚನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದ ಅವಧಿಯಲ್ಲಿ ರಾಜಕೀಯ ದೊಂಬರಾಟ ನಡೆಸಿದ ಬಿಜೆಪಿ ಶಾಸಕರು ಸಮನ್ವಯದ ಕೊರತೆಯಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದರು. ಹತ್ತು ವರ್ಷಗಳಿಂದ ರಾಜ್ಯದಲ್ಲಿ ಭ್ರಷ್ಟರ ಕೈಗೆ ಅಧಿಕಾರ ಕೊಡಬೇಕಾಯಿತು. ಅಭಿವೃದ್ಧಿ ಹೆಸರಿನಲ್ಲಿ ನಾಡಿನ ನೆಲ-ಜಲ ಸಂಪತ್ತು ಲೂಟಿಯಾಯಿತು. ರಾಜ್ಯದ ಹಿತದೃಷ್ಟಿಯಿಂದ, ಸಾಮಾಜಿಕ ನ್ಯಾಯದಡಿ ಅಧಿಕಾರ ನಡೆಸುವ ಕಾಂಗ್ರೆಸ್ ಆಡಳಿತ ಅಗತ್ಯವಾಗಿದೆ. ಭ್ರಷ್ಟ ಹಾಗೂ ನೀತಿಗೆಟ್ಟ ಮಂತ್ರಿಗಳಿಂದ ಬೇಸತ್ತಿರುವ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ ಎಂದರು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಮುಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಕಾಮಗಾರಿ ಪೂರ್ಣಗೊಳಿಸಿ ರೈತರ ಭೂಮಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ನೀಡಿದ್ದಾಗಿ ಸುಳ್ಳು ಪ್ರಚಾರ ಮಾಡುತ್ತಿರುವ ಹಿಂದಿನ ಶಾಸಕರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದರು. ತಾಲೂಕು ಘಟಕದ ಅಧ್ಯಕ್ಷ ಹುಸೇನಸಾಬ್ ದೊಡ್ಮನಿ, ಎಸ್.ಸಿ. ಶಿಡೇನೂರ, ರುದ್ರಪ್ಪ ಹೊಂಕಣ, ಹುಚ್ಚನಗೌಡ್ರ ಲಿಂಗನಗೌಡ್ರ, ಚನ್ನಬಸಪ್ಪ ಪೂಜಾರ ಇದ್ದರು.