ಹಾನಗಲ್ಲ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸುವಂತೆ ಒತ್ತಾಯಿಸಿ ಆ. 4ರಂದು ಸೋಮವಾರ ಕರೆ ನೀಡಿರುವ ಹಾವೇರಿ ಬಂದ್‌ಗೆ ಕನ್ನಡ ಜಾಗೃತಿ ವೇದಿಕೆ ಜಿಲ್ಲಾ ಘಟಕ ಬೆಂಬಲ ವ್ಯಕ್ತಪಡಿಸಿದೆ.
ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪರಶುರಾಮ ಡೂಗನವರ ಪತ್ರಿಕಾ ಪ್ರಕಟಣೆ ನೀಡಿ, ಮಡಿಕೇರಿ ಸಮ್ಮೇಳನದಲ್ಲಿ ಘೋಷಣೆಯಾದಂತೆ ಹಾವೇರಿಯಲ್ಲಿಯೇ ಸಮ್ಮೇಳನ ನಡೆಸಬೇಕು. ಜಿಲ್ಲಾಧ್ಯಕ್ಷರು ಅನವಶ್ಯಕವಾಗಿ ಸ್ಥಳ ಗೊಂದಲ ಸೃಷ್ಟಿಸಬಾರದು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಒಮ್ಮತದ ಅಭಿಪ್ರಾಯ ಸಂಗ್ರಹಿಸಿ ಅದರಂತೆ ನಿರ್ಣಯ ಕೈಗೊಳ್ಳಬೇಕು. ರಾಣಿಬೆನ್ನೂರಿನಲ್ಲಿ ಸಮ್ಮೇಳನ ನಡೆಸುವ ಜಿಲ್ಲಾಧ್ಯಕ್ಷರ ಹೇಳಿಕೆ ಏಕಪಕ್ಷೀಯವಾಗಿದೆ. ಜಿಲ್ಲಾ ಕೇಂದ್ರವಾದ ಹಾವೇರಿಯೇ ಸಮ್ಮೇಳನಕ್ಕೆ ಸೂಕ್ತ ಸ್ಥಳವಾಗಿದ್ದು, ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ ಹಾವೇರಿಯಲ್ಲಿ ಸಮ್ಮೇಳನ ನಡೆಸಲಿ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಯಳ್ಳೂರಿನಲ್ಲಿ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜವನ್ನು ಹರಿದು ಸುಟ್ಟಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರ್ಕಾರ ಕನ್ನಡ ವಿರೋಧಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಶಿಕ್ಷೆ ವಿಧಿಸಬೇಕೆಂದು ಪರಶುರಾಮ ಡೂಗನವರ ಆಗ್ರಹಿಸಿದ್ದಾರೆ.