ಬಸವಣ್ಣವರ ಆದರ್ಶ ಪ್ರಸ್ತುತ: ನಾಗರಾಜ
ಶಿಗ್ಗಾಂವಿ: 12ನೇ ಶತಮಾನದ ಮಹಾನ್ ಮಾನವತಾವಾದಿ ಬಸವಣ್ಣ ಸಮಾನತೆಯ ಸಮಾಜ ನಿರ್ಮಾಣದ ಹರಿಕಾರ, ವರ್ಗಬೇಧ ರಹಿತ, ಲಿಂಗಬೇಧ ರಹಿತವಾದ ಕಾಯಕ ಪ್ರಧಾನ ಸಮಾಜ ನಿರ್ಮಾಣ ಬಸವಣ್ಣನ ಗುರಿಯಾಗಿತ್ತು. ಬಸವಣ್ಣನ ಆದರ್ಶ ಹಿಂದಿಗಿಂತ ಇಂದು ಪ್ರಸ್ತುತ ಎಂದು ಶಿಗ್ಗಾಂವಿಯ ಚನ್ನಪ್ಪ ಕುನ್ನೂರ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ತಿಳಿಸಿದರು.
ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಡಿಇಡಿ ಕಾಲೇಜಿನಲ್ಲಿ ನಡೆದ ಬಸವ ಜಯಂತಿ ಆಚರಣೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಬೇರೂರಿದ ಅಸಮಾನತೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದ ಬಸವಾದಿ ಶರಣರು ಸ್ನೇಹ ಸೌಹಾರ್ದದ ಅಡಿ ಧರ್ಮದ ತಳಹದಿಯ ಮೇಲೆ ಸುಂದರ ಸಮಾಜ ರಚನೆ ಕನಸು ಕಂಡಿದ್ದರು ಎಂದರು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಬೇಕೆಂದು ಭೋಧಿಸಿದ ಬಸವಣ್ಣನವರು ಮನುಷ್ಯತ್ವದ ನೆಲೆಗಟ್ಟಿನಲ್ಲಿ ಬದುಕಬೇಕಾದ ಅವಶ್ಯಕತೆಯನ್ನು 800 ವರ್ಷ ಹಿಂದೆಯೇ ಪ್ರತಿಪಾದಿಸಿದ್ದರು. ಬಸವಣ್ಣವರ ಆ ಕಲ್ಪನೆ ಸಮಾಜ ಇವತ್ತಿನ ಅವಶ್ಯಕತೆಯಾಗಿದೆ ಎಂದು ನಾಗರಾಜ ದ್ಯಾಮನಕೊಪ್ಪ ಹೇಳಿದರು. ವಿಜಯಕುಮಾರ ದೊಡ್ಡಮನಿ, ಕಾರ್ಲ್ಮಾರ್ಕ್ಸ್ನಿಗಿಂತ ವಿಶಿಷ್ಟ ತತ್ವವನ್ನು ಅವನಿಗಿಂತ ಎಂಟುನೂರು ವರ್ಷಮುಂಚೆಯೇ ಪ್ರತಿಪಾದಿಸಿದ ಬಸವಣ್ಣ ಕರ್ನಾಟಕ ಕಂಡ ವಿಶ್ವದ ಶ್ರೇಷ್ಠ ದಾರ್ಶನಿಕ ಎಂದರು. ಕಾಲೇಜಿನ ಪ್ರಾಚಾರ್ಯರಾದ ಮಂಜುಳಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿಗಳು ವಚನ ಪ್ರಾರ್ಥನೆ ಹಾಡಿದರು. ಚೇತನ ಬಾರಿಗಿಡದ ಸ್ವಾಗತಿಸಿದರು. ಹೇಮಲತಾ ರಾಠೋಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಜಯಂತಿ: ಸರ್ಕಾರಿ ನೌಕರರಿಂದ ರಜಾ-ಮಜಾ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 13
ವಚನ ಸಾಹಿತ್ಯದ ಮೂಲಕ ಪ್ರಪಂಚದ ಎಲ್ಲಾ ಜಾತಿ, ಜನಾಂಗಕ್ಕೆ ಧರ್ಮ ಸಂದೇಶ ಸಾರಿದ ಬಸವೇಶ್ವರರ ಜಯಂತಿ ಹೆಸರಿನಲ್ಲಿ ಸರ್ಕಾರಿ ರಜೆ ಪಡೆದಿರುವ ರಾಜ್ಯ ಸರ್ಕಾರಿ ನೌಕರರು, ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ರಜೆ ಹೆಸರಿನಲ್ಲಿ ಮಜಾ ಮಾಡುವುದರೊಂದಿಗೆ ಬಸವಣ್ಣನವರ ಜಯಂತಿಗೆ ಕಳಂಕ ತಂದಿದ್ದಾರೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ ಆರೋಪಿಸಿದರು.
ನಗರದ ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಸಭಾ ಭವನದಲ್ಲಿ ಸರ್ಕಾರದಿಂದ ಬಸವೇಶ್ವರರ ಜಯಂತಿ ಆಚರಿಸುವುದಕ್ಕಾಗಿ ತಾಲೂಕು ಆಡಳಿತ ಮತ್ತು ತಾಪಂ ಮತ್ತು ನಗರಸಭೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ತಾಲೂಕಿನ ವಿವಿಧ ಇಲಾಖೆ ನೌಕರರು ಹಾಗೂ ನಗರಸಭೆ ಸಿಬ್ಬಂದಿ ಭಾಗವಹಿಸಿ, ಮಹಾನ್ ಮಾನವತಾವಾದಿ ಬಸವಣ್ಣನವರಿಗೆ ಗೌರವಿಸುವ ಬದಲು ಅವಮಾನಿಸಿದ್ದಾರೆ.
ನೌಕರರು ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಹಾಗೂ ಬಸವೇಶ್ವರರಿಗೆ ಗೌರವಿಸದಿರಲು ತಾಲೂಕು ದಂಡಾಧಿಕಾರಿಗಳಾದ ತಹಸೀಲ್ದಾರ್ರೇ ಕಾರಣಿಕರ್ತರಾಗಿದ್ದಾರೆ ಎಂದ ಅವರು, ತಹಸೀಲ್ದಾರರು ಬಸವೇಶ್ವರ ಜಯಂತಿ ಕಾರ್ಯಕ್ರಮಕ್ಕೂ ಮುನ್ನ ಎಲ್ಲಾ ಇಲಾಖೆ ಅಧಿಕಾರಿಗಳ ಮತ್ತು ಸುದ್ದಿ ಮಾಧ್ಯಮದವರ ಸಭೆ ಕರೆದು ಎಲ್ಲಾ ಇಲಾಖೆ ನೌಕರರು ಕಡ್ಡಾಯವಾಗಿ ಭಾಗವಹಿಸುವಂತೆ ತಿಳಿಸಿ ಜಯಂತಿ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ನಡೆಸಲು ತಿಳಿಸಿದ್ದರೆ ಹೀಗಾಗುತ್ತಿರಲಿಲ್ಲ.
ಬಸವೇಶ್ವರ ಜಯಂತಿ ಆಚರಣೆಗಾಗಿ ಮುದ್ರಿಸಿರುವ ಆಮಂತ್ರಣ ಪತ್ರವನ್ನು ಗಮನಿಸಿದರೆ ಸಾಕು ಶಿಷ್ಟಾಚಾರ ಉಲ್ಲಂಘಿಸಿದಂತೆ ಕಾಣುತ್ತಿದೆ. ಈ ಕುರಿತು ಸಂಬಂಧಪಟ್ಟವರೊಂದಿಗೆ ಮಾತನಾಡಿ ಮಾಹಿತಿ ಪಡೆದು ಹೋರಾಟಕ್ಕೆ ಮುಂದಾಗುವುದಾಗಿ ಓಲೇಕಾರ ತಿಳಿಸಿದರು.
ದೊಡ್ಡಪೇಟೆಯ ಚರ್ಮನ್ ಚಂದ್ರಪ್ಪ ರೋಡ್ಡನವರ ಮಾತನಾಡಿ, ಸರ್ಕಾರದ ಹೆಸರಿನಲ್ಲಿ ಬಸವೇಶ್ವರ ಜಯಂತಿ ಆಚರಿಸಲೆಂದು ಬಂದಿದ್ದ ತಹಸೀಲ್ದಾರರು ಬಸವೇಶ್ವರರ ಜಯಂತಿಗೆ ಅವಮಾನಿಸಿದ್ದಾರೆ. ಅವರ ವಿರುದ್ಧ ಹೋರಾಟ ನಡೆಸಲು ರೂಪ-ರೇಷೆಗಳನ್ನು ಸಿದ್ಧಪಡಿಸುತ್ತೇವೆಂದು ತಿಳಿಸಿದರು. ಜಿಲ್ಲಾ ಬಿಜೆಪಿ ಮಹಿಳಾ ಅಧ್ಯಕ್ಷೆ ಭಾರತಿ ಜಂಬಗಿ, ವೀರಣ್ಣ ಅಂಗಡಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಅರುಣಕುಮಾರ ಪೂಜಾರ ಇದ್ದರು.
ಹಿರೇಕೆರೂರು: ಬಸವೇಶ್ವರ ಭಾವಚಿತ್ರ ಮೆರವಣಿಗೆ
ಹಿರೇಕೆರೂರು: ತಾಲೂಕು ವಿದ್ಯಾವರ್ಧಕ ಸಹಕಾರಿ ಸಂಘದ ವಿವಿಧ ಶಾಲಾ, ಕಾಲೇಜುಗಳಿಂದ ಆಯೋಜಿಸಿದ್ದ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಮೆರವಣಿಗೆಗೆ ಶಾಸಕ ಯು.ಬಿ. ಬಣಕಾರ ಚಾಲನೆ ನೀಡಿದರು. ಬಳಿಕ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಿವೃತ್ತ ಮುಖ್ಯ ಶಿಕ್ಷಕರಾದ ಎಲ್.ಬಿ. ತೆಂಬದ, ಎನ್.ಎನ್. ನಿಂಗನಗೌಡ್ರ, ಬಿ.ಎಂ. ಹೊಗೆಸಪ್ಪಿನವರ, ಉಪನ್ಯಾಸಕ ಎಸ್. ವೀರಭದ್ರಯ್ಯ, ಪ್ರಾಚಾರ್ಯ ಎಸ್.ಬಿ. ಚನ್ನಗೌಡ್ರ, ಎಂ.ಸಿ. ಕಾರಂಜಿ, ಬಿ.ಪಿ. ಹಳ್ಳೇರ, ಮುಖ್ಯ ಶಿಕ್ಷಕ ಕೆ.ಡಿ. ದೀವಿಗಿಹಳ್ಳಿ, ಸಿ.ಎಸ್. ಹುಲ್ಲತ್ತಿ, ಆರ್.ಕೆ. ಲಮಾಣಿ, ಆರ್.ಎಚ್. ದೊಡ್ಡಮನಿ, ಪಿ.ವಿ. ಸಣ್ಣೇರ ಹಾಗೂ ಸಿಬ್ಬಂದಿ ಹಾಜರಿದ್ದರು.