50 ವಿದ್ಯಾರ್ಥಿನಿಯರಿಗೆ ವಾಂತಿ- ಭೇದಿ
ಹಾನಗಲ್ಲ: ತಾಲೂಕಿನ ಅಕ್ಕಿಆಲೂರು ಬಿಸಿಎಂ ಬಾಲಕಿಯರ ಮೆಟ್ರಿಕ್ ನಂತರದ ಹಾಸ್ಟೆಲ್ನಲ್ಲಿ ಕಲುಷಿತ ಆಹಾರ ಮತ್ತು ನೀರು ಸೇವಿಸಿ 50 ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು 125 ವಿದ್ಯಾರ್ಥಿನಿಯರಿದ್ದಾರೆ. ಈ ಪೈಕಿ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಭಾನುವಾರ ರಾತ್ರಿಯಿಂದಲೇ ವಾಂತಿ- ಭೇದಿ ಆರಂಭವಾಗಿದೆ. ಸೋಮವಾರ ಮುಂಜಾನೆ ಅವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಕೆಲವು ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರು ಪೂರ್ಣ ಗುಣಮುಖರಾಗುವವರೆಗೂ ಚಿಕಿತ್ಸೆ ಕೊಡಿಸಲಾಗುವುದು ಎಂದು ವೈದ್ಯಾಧಿಕಾರಿ ಡಾ. ರಾಜಪ್ಪ ತಿಳಿಸಿದರು.
ವಿದ್ಯಾರ್ಥಿನಿಯರು ವಾಂತಿ-ಭೇದಿಗೆ ತುತ್ತಾಗಿರುವುದನ್ನು ಅರಿತ ಪಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ವೈದ್ಯಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಶಿವಬಸವಶ್ರೀ, ಮಾಜಿ ಸಚಿವ ಸಿ.ಎಂ. ಉದಾಸಿ, ಹಾನಗಲ್ಲ ಪಿಎಸ್ಐ ಮಹದೇವ ಯಲಿಗಾರ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು.