ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನೀರಾವರಿ ಸ್ಕೀಂಗಾಗಿ ಕೈ ಬೆಂಬಲಿಸಿ

Srinivasa Murthy VN
Updated On : 4 May 2013, 11:39 am

ಕನ್ನಡಪ್ರಭ ವಾರ್ತೆ, ಯಲಬುರ್ಗಾ, ಮೇ 3
ಕ್ಷೇತ್ರದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕಾಂಗ್ರೆಸ್ ಸರ್ಕಾರ ಬೆಂಬಲಿಸಿ ಎಂದು ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಬಹಿರಂಗ ಪ್ರಚಾರದ ಕೊನೆ ದಿನವಾದ ಶುಕ್ರವಾರ ವಿವಿಧೆಡೆ ಪ್ರಚಾರ ನಡೆಸಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ, ಬಿ ಸ್ಕೀಂ ಯೋಜನೆ ಜಾರಿ, 170 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗುವುದು. ಕಾಂಗ್ರೆಸ್‌ನಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಹೀಗಾಗಿ, ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.
ಈ ಕ್ಷೇತ್ರದ ಶಾಸಕ, ಸಚಿವ, ಸಂಸದನಾಗಿ ಕುಡಿಯುವ ನೀರು, ರಸ್ತೆ ಸುಧಾರಣೆ, ಮೊರಾರ್ಜಿ ಹಾಗೂ ಶಾಲೆ, ಕಾಲೇಜು ನಿರ್ಮಾಣಕ್ಕೆ ಶ್ರಮಿಸಿದ್ದೇನೆ. ಈ ಮೂಲಕ ತಾಲೂಕಿನ ಮತದಾರರ ವಿಶ್ವಾಸ ಗಳಿಸಿಕೊಂಡಿದ್ದು ಈ ಬಾರಿ ನನ್ನ ಗೆಲುವು ಖಚಿತ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಲಾಗುವುದು, ನೀರಾವರಿ, ಕುಡಿಯುವ ನೀರಿನ ಯೋಜನೆ, ಬಡವರಿಗೆ ಸೂರು ಕಲ್ಪಿಸಲು ಶ್ರಮಿಸುವುದಾಗಿ ರಾಯರಡ್ಡಿ ಹೇಳಿದರು.
ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತಂದರೆ ಮಾತ್ರ ರಾಜ್ಯದ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಅಷ್ಚೇ ಅಲ್ಲ, ಚುನಾವಣೆ ಬಳಿಕ ನಮ್ಮ ಸರ್ಕಾರ ರಚನೆಯಾದ ತಿಂಗಳಲ್ಲೇ ಬಿಪಿಎಲ್ ಕಾರ್ಡ್‌ದಾರರಿಗೆ 30 ಕೆ.ಜಿ ಅಕ್ಕಿಯನ್ನು ರು. 2ರಲ್ಲಿ ನೀಡಲಾಗುವುದು. ರೈತರಿಗೆ 12 ತಾಸು ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು.
ಈಗ ರಾಜ್ಯದದಲ್ಲಿ ಕಾಂಗ್ರೆಸ್ ಅಲೆ ಇದ್ದು, ಜನತೆ ಕಾಂಗ್ರೆಸ್ ಅನ್ನೇ ಅಧಿಕಾರಕ್ಕೆ ತರಲು ಮನಸ್ಸು ಮಾಡಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಶಾಸಕನಾಗಿ ಆಯ್ಕೆಯಾದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸದಾ ಶ್ರಮಿಸುವುದಾಗಿ ಹೇಳಿದರು.

ಮತದಾರರಲ್ಲದವರು ಕ್ಷೇತ್ರದಿಂದ ಹೊರಡಿ: ಡಿಸಿ

ಕನ್ನಡಪ್ರಭ ವಾರ್ತೆ, ಕೊಪ್ಪಳ, ಮೇ 3
ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರ ಶುಕ್ರವಾರ ಸಂಜೆ 5ಕ್ಕೆ ಅಂತ್ಯಗೊಂಡಿದ್ದು, ಪ್ರಚಾರಕ್ಕಾಗಿ ಆಗಮಿಸಿರುವ ವಿವಿಧ ವ್ಯಕ್ತಿಗಳು, ಆಯಾ ಮತದಾರರಲ್ಲದ ಕ್ಷೇತ್ರದಿಂದ ನಿರ್ಗಮಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಬಹಿರಂಗ ಪ್ರಚಾರ ಮೇ 3ರಂದು ಶುಕ್ರವಾರ ಸಂಜೆ 5ಕ್ಕೆ ಅಂತ್ಯಗೊಂಡಿದೆ. ಈ ಅವಧಿಯ ನಂತರ ಆಯಾ ಕ್ಷೇತ್ರಗಳ ಮತದಾರರಲ್ಲದವರು, ಕ್ಷೇತ್ರಗಳಲ್ಲಿ ಇರುವಂತಿಲ್ಲ.  ಕೂಡಲೇ ಕ್ಷೇತ್ರದಿಂದ ನಿರ್ಗಮಿಸಬೇಕು. ಬೇರೆ ಬೇರೆ ಕ್ಷೇತ್ರದಿಂದ ಪ್ರಚಾರಕ್ಕಾಗಿ ಆಗಮಿಸಿದ ರಾಜಕೀಯ ವ್ಯಕ್ತಿಗಳು, ಇತರರು ಕೊಪ್ಪಳ ಜಿಲ್ಲೆಯ ವಿವಿಧ ಲಾಡ್ಜ್, ಫಾರ್ಮ್‌ಹೌಸ್, ಹೋಟೆಲ್ ಮತ್ತು ಇತರ ಸ್ಥಳಗಳಲ್ಲಿ ತಂಗಿರುವ ಸಾಧ್ಯತೆಗಳಿದ್ದು, ಅಂಥ ವ್ಯಕ್ತಿಗಳು ಕೂಡಲೇ ಅಲ್ಲಿಂದ ನಿರ್ಗಮಿಸಬೇಕು. ಜಿಲ್ಲೆಯ ಎಲ್ಲ ಲಾಡ್ಜ್, ಫಾರ್ಮ್ ಹೌಸ್, ಹೋಟೆಲ್ ಇತರೆ ವಸತಿ ಗೃಹಗಳ ಸ್ಥಳಗಳನ್ನು ಪರಿಶೀಲಿಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದ್ದು, ಪೊಲೀಸ್ ಇಲಾಖೆ ಪರಿಶೀಲನೆ ನಡೆಸಲಿದೆ. ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣಾ ಆಯೋಗದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.

ಸ್ವೀಪ್: ಮತದಾನ ಹೆಚ್ಚಳ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮೇ 3
ಸ್ವೀಪ್ ಕಾರ್ಯಕ್ರಮದಡಿ ವಿನೂತನ ಕಾರ್ಯಕ್ರಮಗಳ ಮೂಲಕ ಮತ ಜಾಗೃತಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ಜಿಪಂ ಸಿಇಓ ಡಿ.ಕೆ. ರವಿ ವಿಶ್ವಾಸ ವ್ಯಕ್ತಪಡಿಸಿದರು.
ಸ್ವೀಪ್ ಕಾರ್ಯಕ್ರಮದಡಿ ಕೈಗೊಂಡ ಹಲವು ಕ್ರಮಗಳ ಪ್ರಗತಿ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಶೇ. 100ರಷ್ಟು ಮತದಾನ ಮಾಡಬೇಕು. ಜಿಲ್ಲೆಯಲ್ಲಿ ಈಗ ಸುಮಾರು 9.33 ಲಕ್ಷ ಮತದಾರರಿದ್ದಾರೆ. ಇವರಲ್ಲಿ ಎಲ್ಲ ಮತದಾರರಾದರೂ ತಮ್ಮ ಹಕ್ಕನ್ನು ಚಲಾಯಿಸಿದಾಗ ಮಾತ್ರ ಚುನಾವಣೆ ವ್ಯವಸ್ಥೆಗೆ ಅರ್ಥ ಬಂದಂತಾಗುತ್ತದೆ ಎಂದರು.
ಕಳಪೆ ಸಾಧನೆ: 2008ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕುಷ್ಟಗಿ ಕ್ಷೇತ್ರದಲ್ಲಿ ಶೇ. 60.73, ಕನಕಗಿರಿ ಶೇ. 56.30, ಗಂಗಾವತಿ ಶೇ. 63.34, ಯಲಬುರ್ಗಾ ಶೇ. 66.54 ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಶೇ. 65.22ರಷ್ಟು ಅಂದರೆ ಒಟ್ಟಾರೆ ಜಿಲ್ಲೆಯಲ್ಲಿ ಶೇ. 62.39ರಷ್ಟು ಮತದಾನವಾಗಿದೆ. ಅದರಲ್ಲೂ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಶೇ. 56.30ರಷ್ಟು ಮತದಾನವಾಗಿರುವುದು ವಿಷಾದಕರ ಸಂಗತಿ ಎಂದರು.
ವ್ಯಾಪಕ ಕ್ರಮ: ಜಿಲ್ಲೆಯಲ್ಲಿ 32,259 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಎರಡನೇ ಹಂತವಾಗಿ ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಕೇಂದ್ರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮ್ಯಾರಥಾನ್ ಓಟ ಸ್ಪರ್ಧೆ ಏರ್ಪಡಿಸಲಾಯಿತು, ಆಕಾಶವಾಣಿ ಸಹಕಾರದಿಂದ ನೇರ-ಫೋನ್-ಇನ್ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಶಾಲಾ ಮಕ್ಕಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಯೋಗದೊಂದಿಗೆ ಆಯಾ ಪ್ರದೇಶಗಳಲ್ಲಿ ಪ್ರಭಾತ ಪೇರಿ ನಡೆಸಿ ಜಾಗೃತಿ ಮೂಡಿಸಲಾಯಿತು.
ಎಲ್ಲ ವಿದ್ಯಾರ್ಥಿಗಳ ಪೋಷಕರು, ಪಾಲಕರಿಗೆ ಕಡ್ಡಾಯವಾಗಿ ಮತದಾನದ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಕರಪತ್ರ ಹಂಚಿ, ನೈತಿಕ ಮತದಾನಕ್ಕೆ ಪ್ರೇರೇಪಿಸಲಾಯಿತು, ಜಿಲ್ಲೆಯ ಸುಮಾರು 60ಕ್ಕೂ ಹೆಚ್ಚು ಹೆದ್ದಾರಿ ಫಲಕಗಳಲ್ಲಿ ಮತದಾರರ ಜಾಗೃತಿಗೆ ಫ್ಲೆಕ್ಸ್ ಬೋರ್ಡ್ ಅಳವಡಿಕೆ, ಆಟೋ ರಿಕ್ಷಾದವರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಆಟೋಗಳಿಗೆ ಜಾಗೃತಿ ಫ್ಲೆಕ್ಸ್ ಅಳವಡಿಕೆ, ಬೂತ್ ಮಟ್ಟದ ಅಧಿಕಾರಿಗಳಿಗೆ ಮತದಾರರ ಜಾಗೃತಿಗೆ ತರಬೇತಿ, ಕೊಪ್ಪಳ ನಗರದಲ್ಲಿ ಇದೇ ಪ್ರಥಮ ಬಾರಿಗೆ ಪ್ಯಾರಾಗ್ಲೈಡಿಂಗ್ ಹಾರಾಟದ ಮೂಲಕ ಕರಪತ್ರ ವಿತರಣೆ, ನಗರ, ಸ್ಥಳೀಯ ಸಂಸ್ಥೆಗಳ ವಾಹನಗಳಿಗೆ ಮೈಕ್‌ಸಿಸ್ಟಂ ಅಳವಡಿಸಿ ಮತದಾರರ ಜಾಗೃತಿ ಗೀತೆ ಸೇರಿದಂತೆ ಜಿಲ್ಲಾದ್ಯಂತ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಸ್ವೀಪ್ ವೀಕ್ಷಕರಾದ ರಾಜೀವ್ ನಾಯಕ್, ರಜಿತ್ ಚಂದ್ರನ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಇದ್ದರು.
-------
ಪ್ರಜಾಪ್ರಭುತ್ವ ಯಶಸ್ವಿಗೆ ಮತ ಚಲಾಯಿಸಿ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮೇ 3
ಭಾರತ ದೇಶ ಪ್ರಜಾಪ್ರಭುತ್ವ ಸಿದ್ಧಾಂತಗಳ ತಳಹದಿ ಮೇಲೆ ಸುಭದ್ರವಾಗಿ ನೆಲೆ ನಿಂತಿರುವ ದೇಶ. ಇಲ್ಲಿ ಪ್ರಜೆಗಳೇ, ಪ್ರಭುಗಳು. ನಮ್ಮನ್ನಾಳುವ ದೊರೆಗಳನ್ನು ಆಯ್ಕೆ ಮಾಡುವ ಹೊಣೆ ಎಲ್ಲ ಪ್ರಜೆಗಳ ಮೇಲಿದೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂಬುದು ಜನಪ್ರತಿನಿಧಿಗಳ ಆಯ್ಕೆಗಾಗಿ ರೂಪಿಸಲಾಗಿರುವ ಮಹತ್ವದ ವೇದಿಕೆ. ಮತದಾನ, ಮತದಾರನಿಗಿರುವ ಪ್ರಬಲ ಅಸ್ತ್ರ ಹಾಗೂ ಪವಿತ್ರ ಹಕ್ಕು.
ನಮ್ಮ ದೇಶದ ಸಂವಿಧಾನ ರೂಪಿಸಿರುವ ಮಹನೀಯರು, ದೇಶದ ಪ್ರತಿಯೊಬ್ಬ ಪ್ರಜೆಗೂ ತಮ್ಮ ಕರ್ತವ್ಯ ನಿಭಾಯಿಸುವ ಹೊಣೆಗಾರಿಕೆ ನೀಡಿದ್ದಾರೆ. ಇದು ಕೇವಲ ಹೊಣೆಗಾರಿಕೆ ಅಷ್ಟೇ ಅಲ್ಲ. ನಮ್ಮ ಪವಿತ್ರ ಹಕ್ಕು ಎಂಬುದನ್ನು ನಿರೂಪಿಸುವ ಜವಾಬ್ದಾರಿ ಎಲ್ಲ ಪ್ರಜೆಗಳ ಮೇಲಿದೆ. ಭಾರತ ದೇಶ ಸ್ವತಂತ್ರದ ನಂತರ ಅನೇಕ ಚುನಾವಣೆಗಳನ್ನು ಕಂಡಿದೆ. ಪ್ರತಿ ಚುನಾವಣೆಯಲ್ಲೂ ತಮ್ಮ ಪ್ರತಿನಿಧಿ ಆಯ್ಕೆ ಮಾಡುವ ಕರ್ತವ್ಯವನ್ನು ಎಲ್ಲ ಮತದಾರರು ನಿರ್ವಹಿಸಿದ್ದಾರೆ. ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು, ಚುನಾವಣಾ ಆಯೋಗ, ಪ್ರತಿ ಚುನಾವಣೆ ಸಂದರ್ಭದಲ್ಲೂ ಅನೇಕ ಸುಧಾರಣಾ ಕ್ರಮಗಳನ್ನು ಅನುಸರಿಸುತ್ತಾ ಬಂದಿದೆ. ಮತದಾನ ಪದ್ಧತಿಯಲ್ಲಿಯೂ ಅನೇಕ ಸುಧಾರಣೆಗಳು ಸಾಗಿ ಬಂದಿದ್ದು, ಮತಪತ್ರಗಳ ಬಳಕೆಯ ಬದಲಿಗೆ ಇದೀಗ ವಿದ್ಯುನ್ಮಾನ ಮತ ಯಂತ್ರ ಬಳಸಲಾಗುತ್ತಿದೆ. ಮತದಾನ ವ್ಯವಸ್ಥೆ ಸುಧಾರಿಸಲಷ್ಟೇ ಚಿಂತನೆ ನಡೆಯುತ್ತಿದ್ದ ಕಾಲ ಇದೀಗ ಬದಲಾಗಿದ್ದು, ಮತದಾರರಿಗೆ ಮತದಾನದ ಮಹತ್ವವನ್ನು ತಿಳಿಸಿ, ಅವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಚುನಾವಣಾ ಆಯೋಗ ರಾಜ್ಯದಲ್ಲಿಯೂ ಮತದಾರರ ಜಾಗೃತಿಗೆ ಸ್ವೀಪ್, ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ ಕಾರ್ಯಕ್ರಮ ರೂಪಿಸಿ, ಅನುಷ್ಠಾನಕ್ಕೆ ತಂದಿದೆ. ಕಾರ್ಯಕ್ರಮ ಅನುಷ್ಠಾನಕ್ಕೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳನ್ನೊಳಗೊಂಡಂತೆ ಸಮಿತಿ ರಚಿಸಿ, ಕಾರ್ಯರೂಪಕ್ಕೆ ಇಳಿಸಿದೆ.  
ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಅಭಿಯಾನ, ಜಾಗೃತಿ ಜಾಥಾ, ಪ್ರಭಾತ ಪೇರಿ, ಪ್ರತಿಜ್ಞಾವಿಧಿ ಬೋಧನೆ, ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮತದಾರರು ತಮ್ಮ ಹಕ್ಕನ್ನು ಹಣಕ್ಕೆ, ಮದ್ಯಕ್ಕೆ ಅಥವಾ ಇನ್ನಾವುದೇ ಸಾಮಗ್ರಿಗಳ ಆಮಿಷಕ್ಕೆ ಮಾರಾಟ ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಮನವಿ ಮಾಡಿದ್ದಾರೆ.
ಮತ ಚಲಾಯಿಸದ ವ್ಯಕ್ತಿ, ಯಾವುದೇ ಆರೋಪ ಅಥವಾ ಬೇಡಿಕೆ ಸಲ್ಲಿಸಲು ನೈತಿಕವಾಗಿ ಹಕ್ಕನ್ನು ಕಳೆದುಕೊಂಡಂತೆ, ಮತದಾರ ತನ್ನ ಶಕ್ತಿ ಪ್ರದರ್ಶಿಸಲು ಚುನಾವಣೆಯೇ ಸೂಕ್ತ ವೇದಿಕೆ. ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಿ, ಪ್ರಜಾಪ್ರಭುತ್ವಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಬೇಕು. ಸುಭದ್ರ ದೇಶ ಕಟ್ಟಲು ಮತದಾರರ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯ ಎಂದು ಜಿಪಂ ಸಿಇಓ ಡಿ.ಕೆ. ರವಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement