ಶಿಗ್ಗಾಂವಿ: ಆಧುನಿಕ ಶಿಕ್ಷಣ ವ್ಯವಸ್ಥೆ ವ್ಯಕ್ತಿಯನ್ನು ಅಹಂಕಾರಿಯನ್ನಾಗಿಸುತ್ತಿದೆ. ಅನುಭವ ಮತ್ತು ವಿನಯ ಹೊಂದಿರುವ ಜನಪದರ ನಿಜವಾದ ಜ್ಞಾನಕ್ಕೆ ಗೌರವ-ಮನ್ನಣೆ ಸಿಗಬೇಕಾದ ಅಗತ್ಯತೆ ಇದೆ ಎಂದು ಕನ್ನಡ ವಿವಿ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಗೋಟಗೊಡಿಯ ಕರ್ನಾಟಕ ಜಾನಪದ ವಿವಿ ನಾಗಂದಿಗೆ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಜಾನಪದ ವಿವಿ, ಕನ್ನಡ ವಿವಿ ಹಾಗೂ ಹಳೆ ದರೋಜಿಯ ಬುರ್ರಕಥಾ ಕಲಾವಿದರ ಸಂಘಗಳ ಆಶ್ರಯದಲ್ಲಿ ನಡೆದ ಜನಪದ ಕಲಾವಿದೆ ದರೋಜಿ ಈರಮ್ಮ ವಿಚಾರಗೋಷ್ಠಿ-ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೊಡಮಾಡುವ ಡಿಗ್ರಿಗಳು ವ್ಯಕ್ತಿಯಲ್ಲಿ ಗರ್ವ, ಅಹಂಕಾರ ಹುಟ್ಟುಹಾಕುತ್ತಿವೆ. ವಿದ್ಯೆ, ವಿನಯ ಹಾಗೂ ಅಪಾರ ಜೀವನಾನುಭ ಹೊಂದಿರುವ ಮೂಲ ಜನಪದ ಕಲಾವಿದರಲ್ಲಿರುವ ಜ್ಞಾನಕ್ಕೆ ಗೌರವ-ಬೆಲೆ ಸಿಗುವಂತಾಗಬೇಕು. ಸಮಕಾಲೀನ ಜನಜೀವನಕ್ಕೆ ತುಡಿಯುವ, ಸ್ಪಂದಿಸುವ ಜನಪದ ಮಹಾಕಾವ್ಯಗಳನ್ನು ಹಾಡುವ ಸಹಜ ಕಲಾಪ್ರತಿಭೆ ನಾಡೋಜ ದರೋಜಿ ಈರಮ್ಮನ ಕಲಾಬದುಕು ಮಾದರಿಯಾಗಿದೆ ಎಂದರು. ಕನ್ನಡ ವಿವಿ ಕುಲಸಚಿವ ಪ್ರೊ. ಟಿ.ಪಿ. ವಿಜಯ್ ಮಾತನಾಡಿ, ಮೌಖಿಕ ಪರಂಪರೆಯಲ್ಲಿಯೇ ಈ ದೇಶದ ಸಂಸ್ಕೃತಿ ಇದೆ. ದೇಶಿ ಪರಂಪರೆಯಲ್ಲಿ ಸಾಂಸ್ಕೃತಿಕ ಸಂಗತಿ ಅಡಕವಾಗಿವೆ. ಅವುಗಳ ಪುನರ್ ಶೋಧಕ್ಕೆ ಜನಪದ ಕತೆ, ಕಾವ್ಯ, ಮೌಖಿಕ ಸಾಹಿತ್ಯ ಆಧರಿಸಿ ಚರಿತ್ರೆ ಕಟ್ಟುವ ಪ್ರಕ್ರಿಯೆ ಆರಂಭವಾಗಿದೆ ಎಂದರು.
ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ಮಾತನಾಡಿದರು. ವಿವಿ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ನಾಡೋಜ ಈರಮ್ಮ ಫೌಂಡೇಶನ್‌ನ ಲಾಂಛನ ಬಿಡುಗಡೆಗೊಳಿಸಿದರು. ದರೋಜಿ ಈರಮ್ಮನ ಮೊಮ್ಮಗನಾದ ಅಶ್ವರಾಮ್ ಮಾತನಾಡಿದರು. ಕುಲಸಚಿವ ಪ್ರೊ. ಡಿ.ಬಿ. ನಾಯಕ ಸ್ವಾಗತಿಸಿದರು. ಕುಲಪತಿಯವರ ಆಪ್ತಕಾರ್ಯದರ್ಶಿ ಡಾ. ಬಸಪ್ಪ ಬಂಗಾರಿ ನಿರೂಪಿಸಿದರು. ಪ್ರಾಧ್ಯಾಪಕ ಡಾ. ಕೆ. ಪ್ರೇಮಕುಮಾರ ವಂದಿಸಿದರು. ವಿವಿ ಆನ್ವಯಿಕ ಜಾನಪದ ನಿಕಾಯದ ಡೀನ್ ಪ್ರೊ. ಎಂ. ಚಂದ್ರ ಪೂಜಾರಿ, ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎನ್. ಚಂದು, ಹಂಪಿ ಕನ್ನಡ ವಿವಿ ಬುಡಕಟ್ಟು ವಿಭಾಗದ ಮುಖ್ಯಸ್ಥ ಹಾಗೂ ಡೀನ್ ಡಾ. ಕೆ.ಎಂ. ಮೇತ್ರಿ, ಡಾ. ಚೆಲುವರಾಜು, ಜಾನಪದ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ. ಎಚ್.ಕೆ. ನಾಗೇಶ್ ಹಾಜರಿದ್ದರು. ನಾನಾ ಜನಪದ ಕಲಾ ತಂಡಗಳಿಂದ ಅಮೋಘ ಕಲಾಪ್ರದರ್ಶನ ಜರುಗಿತು.