ರಾಣಿಬೆನ್ನೂರು: 81ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಕಸಾಪ ಜಿಲ್ಲಾಧ್ಯಕ್ಷರ ಮೂಲಕವೇ ಚುನಾಯಿತ ಪ್ರತಿನಿಧಿಗಳು ತಮ್ಮ ಒಮ್ಮತದ ಅಭಿಪ್ರಾಯವನ್ನು ನಮ್ಮ ಬಳಿ ಪ್ರಸ್ತಾಪಿಸಬೇಕು. ಈ ಕುರಿತು ಶೀಘ್ರ ಒಮ್ಮತದ ನಿರ್ಧಾರವನ್ನು ತಮ್ಮೆದುರು ತಿಳಿಸಲು ಜನಪ್ರತಿನಿಧಿಗಳು ಮುಂದಾಗದಿದ್ದಲ್ಲಿ ಜಿಲ್ಲೆಗೆ ತಾವು ನೀಡಿರುವ ಆಹ್ವಾನ ವಾಪಸ್ ಪಡೆದು ಬೇರೆ ಜಿಲ್ಲೆಗೆ ಸಮ್ಮೇಳನ ಆಹ್ವಾನ ನೀಡಲು ತಾವು ಸಿದ್ಧರಿದ್ದೇವೆ ಎಂದು ಕಸಾಪ ರಾಜ್ಯಾಧ್ಯಕ್ಷ ಪುಂಡಲಿಕ ಹಾಲಂಬಿ ಹೇಳಿದರು.
ಧಾರವಾಡದಿಂದ ಬೆಂಗಳೂರಿಗೆ ತೆರಳುವ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶತಮಾನೋತ್ಸವ ಸಂಭ್ರಮಾಚರಣೆಯ ಹಂತ ತಲುಪಿರುವ ಕಸಾಪ 81ನೇ ನುಡಿ ಹಬ್ಬ ಆಚರಿಸುವ ಭಾಗ್ಯವಂತರೆಂದು ಕರೆಯಿಸಿಕೊಳ್ಳುವ ಹಾವೇರಿ ಜಿಲ್ಲೆಯ ಸಮಸ್ತ ಕನ್ನಡಾಭಿಮಾನಿಗಳು, ಜನಪ್ರತಿನಿಧಿಗಳು ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರೆಲ್ಲ ಒಂದಾಗಿ ಜಿಲ್ಲೆಯ ಯಾವ ತಾಲೂಕಿನಲ್ಲಿ 81ನೇ ನುಡಿಹಬ್ಬವನ್ನಾಚರಿಸಿದರೆ ಸೂಕ್ತವೆಂಬುದನ್ನು ನಿರ್ಣಯಿಸಿ ತಮಗೆ ತಿಳಿಸಿದಲ್ಲಿ ಆ. 17ರಂದು ಧಾರವಾಡದಲ್ಲಿ ನಡೆಯಲಿರುವ ಕಸಾಪ ಶತಮಾನೋತ್ಸವ ಸಂಭ್ರಮಾಚರಣೆ ಸಂಭ್ರಮದಲ್ಲಿ ಸೇರಲಿರುವ ಕಸಾಪ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತಾವು ಕೈಗೊಂಡಿರುವ ಅಂತಿಮ ನಿರ್ಣಯ ಪ್ರಕಟಿಸುವುದಾಗಿ ತಿಳಿಸಿದರು.
ಕನ್ನಡ ನಾಡು, ನುಡಿಗಾಗಿ ಹಗಲಿರುಳು ಶ್ರಮಿಸಿದ ತಾವು ರಾಜ್ಯದ ಯಾವ ಸ್ಥಳದಲ್ಲಾದರೂ 81ನೇ ಸಮ್ಮೇಳನ ತೊಂದರೆ ಇಲ್ಲದೆ ನಡೆದರೆ ಸಾಕೆಂದು ನಂಬಿದ್ದು, ಸ್ಥಳ ನಿಗದಿಗಾಗಿ ಜಿಲ್ಲೆಯಿಂದ ಜಿಲ್ಲೆಗೆ ಪೈಪೋಟಿ ನಡೆಯುವುದನ್ನು ನೊಡಿದ್ದೇವು. ಆದರೆ, ಹಾವೇರಿ ಜಿಲ್ಲೆಯಲ್ಲಿ ತಾಲೂಕುಗಳ ಮಧ್ಯ ಸ್ಥಳ ನಿಗದಿಗಾಗಿ ಗೊಂದಲ ಉಂಟಾಗಿರುವುದಲ್ಲದೆ, ಸಮ್ಮೇಳನ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಎತ್ತಂಗಡಿ ಮಾಡುವ ವಾತಾವರಣ ಸೃಷ್ಟಿಯಾಗಿದ್ದು ಬೇಸರವಾಗಿದೆ ಎಂದರು.