ಹಿರೇಕೆರೂರು: ರಾತ್ರಿಯಿಡಿ ಸುರಿದ ಮಳೆಯಿಂದಾಗಿ ತಾಲೂಕಿನ ಸತ್ತಿಗೀಹಳ್ಳಿ ಮತ್ತು ಶಿರಗಂಬಿ ಗ್ರಾಮಗಳ ಬಳಿ ಹಳ್ಳ ತುಂಬಿ ಹರಿದು ಗ್ರಾಮಸ್ಥರು ಮತ್ತು ರೈತರಲ್ಲಿ ಆತಂಕ ಉಂಟು ಮಾಡಿದೆ.
ಶಿರಗಂಬಿ ಬಳಿ ಹಳ್ಳ ತುಂಬಿ ಹರಿದು ನೀರು ಅನೇಕ ಹೊಲಗಳಿಗೆ ನುಗ್ಗಿ ಅಪಾರ ಹಾನಿಯುಂಟಾಗಿದೆ. ತಿರಕಪ್ಪ ಡಮ್ಮಳ್ಳಿ ಎಂಬುವವರ 10 ಎಕರೆ ತೆಂಗು, ಅಡಕೆ ಮತ್ತು ಬಾಳೆ ತೋಟ ಸಂಪೂರ್ಣ ನೀರಿನಿಂದ ಆವೃತವಾಗಿದೆ. ನಾಗಪ್ಪ ಸೊರಟೂರ ಎಂಬುವವರ ಚೆಂಡು ಹೂ ಮತ್ತು ಹತ್ತಿ ಹೊಲಗಳು ಕೂಡಾ ನೀರಿನಲ್ಲಿ ಮುಳುಗಿವೆ. ಇನ್ನೂ ಅನೇಕ ರೈತರ ಹೊಲಗಳು ಹಳ್ಳ ನೀರಿಗೆ ಬಲಿಯಾಗಿವೆ. ಸತ್ತಿಗೀಹಳ್ಳಿ ಗ್ರಾಮದಲ್ಲಿ ಅನೇಕ ಮನೆಗಳ ಅಂಚಿಗೆ ನೀರು ಬಂದು ಜನರನ್ನು ಆತಂಕಕ್ಕೀಡು ಮಾಡಿದೆ. ಜಯಪ್ಪ ಕುರುಬರ, ಬೂದೆಪ್ಪ ಕುರುಬರ, ಬೂದೆಪ್ಪ ಹೆಗಡೇರ, ಭರಮಪ್ಪ ಕುರುಬರ, ನಿಂಗಪ್ಪ ಕುರುಬರ ಮುಂತಾದವರ ಮನೆಯ ಅಂಚಿಗೆ ನೀರು ಬಂದು ನಿಂತಿದೆ. ರಾತ್ರಿಯಿಡಿ ನಿದ್ದೆಯಿಲ್ಲದೆ ಕುಟುಂಬಗಳು ಕಾಲ ಕಳೆದಿವೆ. ಮೇವಿನ ಬಣವೆಗಳೂ ನೀರಿನಿಂದ ಆವೃತವಾಗಿವೆ. ಗ್ರಾಮದ ಸ್ಮಶಾನ ಮತ್ತು ಮಠಕ್ಕೆ ಹೋಗುವ ರಸ್ತೆಯಲ್ಲಿರುವ ಹಳ್ಳ ತುಂಬಿ ಹರಿದಿದ್ದು ಭಕ್ತರು ಮಠಕ್ಕೆ ಹೋಗದಂತಾಗಿದೆ. ಈ ಹಳ್ಳದಿಂದ ಶಿಗಂಬಿ ಗ್ರಾಮದ ಹಳ್ಳದವರೆಗೆ ಉತ್ತಮ ಕಾಲುವೆ ನಿರ್ಮಿಸಿದರೆ ಇಂತಹ ಸಮಸ್ಯೆಯಿರದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರತಿ ವರ್ಷ ಹಳ್ಳದ ನೀರಿನಿಂದ ಇದೇ ರೀತಿ ಸಮಸ್ಯೆ ಉಂಟಾಗುತ್ತಿದೆ. 2010ರಲ್ಲಿ ಹಳ್ಳಕ್ಕೆ ನೀರು ಬಂದಾಗ ನೀರಿನ ಪ್ರವಾಹದಲ್ಲಿದ್ದ ಎತ್ತುಗಳನ್ನು ರಕ್ಷಿಸಲು ಹೋದ ಶಿದ್ದಪ್ಪ ಹೆಗಡೇರ ಎಂಬ ಯುವಕ ಸಾವಿಗೀಡಾದುದನ್ನು ಇಲ್ಲಿ ಸ್ಮರಿಸಬಹುದು.