ಸಮೀಕ್ಷೆಯಿಂದ ಫಲಿತಾಂಶ ನಿರ್ಧಾರ ಅಸಾಧ್ಯ
ಬ್ಯಾಡಗಿ: ಯಾವುದೇ ಸಮೀಕ್ಷೆ ಚುನಾವಣೆ ಫಲಿತಾಂಶ ನಿರ್ಧರಿಸಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಅಭ್ಯರ್ಥಿಗಳು ಈ ಹಿಂದೆ ಮಾಡಿದ ಅಭಿವೃದ್ಧಿ ಕಾರ್ಯಗಳೇ ಗೆಲವಿಗೆ ಶ್ರೀರಕ್ಷೆ ಎಂದು ಕೆಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ ಹೇಳಿದರು. ಬ್ಯಾಡಗಿ ಕ್ಷೇತ್ರದ ದೇವಗಿರಿ ಗ್ರಾಮದಲ್ಲಿ ಮತ ಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅಭಿವೃದ್ಧಿ ಕೆಲಸ ಮಾಡದೇ ಕೇವಲ ಹಗರಣಗಳಲ್ಲಿ ತೊಡಗಿರುವ ಕಾಂಗ್ರೆಸ್ ಮುಖಂಡರು ಸುಳ್ಳು ಸಮೀಕ್ಷೆಗಳ ಮೂಲಕ ಮತದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಭಿನ್ನಮತದ ರೋಗಕ್ಕೆ ತುತ್ತಾಗಿರುವ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿದೆ. ಇಂತಹ ಗೊಡ್ಡು ಸಮೀಕ್ಷೆ ಪ್ರಕಟಿಸುವುದರಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸ್ ಗೆಳೆಯಂದಿರು ಅಥೈಸಿಕೊಳ್ಳಲಿ ಎಂದರು. ಕೆಜೆಪಿಗೆ ಕ್ಷೇತ್ರದಲ್ಲಿ ಅಭೂತಪೂರ್ವ ಒಲವು ವ್ಯಕ್ತವಾಗಿದೆ. ಕ್ಷೇತ್ರದಲ್ಲಿ ಕೆಜೆಪಿ ಪರವಾದ ಅಲೆಯಿದೆ. ಮಾಜಿ ಸಿಎಂ ಯಡಿಯೂರಪ್ಪ ಅಭಿವೃದ್ಧಿ ಸಾಧನೆ ಮೆಚ್ಚಿ ಮತದಾರರು ಕೆಜೆಪಿ ಬೆಂಬಲಿಸಲಿದ್ದಾರೆ ಎಂದ ಅವರು, ಹಿಂದಿನ ಯಾವುದೇ ಚುನಾವಣೆಯಲ್ಲಿ ಸೋತ ಉದಾಹರಣೆಯಿಲ್ಲ. ಪ್ರಸಕ್ತ ಚುನಾವಣೆಯಲ್ಲಿಯೂ ಸುಮಾರು 10 ಸಾವಿರ ಮತಗಳ ಅಂತರದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಾಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿದರು. ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ಮುಖಂಡರಾದ ಸುರೇಶ ಯತ್ನಳ್ಳಿ, ಸುಲೇಮಾನವರ, ಜಗದೀಶ ಕಣಗಲಬಾವಿ, ನಿಂಗನಗೌಡ ಪಾಟೀಲ, ಎಂ.ಎಂ. ಪಾಟೀಲ, ವೀರಭದ್ರಪ್ಪ ಗೊಡಚಿ, ಮಹಾಲಿಂಗಪ್ಪ ಗೂಳೇರ, ರಾಮಣ್ಣ ಕೋಡಿಹಳ್ಳಿ, ಸುರೇಶ ಆಸಾದಿ, ರವಿ ಪೂಜಾರ ಇದ್ದರು.
ಮತದಾರರಲ್ಲಿ ಗಟ್ಟಿ ನಿಲುವು: ಕವಿಗಳ ಆಶಯ
ಹಾವೇರಿ: ಪ್ರಸಕ್ತ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗದ ಆದೇಶದಂತೆ ಜಿಲ್ಲಾದ್ಯಂತ ಜಾರಿಯಲ್ಲಿರುವ ಮತದಾರರ ಜಾಗೃತಿ ಕಾರ್ಯಕ್ರಮ ಬುಧವಾರ ಕವಿಗೋಷ್ಠಿ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ಮಾಡಿತು.
ಜಿಲ್ಲಾಡಳಿತ, ಭಾರತದ ಚುನಾವಣಾ ಆಯೋಗ ಹಾಗೂ ಕಸಾಪ ಜಿಲ್ಲಾ ಘಟಕ ಆಶ್ರಯದಲ್ಲಿ ಹಾವೇರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜರುಗಿದ ಕವಿಗೋಷ್ಠಿಯಲ್ಲಿ 22 ಕವಿಗಳು ಪಾಲ್ಗೊಂಡು ಮಾತನಾಡಿದರು.
ಮತದಾರರಿಗೆ ಅರಿವು ಅಗತ್ಯ: ಕವಿಗೋಷ್ಠಿ ಉದ್ಘಾಟಿಸಿದ ಹಿರಿಯ ಕವಿ ಗಂಗಾಧರ ನಂದಿ ಮಾತನಾಡಿ, ಇಂದಿನ ರಾಜಕೀಯ ಸ್ಥಿತಿಗತಿಯಲ್ಲಿ ಮತದಾರರು ತಮ್ಮಿಂದ ಏನೂ ಆಗದು ಎಂಬ ನಿರಾಶೆಯ ಛಾಯೆಯಲ್ಲಿದ್ದಾರೆ. ಮತದಾರರು ಈ ಮನೋಭಾವದಿಂದ ಹೊರಬಂದು ಆಮಿಷಕ್ಕೊಳಗಾಗದೇ ಗಟ್ಟಿತನದಿಂದ ಮತ ಎಂಬ ತಮ್ಮ ಸಾರ್ವಭೌಮ ಅಧಿಕಾರ ಬಳಸಿ, ಉತ್ತಮರು ಆಯ್ಕೆಗೊಳ್ಳುವಂತೆ ಮಾಡಬೇಕೆಂದು ಕರೆ ನೀಡಿ, ಬುದ್ಧಿ ಜೀವಿಗಳೂ, ಕವಿ, ಕಲಾವಿದರೂ ಚುನಾವಣೆಗೆ ನೈತಿಕ ಮೌಲ್ಯ ತುಂಬುವುದಲ್ಲದೇ ಜನರಲ್ಲಿ ಅರಿವು ಮೂಡಿಸಲು ಮುಕ್ತ ಮನಸ್ಸಿನಿಂದ ಮಾತನಾಡಲು ಮುಂದಾಗಬೇಕೆಂದು ಕರೆ ನೀಡಿದರು.
ಶೇ. 80ರಷ್ಟು ಮತದಾನವಾಗಲಿ: ಸ್ವೀಪ್ ಜಿಲ್ಲಾ ಸಮಿತಿ ಅಧ್ಯಕ್ಷ ಉಮೇಶ ಕುಸುಗಲ್ಲ, ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಶೇ. 73ರಷ್ಟು ಮತದಾನವಾಗಿದ್ದು, ಈದೀಗ ಕೈಕೊಂಡಿರುವ ಜಾಗೃತಿ ಕಾರ್ಯಕ್ರಮಗಳ ಪರಿಣಾಮವಾಗಿ ಈ ಪ್ರಮಾಣ ಶೇ. 80ರಷ್ಟಾಗಬೇಕೆಂಬುದು ಚುನಾವಣಾ ಆಯೋಗದ ಆಶಯವಾಗಿದೆ.
ಮೊಳಗಿದ ಜಾಗೃತಿ: ಚುನಾವಣೆಯ ವಿವಿಧ ಆಯಾಮಗಳನ್ನು ಕಣ್ಣಾರೆ ನೋಡುತ್ತಿರುವ ಕವಿಗಳು ತಮ್ಮ ಕವನಗಳ ಮೂಲಕ ವ್ಯವಸ್ಥೆಯ ವಸ್ತುಸ್ಥಿತಿ ಬಿಂಬಿಸಿ ರಾಜಕೀಯ ಸೋಗಲಾಡಿತನವನ್ನು ಬಿಚ್ಚಿಟ್ಟು ಮತದಾರರನ್ನು ಎಚ್ಚರಿಸಿದರು. ಕವಿ ಜೆ.ಎಂ. ಮಠದ, ಓಟು ಕೊಟ್ಟ ಮತದಾರರ ಮರೆತವರನ್ನು ಮರೆತವ ಕಣ್ಣುಮುಚ್ಚಿ ಹಾಲು ಕುಡಿವ ಬೆಕ್ಕು ಎಂದು ಬಣ್ಣಿಸಿ, ಇಂದು ಯಥಾ ಪ್ರಜಾ-ತಥಾ ರಾಜಾ ಎನ್ನುವಂತಾಗಿದೆ ಎಂದು ಇಂದಿನ ಸ್ಥಿತಿ ವಿವರಿಸಿ ಚುನಾವಣೆ ನಂತರ ಜನರನ್ನು ಮರೆಯಬೇಡಿ ಎಂದು ಚಾಟಿ ಬೀಸಿದರು. 22 ಹಿರಿ-ಕಿರಿಯರ ಕವಿಗೋಷ್ಠಿ, ಮತದಾರನ ಆಶೋತ್ತರ ಆತನ ಮತದಲ್ಲೇ ಅಡಗಿದೆ. ಕೇಳೋ ಜಾಣಾ ನಿನ್ನೊಳಗೆ ನೀನು ತಿಳಿದು ನೋಡಣ್ಣ ಎನ್ನುವ ಅಂತಃ ಸಾಕ್ಷಿಯ ಮಾತನ್ನು ಪ್ರತಿಧ್ವನಿಸಿತು.
ಭಾಗವಹಿಸಿದ ಕವಿಗಳು: ಸರ್ವ ಲಕ್ಷ್ಮೀಕಾಂತ ಮೀರಜಕರ, ಪ್ರಕಾಶ ಶಿರಗಂಬಿ, ಗದಿಗೆಯ್ಯ ಸ್ವಾಮಿ ಕಾರಿಕಂಠಿಮಠ, ಎಂ.ಬಿ. ಹುಲಗಣ್ಣನವರ, ಪರಿಮಳಾ ಜೈನ್, ಲಿಂಗರಾಜ ಸೊಟ್ಟಪ್ಪನವರ, ಶೀಲಾ ರಿತ್ತಿ, ಎಚ್.ಆರ್. ವೆಂಕಣ್ಣನವರ, ಬಸಪ್ಪ ಮಲ್ಲೇರ್, ಉಷಾ ಪಾಟೀಲ್, ಬಿ.ಎಚ್. ನಾಯಕ, ಬಸವರಾಜ ಪೂಜಾರ, ಪಿ.ಕೆ. ಇಚ್ಚಂಗಿ, ಜೆ.ಎಂ. ರಾಜಶೇಖರ, ಚನ್ನಬಸ್ಸಪ್ಪ ನಾಡರ್, ಶ್ವೇತಾ ಕೋರಿ, ರಾಜೇಂದ್ರ ಪ್ರಸಾದ, ಸಂಗಮೇಶ ಗಣಿ, ವೀರೇಶ ಹ್ಯಾಡ್ಲ ಪಾಲ್ಗೊಂಡಿದ್ದರು. ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸಿದ್ದರು.