ಹಂಸಭಾವಿಯಲ್ಲಿ ಬಣಕಾರ ರೋಡ್ ಶೋ
ಹಿರೇಕೆರೂರು: ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ, ಮಾಜಿ ಶಾಸಕ ಯು.ಬಿ. ಬಣಕಾರ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಹಂಸಭಾವಿ ಗ್ರಾಮದಲ್ಲಿ ರೋಡ್ ಶೋ ನಡೆಸಿದರು. ಗ್ರಾಮದ ಪೊಲೀಸ್ ಠಾಣೆ ಸಮೀಪದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕಾರ್ಯಕರ್ತರು ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸಿ, ಬಿ.ಎಸ್. ಯಡಿಯೂರಪ್ಪ ಹಾಗೂ ಯು.ಬಿ. ಬಣಕಾರ ಪರವಾಗಿ ಘೋಷಣೆ ಕೂಗಿದರು. ಯು.ಬಿ. ಬಣಕಾರ ಮಾತನಾಡಿ, ವಿಧಾನಸಭೆ ಚುನಾವಣೆ ಸಂಬಂಧ 126 ಹಳ್ಳಿಗೆ ಭೇಟಿ ನೀಡಿ, ಮನೆ ಮನೆಗೂ ತೆರಳಿ ಮತ ಯಾಚಿಸಿದ್ದೇನೆ. ಹಳ್ಳಿಗಳ ಜನತೆ 10 ವರ್ಷಗಳಿಂದ ತಾಲೂಕಿನಲ್ಲಿ ನಡೆಯುತ್ತಿರುವ ದರ್ಪದ ದುರಾಡಳಿತಕ್ಕೆ ಕೊನೆ ಕಾಣಿಸಲು ಪಣತೊಟ್ಟು ಕೆಜೆಪಿ ಬೆಂಬಲಿಸಲು ನಿರ್ಧರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಲ್ಯಾಣ ಕರ್ನಾಟಕ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಕಟ್ಟಿರುವ ಕರ್ನಾಟಕ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಮತದಾರರು ವಾಗ್ದಾನ ಮಾಡುತ್ತಿದ್ದಾರೆ ಹೇಳಿದರು. ತಮ್ಮನ್ನು ಆಯ್ಕೆ ಮಾಡಿದರೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ವಿಶಿಷ್ಟ ಯೋಜನೆ ಸಿದ್ಧಪಡಿಸಿ, ರಾಜ್ಯದಲ್ಲೇ ಹಿರೇಕೆರೂರನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ. ಜನತೆಯ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುವ ಮೂಲಕ ತಾಲೂಕನ್ನು ಶಾಂತಿಯುತವಾಗಿ ಮುನ್ನಡೆಸುತ್ತೇನೆ ಎಂದು ಭರವಸೆ ನೀಡಿದರು. ಒಬ್ಬ ಶಾಸಕ ಎಷ್ಟು ಜನ ಸಾಮಾನ್ಯನಾಗಿ ಇರಲು ಸಾಧ್ಯ ಎನ್ನುವುದನ್ನು ತೋರಿಸಿಕೊಡುವ ಮೂಲಕ ಮತದಾರರ ಋಣ ತೀರಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.
ಕೆಜೆಪಿಗೆ ಸೇರ್ಪಡೆ: ಚಿಕ್ಕೇರೂರ ಗ್ರಾಮದ ಮುಖಂಡ ಶಾಂತಪ್ಪ ಬಾರ್ಕಿ, ಅಬ್ದುಲ್ ವಹಾಬ್ಸಾಬ್ ಶಿರಳ್ಳಿ, ರಾಜಾಸಾಬ್ ಆರ್. ಮೈಸೂರ, ಬಾಬಾಸಾಬ್ ಬೆಳೂಗಿ, ಹಜರತ್ ಅಲಿ ಉಕ್ಕುಂದ, ಮಕ್ಬುಲ್ ಸಾಬ್ ಪ್ಯಾಟಿ, ಹಜರತ್ ಅಲಿ ರಟ್ಟೀಹಳ್ಳಿ ಮತ್ತಿತರರು ಕೆಜೆಪಿ ಸೇರಿದರು. ಜಿಪಂ ಸದಸ್ಯೆ ಪಾರ್ವತಿ ಚನ್ನಬಸಪ್ಪ ಭೋಗಾವಿ, ಜಿಪಂ ಮಾಜಿ ಸದಸ್ಯರಾದ ಬಾಬಣ್ಣ ಶೇತಸನದಿ, ಶಿವರಾಜ ಹರಿಜನ, ತಾಪಂ ಸದಸ್ಯ ಚಂದ್ರ ಅಣ್ಣಪ್ಪನವರ, ಗ್ರಾಪಂ ಅಧ್ಯಕ್ಷ ತಿರುಕಪ್ಪ ಬತ್ತಿಕೊಪ್ಪ, ಬಾಬಾಸಾಬ್ ಬೆಳಗಿ, ಅಲ್ದುಲ್ ಖಾದರ ಚಿಕ್ಕಅಣಜಿ, ದಾದಾಫೀರಸಾಬ್ ರಾಣೇಬೆನ್ನೂರ, ರಶೀದ್ ಮುಲ್ಲಾ, ಹಜರತ್ ಅಲಿ ಉಕ್ಕುಂದ, ಹುಚ್ಚಪ್ಪ ಜಡಿಯಣ್ಣನವರ, ಬಾಬಾಸಾಹೇಬ ಬೆಳದಿ, ಮಹಬೂಬ್ ಅಲಿ ಮೈಸೂರು, ಗುಲಾಬ್ ಸಾಬ್ ಬಿಳಗಿ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಷಣ್ಮುಖ ಮಳಿಮಠ ಹಾಜರಿದ್ದರು.