ಧರ್ಮಸ್ಥಳ, ಡಾ ವೀರೇಂದ್ರ ಹೆಗ್ಗಡೆ ಅವಹೇಳನ ಸಲ್ಲದು: ಭಕ್ತರು
ಹಿರೇಕೆರೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದವರ ಬಗ್ಗೆ ಕೆಲವರು ಅವಹೇಳನ ಮಾಡುತ್ತಿರುವುದು ಕ್ಷೇತ್ರದ ಭಕ್ತರಿಗೆ ನೋವುಂಟು ಮಾಡಿದೆ. ಈ ಕುರಿತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಮಂಜುನಾಥ ಸ್ವಾಮಿ ಭಕ್ತ ವೃಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ಗೆ ಮನವಿ ಅರ್ಪಿಸಿತು. ಮುಖಂಡ ಪರಮೇಶಪ್ಪ ಹಲಗೇರಿ ಮಾತನಾಡಿ, ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣ ಎಲ್ಲರಿಗೂ ದುಃಖ ತರುವ ಸಂಗತಿ. ಆದರೆ, ಈ ವಿಷಯ ಮುಂದಿಟ್ಟುಕೊಂಡು ಕೆಲವು ಸಂಘಟನೆಗಳು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದವರನ್ನು ನಿಂದಿಸುತ್ತಿವೆ. ಅಪಪ್ರಚಾರ ಮಾಡುತ್ತ ಭಕ್ತರ ಭಾವನಾತ್ಮಕ ಸಂಬಂಧ ಹಾಳು ಮಾಡುತ್ತಿದ್ದಾರೆ ಎಂದು ದೂರಿದರು. ಹೆಗ್ಗಡೆಯವರು ಪ್ರಚಾರ ಬಯಸದೆ, ಸೇವೆಯಿಂದಲೇ ಭಕ್ತ ಸಮೂಹದ ಪ್ರೀತಿ ಗಳಿಸಿದ್ದಾರೆ. ಧರ್ಮ ನೆಲೆಸಿರುವ ಶ್ರೀ ಕ್ಷೇತ್ರ ಅಥವಾ ದಿವ್ಯತೆಯ ಪರಾಕಾಷ್ಠೆ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಗೆ ಅಪಪ್ರಚಾರ ಸಲ್ಲದು. ನಿಂದನೆಯನ್ನು ಸಮಸ್ತ ಭಕ್ತ ಸಮೂಹ ಖಂಡಿಸುತ್ತದೆ. ಸುಳ್ಳು ಆರೋಪ ಮಾಡುವ ಮೂಲಕ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಂದು ಆಗ್ರಹಿಸಿದರು. ತಹಸೀಲ್ದಾರ್ ಶಕುಂತಲಾ ಚೌಗುಲೆ ಮನವಿ ಸ್ವೀಕರಿಸಿದರು. ಮೃತ್ಯುಂಜಯ ಚಿಂದಿ, ಕರಿಯಪ್ಪ ಮಾಳಗಿ, ರುದ್ರಪ್ಪ ಕೆಂಚಿಕೊಪ್ಪ, ಅನುರಾಧಾ ದೇವಾಂಗದ, ಸುಧಾ ಚಿಂದಿ, ಎಲ್ಲಮ್ಮ ನಿಂಬಣ್ಣನವರ, ರೇಣುಕಾ ಚೌಡಿ, ಪವಿತ್ರಾ ಅಣಜಿ, ಹನುಮಂತಪ್ಪ ಕಣಗೊಟಗಿ, ಪ್ರಕಾಶ ಕೆ., ಕೃಷ್ಣಪ್ಪ ಕುಲಾಲ ಇದ್ದರು.