ಶಿಗ್ಗಾಂವಿ: ಶಿಗ್ಗಾಂವಿ ಪುರಸಭೆ ವ್ಯಾಪ್ತಿಯ ಹುಬ್ಬಳ್ಳಿ-ಹಾವೇರಿ ಮಧ್ಯದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಹಾಗೂ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಬಿಡಾಡಿ ದನಗಳ ಹಾವಳಿಯಿಂದಾಗಿ ದಿನನಿತ್ಯ ಅಪಘಾತಗಳು, ಅವಘಡಗಳು ಜರುಗುತ್ತಲೆ ಇವೆ. ಇದನ್ನು ಅರಿತ ಪುರಸಭೆಯಾಗಲಿ, ಪೊಲೀಸ್ ಇಲಾಖೆಯಾಗಲಿ ಕ್ರಮಕ್ಕೆ ಮುಂದಾಗಿಲ್ಲ. ಇನ್ನಾದರೂ ಕ್ರಮ ಜರುಗಿಸಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಬೀದಿ ದನಗಳ ಹಾವಳಿಗಳಿಂದ ರಸ್ತೆ ಅವಘಡಕ್ಕೆ ಆಹ್ವಾನ ನೀಡುವುದು ಸಾಮಾನ್ಯವಾಗಿದೆ. ಇದೀಗ ಬೀದಿ ಹಸುಗಳ ಕಾಟ ಹಾವೇರಿ-ಹುಬ್ಬಳ್ಳಿ ಮಧ್ಯದ ರಾಷ್ಟ್ರೀಯ ಹೆದ್ದಾರಿಯಲ್ಲೂ ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಿದೆ. ಮೊದಲೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಎನ್‌ಎಚ್ 4ರಲ್ಲಿ ನಾ ಮುಂದೆ ತಾ ಮುಂದೆ ಎಂದು ವೇಗದಿಂದ ಸಾಗುವ ವಾಹನ ಸಂಚಾರಕ್ಕೆ ಇಲ್ಲಿ ಆಗಾಗ್ಗೆ ಅಡ್ಡಿಪಡಿಸುತ್ತಿವೆ. ನಗರದಲ್ಲಿಯೂ ದಿನನಿತ್ಯ ಓಡಾಡಿಕೊಂಡಿರುವ ಅಮಾಯಕ ಮೂಕ ಪ್ರಾಣಿಗಳು ರಸ್ತೆಗಳ ಅಂಚಿನಲ್ಲಿ ಮೇಯ್ದು ರಸ್ತೆಯಲ್ಲಿ ದಿನವಿಡಿ ಮಲಗಿ ಬಿಡುತ್ತವೆ. ವೇಗದಿಂದ ಸಾಗುವ ಹೆದ್ದಾರಿ ಬಳಸುವ ವಾಹನ ಚಾಲಕರು ಪೇಚಿಗೆ ಸಿಲುಕಿ ನಿಯಂತ್ರಣ ತಪ್ಪಿ ಸಾಕಷ್ಟು ಅಪಘಾತ, ಅವಘಡ ಸಂಭವಿಸಿದ್ದು, ತಮ್ಮದಲ್ಲದ ತಪ್ಪಿಗೆ ಎಷ್ಟೋ ಸಲ ವಾಹನ ಚಾಲಕರು ಪಶುಗಳಿಗೆ ಮಾಡಿದ ಅಪಘಾತಕ್ಕಾಗಿ ದಂಡ ತೆತ್ತು ಮುಂದೆ ಸಾಗಿಸುವುದರ ಜತೆಗೆ ಪಶುಗಳನ್ನು ಉಳಿಸಲು ಹೊಗಿ ಅಪಘಾತಕ್ಕೊಳಗಾದದ್ದು ಸಾಕಷ್ಟು ಉದಾಹರಣೆಗಳಿವೆ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶಿಗ್ಗಾಂವಿ ಪಟ್ಟಣದ ಪ್ರವಾಸಿ ಮಂದಿರದಿಂದ ಹಿಡಿದು ರಂಭಾಪುರಿ ಕಾಲೇಜುವರೆಗೆ ಎರಡು ಕಿಲೋ ಮೀಟರ್‌ವರೆಗೂ ಹೆಚ್ಚು ಭಾಗ ಊರ ಮಧ್ಯವೇ ಸಾಗುತ್ತದೆ. ಈಗಾಗಲೇ ಅಪಾಯಕಾರಿ ಹೆದ್ದಾರಿ ಪಾರು ಮಾಡಲಾರದೇ ಎಷ್ಟೋ ಅಮಾಯಕ ಜೀವಗಳು ಬಲಿಯಾಗುವ ಜತೆಗೆ ಪಶು ಸಂಪತ್ತು ಕಳೆದುಕೊಂಡವರಿದ್ದಾರೆ. ಮೊದಲೆ ಸರ್ಮಿಸ್ ರಸ್ತೆಗಳಿಲ್ಲದ ಹೆದ್ದಾರಿಗೆ ಸುರಕ್ಷಾ ಕ್ರಮ ಇದುವರೆಗೂ ಜಾರಿಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಕರು, ದನಗಳನ್ನು ಹಾಗೂ ಅಶಕ್ತ ದನಗಳನ್ನು ಕಡಿಮೆ ದರದಲ್ಲಿ ತೆಗೆದುಕೊಂಡು ಬಂದು ಪಟ್ಟಣದಲ್ಲಿ ಬಿಡುವುದು ಅವುಗಳು ದೊಡ್ಡವಾದ ನಂತರ ನಿಗೂಢ ರೀತಿ ಕಣ್ಮರೆಯಾಗುವ ಜಾನುವಾರುಗಳು, ಇಷ್ಟಕ್ಕೂ ಈ ಹಸುಗಳು ಯಾವ ಮಾಲೀಕರಿಗೆ ಸೇರಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಹಸುಗಳು ಬಲಿತು ಬೆಳೆದು ನಿಂತಾಗ ಒಂದೊಂದಾಗಿ ಊರಲ್ಲಿ ಕಾಣೆಯಾಗುತ್ತವೆ. ಪಟ್ಟಣದಲ್ಲಿರುವ ದನಗಳ ವ್ಯಾಪಾರಸ್ಥರು ಊರಲ್ಲಿ ಬಿಟ್ಟು ಬೆಳೆಸಿ ನಂತರ ಕಸಾಯಿಖಾನೆಯಲ್ಲಿ ಮಾಂಸಕ್ಕಾಗಿ ಮಾರಲಾಗುತ್ತದೆ ಎಂಬ ಮಾತು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.
ಚಿಕ್ಕಂದಿನಲ್ಲಿಯೇ ಹಸುಗಳನ್ನು ತಂದು ಬೀದಿಯಲ್ಲಿ ಬಿಡಲಾಗುತ್ತದೆ. ಊರಿನ ಆಸ್ತಿಕರು ದೇವಸ್ಥಾನದ ಹಸುಗಳೆಂದು ಪೂಜೆ ಸಲ್ಲಿಸಿ ಹಣ್ಣು, ತರಕಾರಿ ನೀಡಿ ಬೆಳೆಸುವುದರ ಜತೆಗೆ ಹೊಟ್ಟೆ ತುಂಬುವ ತನಕ ಕಾಳುಗಳನ್ನು ತಿನ್ನಿಸುತ್ತಾರೆ. ಬೆಳೆದು ನಿಂತ ಮೇಲೆ ತಮ್ಮಷ್ಟಕ್ಕೆ ತಾವು ಮಾಯವಾಗುತ್ತವೆ. ನಿಗೂಢ ರೀತಿಯಲ್ಲಿ ಅಕ್ರಮವಾಗಿ ಪಶುಗಳನ್ನು ವಧಾಲಯಕ್ಕೆ ಸಾಗಿಸಲಾಗುತ್ತದೆ ಎನ್ನುವುದು ಮಾತ್ರ ಕೇಳಿ ಬರುತ್ತಿದೆ. ನಂತರ ಅವುಗಳ ಮಾಲೀಕರು ಸದ್ದಿಲ್ಲದೇ ಮಾರಿ ದುಡ್ಡು ಮಾಡಿಕೊಳ್ಳುತ್ತಾರೆ. ಪಶು ಅಕ್ರಮ ದಂಧೆ ಪಟ್ಟಣದ ಮಧ್ಯೆಯೇ ನಿರಂತರವಾಗಿ ಸಾಗಿಸುತ್ತಿದ್ದರೂ ಸಂಬಂಧಿಸಿದವರು ತಲೆ ಕೆಡಿಸಿಕೊಂಡಿಲ್ಲ. ಇನ್ನು ಮುಂದಾದರೂ ಪುರಸಭೆಯವರು ಪೊಲೀಸ್ ಇಲಾಖೆ ಮುಂಜಾಗೃತಾ ಕ್ರಮ ಜರುಗಿಸುತ್ತದೆ ಎಂಬುದು ಸಾರ್ವಜನಿಕರ ಆಂಬೋಣ.