ಗುತ್ತಲ: ಗುತ್ತಲ ಸೇರಿದಂತೆ ಹೋಬಳಿಗೆ ಒಳಪಡುವ ಬಹುತೇಕ ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಗುತ್ತಲ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಭಾಗಶಃ ಮನೆಗಳು ಬಿದ್ದ ವರದಿಯಾಗಿದೆ.
ತೀವ್ರ ಮಳೆಯಿಂದ ಈ ಭಾಗದಲ್ಲಿ ಹರಿದಿರುವ ತುಂಗಭದ್ರಾ ಮತ್ತು ವರದಾ ನದಿಗಳ ನೀರಿನ ಮಟ್ಟ ಹೆಚ್ಚುತ್ತಲಿದೆ. ಗುರುವಾರ ರಾತ್ರಿಯಿಡಿ ಸುರಿದ ಮಳೆಯಿಂದ ಹಾಗೂ ಮಲೆನಾಡ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದ ವರದೆ ತುಂಬಿ ಬಂದಿದ್ದು, ನದಿ ತೀರದ ಜಮೀನುಗಳಿಗೆ ವರದಾ ಹರಿದು ಬಂದಿದ್ದು, ಬಹುತೇಕ ಬೆಳೆದ ಬೆಳೆ ನೀರಿಗೆ ಆಹುತಿಯಾಗಿದೆ. ಇದರಿಂದ ನದಿ ತೀರದಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರೈತ ಸಮುದಾಯವನ್ನು ಚಿಂತೆಗೀಡು ಮಾಡಿದೆ.
ವರದಾ ನದಿ ತೀರದ ಗ್ರಾಮಗಳಾದ ಹಾಲಗಿ, ಮರೋಳ, ಮರಡೂರ, ಹೊಸರಿತ್ತಿ, ಕೊಡಬಾಳ ಮತ್ತು ನೀರಲಗಿ, ಬೆಳವಗಿ, ಗುಡೂರ ಗ್ರಾಮಗಳಲ್ಲಿ ವರದಾ ನದಿ ನೀರಿನ ಪ್ರವಾಹದಿಂದ ತೀರದ ಜಮೀನುಗಳಲ್ಲಿ ನೀರು ನುಗ್ಗಿದ ವರದಿಯಾಗಿದ್ದು, ಹಾಲಗಿ ಗ್ರಾಮದ ಪ್ರಕಾಶ ಮಗರ ಅವರು 2 ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬಿನ ಬೆಳೆಯಲ್ಲಿ ಸಂಪೂರ್ಣ ನೀರು ಆವರಿಸಿದೆ.
ಗುತ್ತಲ ಹೋಬಳಿ ವ್ಯಾಪ್ತಿಯ ಮರಡೂರ 2, ಕೂರಗುಂದದಲ್ಲಿ 1, ತಿಮ್ಮಾಪುರ 1 ಹಾಗೂ ಹಾಲಗಿಯಲ್ಲಿ 2 ಮನೆಗಳು ಬಿದ್ದ ವರದಿಯಾಗಿದ್ದು, ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಶುಕ್ರವಾರ ಸುರಿದ ಮಳೆಯಿಂದ ಮನೆ ಮಾಳಿಗೆಗಳು ಸೋರುತ್ತಲಿವೆ. ಇದರಿಂದ ಕೆಲವೊಂದು ಗ್ರಾಮಗಳಲ್ಲಿ ಹಳೆಯ ಮನೆಗಳಲ್ಲಿ ಜೀವನ ಸಾಗಿಸುತ್ತಿರುವ ಗ್ರಾಮಸ್ಥರು ರಾತ್ರಿಯಿಡೀ ಜಾಗರಣೆ ಅನುಭವಿಸಿದ್ದಾರೆ.
ವರದಾ ನದಿ ಪ್ರವಾಹದ ಮಟ್ಟ ಹೆಚ್ಚಿದ್ದರಿಂದ ಸಮೀಪದ ಗೂಡೂರು ಗ್ರಾಮದ ಸಂಪರ್ಕ ರಸ್ತೆಗೆ ನೀರು ನುಗ್ಗಿದ್ದು ಗ್ರಾಮಸ್ಥರಿಗೆ ಜನಸಂಚಾರ ಸಂಪರ್ಕ ರಸ್ತೆಯಲ್ಲಿ ಬಂದಾಗಿದೆ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಪ್ರತಿವರ್ಷ ಈ ಸಂಪರ್ಕ ರಸ್ತೆ ನದಿ ನೀರಿಗೆ ಆಹುತಿಯಾಗುತ್ತಿದ್ದು, ಅಧಿಕಾರಿಗಳು ಗ್ರಾಮದ ಕಡೆಗಮನಗಹರಿಸಿಲ್ಲ ಎಂದು ನೋಂದ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.