ನಾಳೆ ಸುವರ್ಣಸೌಧಕ್ಕೆ ಕಬ್ಬಿಗರ ಮುತ್ತಿಗೆ
ಹಾವೇರಿ: ಪ್ರಸಕ್ತ ಸಾಲಿನಲ್ಲಿ ಸರ್ಕಾರ ಪ್ರತಿ ಟನ್ ಕಬ್ಬಿಗೆ 2500 ನಿಗದಿಗೊಳಿಸಿದೆ. ಆದರೆ, 1800ಕ್ಕಿಂತ ಹೆಚ್ಚಿಗೆ ದರ ನೀಡಲಾಗದೆಂದು ಸಂಗೂರಿನ ಜಿಎಂ ಶುಗರ್ಸ್ ಸಕ್ಕರೆ ಕಾರ್ಖಾನೆಯ ಮಾಲೀಕರೇ ಹೇಳಿಕೆ ನೀಡಿದ್ದಾರೆ. ಸರ್ಕಾರ ನಿಗದಿಗೊಳಿಸಿದ ದರವನ್ನೇ ನೀಡುವಂತೆ ಜಿಎಂ ಕಾರ್ಖಾನೆ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ನ. 25ರಂದು ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಜಿಲ್ಲಾ ಕಬ್ಬು ಬೆಳೆಗಾರ ರೈತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.
ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಜಿಲ್ಲಾ ಕಬ್ಬು ಬೆಳಗಾರ ರೈತರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಅಶೋಕರೆಡ್ಡಿ ಮರ್ಚರಡ್ಡೆರ ಮಾತನಾಡಿ, 40 ವರ್ಷದ ಲೀಸ್ ಆಧಾರದ ಮೇಲೆ ಗುತ್ತಿಗೆ ಪಡೆದಿರುವ ಜಿ.ಎಂ. ಶುಗರ್ಸ್ನವರು ಸರ್ಕಾರ ನಿಗದಿಪಡಿಸಿರುವ ದರ ಕೊಡಲು ಸಾಧ್ಯವಿಲ್ಲ ಎಂದಿರುವುದು ಖಂಡನೀಯ. ಸೂಕ್ತ ದರಕ್ಕೆ ಆಗ್ರಹಿಸಿ ಜಿಲ್ಲೆಯ 2 ಸಾವಿರ ರೈತರು ಚಳಿಗಾಲದ ಅಧಿವೇಶನ ಆರಂಭವಾಗುವ ದಿನವೇ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಹೇಳಿದರು.