ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾವೇರಿ ಸಮ್ಮೇಳನ: ಶುರುವಲ್ಲೇ ಅಪಸ್ವರ

Srinivasa Murthy VN
Updated On : 20 Apr 2014, 12:23 pm

- ನಾರಾಯಣ ಹೆಗಡೆ
ಹಾವೇರಿ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲಿ ನಡೆಸಬೇಕು ಎನ್ನುವುದೇ ಈಗ ವಿವಾದ ಹುಟ್ಟುಹಾಕಿದೆ.
ಜಿಲ್ಲಾ ಕೇಂದ್ರ ಹಾವೇರಿಯಲ್ಲಿಯೇ ಸಮ್ಮೇಳನ ನಡೆಸಬೇಕು ಎನ್ನುವುದು ಸಾಹಿತಿಗಳು, ಸಾಹಿತ್ಯಾಸಕ್ತರ ಅಭಿಮತ. ಆದರೆ ತಮ್ಮ ಊರು ರಾಣೆಬೆನ್ನೂರಿನಲ್ಲಿಯೇ ಸಮ್ಮೇಳನ ನಡೆಸಬೇಕು ಎನ್ನುವುದು ಜಿಲ್ಲಾ ಕಸಾಪ ಅಧ್ಯಕ್ಷಜಿ.ಎಸ್. ಮಾಸಣಗಿ ಹಠ. ಸ್ಥಳ ನಿರ್ಧಾರ ಆಗದೇ ಸಮ್ಮೇಳನದ ರೂಪುರೇಷೆ ಸಿದ್ಧಪಡಿಸಲು ಏ. 25ರಂದು ಕಸಾಪ ಕೇಂದ್ರ ಸಮಿತಿ ಕಾರ್ಯಕಾರಿಣಿ ಸಭೆಯೂ ಬೆಂಗಳೂರಿನಲ್ಲಿ ನಿಗದಿಯಾಗಿದೆ. ರಾಣೆಬೆನ್ನೂರನಲ್ಲಿಯೇ ಸಮ್ಮೇಳನ ನಡೆಯಲಿದೆ ಎನ್ನುವ ಅನುಮಾನಗಳಿಗೆ ಇದು ಇಂಬು ನೀಡಿದೆ. ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಸಮ್ಮೇಳನ ಹಾವೇರಿಯಲ್ಲಿ ಎಂದು ಘೋಷಿಸಲಾಗಿತ್ತು. ಆಗಲೇ ಮಾಸಣಗಿ ತಮ್ಮ ಊರಾದ ರಾಣೆಬೆನ್ನೂರಿನಲ್ಲಿಯೇ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದ್ದರು. ಈ ಕುರಿತು ಹಾವೇರಿ ಸೇರಿದಂತೆ ಜಿಲ್ಲಾದ್ಯಂತ ವಿರೋಧ ವ್ಯಕ್ತವಾಗಿತ್ತು. ಅನಂತರ ಸಮ್ಮೇಳನದ ಸ್ಥಳ ನಿಗದಿಗಾಗಿ ಕಸಾಪ ಜಿಲ್ಲಾ ಕಾರ್ಯಕಾರಿಣಿ ಸಭೆ ಕರೆಯಲಾಗಿತ್ತು. ಅಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಮುಂದೆ ಸಭೆ ನಡೆಸಿ ಸ್ಥಳ ನಿಗದಿ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷರೇ ಹೇಳಿಕೆ ಕೊಟ್ಟಿದ್ದರು. ಆದರ ಸಭೆಯನ್ನೂ ಕರೆಯದೇ, ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆಯದೆ ರಾಣಿಬೆನ್ನೂರಿಗೆ ಸ್ಥಳಾಂತರ ಮಾಡಲು ಒಳಗೊಳಗೇ ತಯಾರಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಾಹಿತ್ಯ ಸಮ್ಮೇಳನ ನಡೆಸಲು ಇಡೀ ಜಿಲ್ಲೆಯ ಜನರ ಸಹಭಾಗಿತ್ವ ಬೇಕು. ಅದಕ್ಕಾಗಿ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಬೇಕು. ಎಲ್ಲರೂ ಒಪ್ಪುವ ಸ್ಥಳದಲ್ಲಿ ಸಮ್ಮೇಳನ ನಡೆಯಬೇಕು. ಅದು ಹಾವೇರಿ ಅಥವಾ ರಾಣೆಬೆನ್ನೂರೇ ಆಗಲಿ. ಆದರೆ ಜಿಲ್ಲಾಧ್ಯಕ್ಷರು ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಮಠಾಧೀಶರು, ಸಾಹಿತಿಗಳು, ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಏಕಾಏಕಿಯಾಗಿ ರಾಣೆಬೆನ್ನೂರಿನಲ್ಲಿ ನಡೆಸಲು ಎಲ್ಲ ಸಿದ್ಧತೆ ನಡೆಸಿದ್ದಾರೆ. 'ಜಿಲ್ಲಾಧ್ಯಕ್ಷರು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದಿದ್ದರೆ ಅವರೊಬ್ಬರೇ ಸಮ್ಮೇಳನ ನಡೆಸುತ್ತಾರೆಯೇ? ಜನ, ಜನಪ್ರತಿನಿಧಿಗಳ ಸಹಕಾರ ಇಲ್ಲದೇ ಅವರು ಸಮ್ಮೇಳನ ನಡೆಸಲಿದ್ದಾರೆಯೇ' ಎಂದು ಜಿಲ್ಲಾ ಕಸಾಪ ಪದಾಧಿಕಾರಿ ಪ್ರಭು ಹಿಟ್ನಳ್ಳಿ, ಹಿರಿಯ ಸಾಹಿತಿ ಕೋರಗಲ್ಲ ವಿರೂಪಾಕ್ಷಪ್ಪ ಇತರರು ಪ್ರಶ್ನಿಸಿದ್ದಾರೆ. ಯಾರ ಸಹಕಾರವೂ ಬೇಡ ಎಂಬ ರೀತಿಯಲ್ಲಿ ಅವರು ವರ್ತಿಸುತ್ತಿರುವುದು ಸಾಹಿತ್ಯಾಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಹಾವೇರಿಯಲ್ಲಿ ಏಕೆ ಬೇಡ?
ಅಷ್ಟಕ್ಕೂ ಜಿಲ್ಲಾ ಕೇಂದ್ರದಲ್ಲಿ ಸಮ್ಮೇಳನ ನಡೆಸಲು ಏನು ಕೊರತೆಯಿದೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಜಿಲ್ಲಾಧ್ಯಕ್ಷರು ಉತ್ತರಿಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ, ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಇತರ ಜನಪ್ರತಿನಿಧಿಗಳು ಹಾವೇರಿಯಲ್ಲೇ ಸಮ್ಮೇಳನ ನಡೆಸುವಂತೆ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅವರಲ್ಲಿ ಕೇಳಿಕೊಂಡಿದ್ದಾರೆ. ಜನಪ್ರತಿನಿಧಿಗಳ ಮಾತನ್ನೂ ಲೆಕ್ಕಿಸದೇ ಸಮ್ಮೇಳನ ಸ್ಥಳ ಬದಲಿಸಿದರೆ ಅದು ಯಶಸ್ವಿಯಾಗಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ. ಅಷ್ಟಕ್ಕೂ ಹಾವೇರಿಯಲ್ಲಿ ಸಮ್ಮೇಳನ ನಡೆಸಿದರೆ ನಗರಸಭೆ ರು. 25 ಲಕ್ಷ ನೆರವು ನೀಡುವುದಾಗಿ ಘೋಷಿಸಿದೆ. ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳುವುದಾಗಿಯೂ ತಿಳಿಸಿದೆ. ವಸತಿ, ಕಾರ್ಯಕ್ರಮ ನಡೆಸಲು ಅಗತ್ಯ ಸ್ಥಳ ಇಲ್ಲಿದೆ. 'ಎಷ್ಟೇ ಜನ ಬಂದರೂ ನಾವು ಅನ್ನ ದಾಸೋಹ ಮಾಡುತ್ತೇವೆ' ಎಂದು ಇಲ್ಲಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದ್ದಾರೆ.

ವಿಭಿನ್ನ ಹೇಳಿಕೆ
'ಏ. 25ರಂದು ಕಸಾಪ ಕಾರ್ಯಕಾರಿಣಿ ಸಭೆ ಕರೆಯಲಾಗಿದ್ದು, ಅಲ್ಲಿ ಸರ್ವಾನುಮತದ ಮೇರೆಗೆ ಸ್ಥಳ ನಿಗದಿ ಮಾಡಲಾಗುವುದು' ಎಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ. ಆದರೆ, ಜಿಲ್ಲಾಧ್ಯಕ್ಷ ಎಸ್.ಬಿ. ಮಾಸಣಗಿ ಹೇಳುವುದೇ ಬೇರೆ. 'ಈಗಾಗಲೇ ರಾಣೆಬೆನ್ನೂರಿನಲ್ಲಿ ಸಮ್ಮೇಳನ ನಡೆಸಲು ತೀರ್ಮಾನವಾಗಿದೆ. ಏ. 25ರ ಕಾರ್ಯಕಾರಿಣಿ ಸಭೆಯಲ್ಲಿ ಸಮ್ಮೇಳನದ ರೂಪುರೇಷೆಗಳ ಕುರಿತು ಚರ್ಚಿಸಲಾಗುವುದು' ಎನ್ನುತ್ತಾರೆ ಅವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement