ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಜೆಪಿ ಗೆಲವಿಗೆ ಮಹಿಳೆಯರ ಒಲವು

Srinivasa Murthy VN
Updated On : 4 May 2013, 11:38 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 3
ಉದ್ಯೋಗ ಶಿಕ್ಷಣ ಸೇರಿದಂತೆ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಪ್ರಕಟಿಸಿದ ಬಿಜೆಪಿ ಸರ್ಕಾರ ಮಹಿಳೆ ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕುವಂತೆ ಮಾಡಿದೆ. ಹೀಗಾಗಿ ಪ್ರಭುದ್ಧ ಮಹಿಳಾ ಮತದಾರರು ಬಿಜೆಪಿಯನ್ನು ಎಂದಿಗೂ ಕೈಬಿಡುವುದಿಲ್ಲ ಎಂಬ ವಿಶ್ವಾಸವನ್ನು ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ವ್ಯಕ್ತಪಡಿಸಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಬ್ಯಾಡಗಿ ಕ್ಷೇತ್ರದ ಚಿನ್ನಿಕಟ್ಟಿ ಗ್ರಾಮದಲ್ಲಿ ಮತ ಯಾಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೀನಮೇಷ: ಮಹಿಳಾ ಮೀಸಲಾತಿ ಕರಡು ಮಸೂದೆ ಅಂಗೀಕಾರಕ್ಕೆ ಬಿಜೆಪಿ ಇಂದಿಗೂ ಬದ್ಧವಾಗಿದೆ. ಆದರೆ, ಕರಡು ಜಾರಿಗೊಳಿಸಲು ಮೀನಮೇಷ ಎಣಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ಲೋಕಸಭೆಯಲ್ಲಿ 3 ಬಾರಿ ತಿರಸ್ಕರಿಸಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದರು.
ಮಹಿಳೆಯರ ಶಾಪ ತಟ್ಟಲಿದೆ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಲೋಕಸಭೆ ಕ್ಷೇತ್ರಕ್ಕೆ ಮಹಿಳೆಯೊಬ್ಬರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವುದಾಗಿ ಹೇಳಿದ ಕಾಂಗ್ರೆಸ್ ನಂತರದ ದಿನಗಳಲ್ಲಿ ಪಾಲಿಸಲಿಲ್ಲವೇಕೆ.. ಎಂದು ಪ್ರಶ್ನಿಸಿದರು ಅವರು ಸೋನಿಯಾ ನಿವಾಸದ ಎದುರು ಮಹಿಳಾ ಮುಖಂಡರ ಕಣ್ಣಲ್ಲಿ ನೀರು ತರಿಸಿದ ಶಾಪದ ಫಲ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿದೆ ಎಂದರು.
ಮಹಿಳೆಯರಿಗೆ ಸೌಲಭ್ಯ: ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಗಿರಿಜಾ ಪಟ್ಟಣಶೆಟ್ಟಿ ಮಾತನಾಡಿ, ಭಾಗ್ಯಲಕ್ಷ್ಮೀ ಬಾಂಡ್, ವಿಧವಾ ವೇತನ, ಸ್ತ್ರೀಶಕ್ತಿ ಸಂಘಗಳ ಸಬಲೀಕರಣ ಸೇರಿದಂತೆ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ವಿಧವಾ ವೇತನ ಹೆಚ್ಚಿಸುವ ಮೂಲಕ ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸಿದೆ ಎಂದರು.
ಹೈನುಗಾರಿಕೆಯಲ್ಲಿ ತೊಡಗುವ ಮಹಿಳೆಯರಿಗೆ ಬಡ್ಡಿರಹಿತ ಸಾಲ ಹಾಗೂ ಪ್ರತಿ ಲೀ. ರು. 2 ಪ್ರೋತ್ಸಾಹಧನ ಪ್ರಕಟಿಸಿದ ಸರ್ಕಾರ ಆರ್ಥಿಕ ಸ್ವಾವಲಂಬಿಯಾಗುವಂತೆ ನೋಡಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯ ಮಹಿಳಾ ಮತದಾರರು ಬಿಜೆಪಿಗೆ ಮತ ಹಾಕುವ ಮೂಲಕ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಕೈ ಬಲಪಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಂದ್ರಪ್ಪ ಮುಚ್ಚಟ್ಟಿ, ಶಂಕರಗೌಡ ಪಾಟೀಲ, ಸಿ.ಆರ್. ಆಲದಗೇರಿ, ವೀರಭದ್ರಪ್ಪ ಬಳ್ಳಾರಿ, ಎಂ.ಆರ್. ಭದ್ರಗೌಡ್ರ, ವಿರೇಂದ್ರ ಶೆಟ್ಟರ, ರಾಜಣ್ಣ ಹೊಂಬರಡಿ, ರುದ್ರೇಶ ಚನ್ನಗೌಡ್ರ, ರೋಹಿತ್ ರಾಯ್ಕರ್, ಶೇಖರಗೌಡ ಗೌಡ್ರ ಇನ್ನಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್‌ನಿಂದ ಸುಭದ್ರ ಸರ್ಕಾರ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 3
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಲಿದೆ. ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಪಕ್ಷದ ಅಭ್ಯರ್ಥಿ ಬಸವರಾಜ ಶಿವಣ್ಣನವರ ಮನವಿ ಮಾಡಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿ, ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರದಿಂದ ಜನತೆ ಬೇಸತ್ತಿದ್ದಾರೆ. ಸ್ವಚ್ಛ ಹಾಗೂ ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ. ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಈ ಬಾರಿ ತಮ್ಮನ್ನು ಆಶೀರ್ವದಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಭ್ರಷ್ಟರ ಕೈಗೆ ಅಧಿಕಾರ ಕೊಡಬೇಕಾಯಿತು. ಅಭಿವೃದ್ಧಿ ಹೆಸರಿನಲ್ಲಿ ರಾಜ್ಯದ ನೆಲ-ಜಲ-ಸಂಪತ್ತನ್ನು ಲೂಟಿ ಮಾಡಿದ್ದಾರೆ, ರಾಜ್ಯದ ಹಿತದೃಷ್ಟಿಯಿಂದ ಸಾಮಾಜಿಕ ನ್ಯಾಯದಡಿ ಅಧಿಕಾರ ನಡೆಸುವ ಕಾಂಗ್ರೆಸ್ ರಾಜ್ಯಕ್ಕೆ ಅನಿವಾರ್ಯವಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ, ಹುಸೇನಸಾಬ್ ದೊಡ್ಮನಿ, ಪರಮೇಶ್ವರಪ್ಪ ಶಿವಣ್ಣನವರ, ಎಸ್.ಸಿ. ಶಿಡೇನೂರ, ಲಿಂಗಪ್ಪ ಕೊಂಬಳಿ, ರೇಖಾ ಹಳೇಮನಿ, ಜಗದೀಶ ಯತ್ತಿನಮನಿ, ಸೋಮಲಿಂಗಪ್ಪ ದೇಸೂರ, ಕನ್ನಪ್ಪ ದೇವಿಹೊಸೂರ, ದೇವೇಂದ್ರಪ್ಪ ಹಳೆಮನಿ, ಮಾಲತೇಶ ಹರಿಜನ, ಸೋಮೇಶ ಗೌಡರ, ಅರುಣಕುಮಾರ ಹಲಗೇರಿ, ಹನುಮಂತಪ್ಪ ಸಾಲಿ ಉಪಸ್ಥಿತರಿದ್ದರು.

ಕೆಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ರೋಡ್ ಶೋ
ಹಿರೇಕೆರೂರು:  ತಾಲೂಕಿನ ಕೋಡ ಗ್ರಾಮದಲ್ಲಿ ಕೆಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಯು.ಬಿ. ಬಣಕಾರ ಮಾತನಾಡಿ, ರಾಜಕೀಯ ವಿರೋಧಿಗಳ ಕುತಂತ್ರದ ಪರಿಣಾಮ ಕಳೆದ 14 ವರ್ಷಗಳಿಂದ ಅಧಿಕಾರದಿಂದ ದೂರವಿದ್ದರೂ ಜನಸಾಮಾನ್ಯರ ಒಡನಾಟದಿಂದ ಹಾಗೂ ಜನಪರ ಹೋರಾಟದಿಂದ ದೂರವಾಗಿಲ್ಲ. ಈ ಬಾರಿ ಯಡಿಯೂರಪ್ಪನವರ ಜನಪರ ಕಾರ್ಯಕ್ರಮಗಳಿಂದ ಬಡವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಕೆಜೆಪಿ ಬೆಂಬಲಿಸುತ್ತಿದ್ದು, ನನ್ನ ಗೆಲವು ನಿಶ್ಚಿತ ಎಂದು ಹೇಳಿದರು. ಕೆಜೆಪಿ ತಾಲೂಕು ಘಟಕದ ಅಧ್ಯಕ್ಷ ಮಹೇಶ ಗುಬ್ಬಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಂಜಪ್ಪ ಗಿಡ್ಡಣ್ಣನವರ, ತಾಪಂ ಅಧ್ಯಕ್ಷೆ ಗದಿಗೆಮ್ಮ ಬಿದರಿ, ಉಪಾಧ್ಯಕ್ಷೆ ರೂಪಾ ಆಡೂರ, ಜಿಪಂ ಸದಸ್ಯರಾದ ಶಾಂತಮ್ಮ ಆನಂದಪ್ಪ ಹಾದಿಮನಿ, ಸುಜಾತಾ ಕೊಟಗಿಮನಿ, ಪಾರ್ವತಿ ಚನ್ನಬಸಪ್ಪ ಬೋಗಾವಿ, ವಿ.ಎಸ್. ಪುರದ, ಮರಬಸಪ್ಪ ಹೊಂಬರಡಿ, ಬಾಬಣ್ಣ ಸೇಕಸನದಿ, ಹಿದಾಯತ್ ಉಲ್ಲಾ ನಾಸೂರ, ಮೆಹಬೂಬ್‌ಸಾಬ್ ಆಲದಗೇರಿ, ನೌಸಾಬ ಕಡೇಮನಿ, ಆಶೀಫ್ ಅಲಿ ಬತ್ತಿ, ಫಕ್ರುದ್ದೀನ್ ನಾತನ, ಜಾವೇದ್ ಹರಿಹರ, ಮದನ್‌ಶಾ ಮಕಾಂದಾರ, ನಿಸಾರ್ ಬಾಳಂಬೀಡ, ಜಿಲಾನಿ ಬಳಿಗಾರ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement