ಗಂಗಾಧರ ಹಲಗೇರಿ
ಹಿರೇಕೆರೂರು: ಐತಿಹಾಸಿಕ ಮದಗ ಮಾಸೂರು ಕೆರೆ ಭರ್ತಿಯಾಗಿ ಜಲಧಾರೆ ದುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹಿರೇಕೆರೂರು ತಾಲೂಕಿನ ಗಡಿಭಾಗದ ಈ ಕೆರೆ ಐತಿಹಾಸಿಕ ಮಹತ್ವ ಪಡೆಯುವ ಮೂಲಕ ಈ ಭಾದಗ ಜನಮನ ಸೆಳೆದಿದೆ.
ಮಾಯದಂತ ಮಳೆ ಬಂತಣ್ಣ, ಮದಗದ ಕೆರೆಗೆ ಎಂಬ ಜಾನಪದ ಗೀತೆ ಮದಗದ ಕೆಂಚವ್ವನಿಗೆ ಸಂಬಂಧಿಸಿದ ಈ ಐತಿಹಾಸಿಕ ಕೆರೆ ಮಹತ್ವ ತಿಳಿಸುತ್ತಿದೆ. ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ನೀರು ಮದಗದ ಕೆರೆ ಭರ್ತಿಯಾಗಿ ತುಂಬಿ ತುಳುಕುವ ಮೂಲಕ ಜಲಪಾತ ಸೃಷ್ಟಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಕೆರೆಯನ್ನು ಬ್ರಿಟಿಷರ ಸರ್ಕಾರದಲ್ಲಿ ನಿರ್ಮಾಣ ಮಾಡಿದ್ದು, ಬ್ರಿಟಿಷರು ಭಾರತ ಬಿಟ್ಟು ಹೋಗಿ ಹಲವಾರು ದಶಕಗಳು ಕಳೆದಿದ್ದರೂ ಸರ್ಕಾರ ಇದರತ್ತ ಗಮನ ಹರಿಸದಿರುವುದು ದೌರ್ಭಾಗ್ಯ. ಸಾವಿರಾರು ಎಕರೆ ವಿಶಾಲ ಕೆರೆಯಲ್ಲಿ ಸಂಗ್ರಹವಾದ ನೀರನ್ನು ಹಿರೇಕೆರೂರು ತಾಲೂಕಿನ ಎಲ್ಲ ಜಮೀನುಗಳಿಗೆ ಹರಿಯುವಂತೆ ಮಾಡಿ ನೀರಿನ ಸದುಪಯೋಗ ಪಡಿಸಿಕೊಳ್ಳುವ ಅವಕಾಶವಿದ್ದರೂ ತಾಲೂಕಿನಲ್ಲಿ ಇದುವರೆಗೂ ಆಡಳಿತ ಮಾಡಿದ ಎಲ್ಲ ರಾಜಕಾರಣಿಗಳಿಗೆ ತಿಳಿಯದಿರುವುದು ವಿಪರ್ಯಾಸ.
ಪ್ರವಾಸಿ ತಾಣ: ಹಿರೇಕೆರೂರು ತಾಲೂಕಿನಲ್ಲಿ ಪ್ರವಾಸಿ ತಾಣಗಳನ್ನಾಗಿಸಲು ಹಲವಾರು ಅವಕಾಶಗಳಿದ್ದರೂ ಇದರತ್ತ ಗಮನಹರಿಸಿಲ್ಲ. ಮದಗದ ಕೆರೆ ದಂಡೆ ಮೇಲ್ಭಾಗದಲ್ಲಿ ಮದಗದ ಕೆಂಚವ್ವನ ದೇವಸ್ಥಾನ ಜನಮನ ಸೆಳೆದೆರೆ, ಹಿಂದಿನ ಕಾಲದಲ್ಲಿದ್ದ ಬ್ರಿಟಿಷರು ನೂರು ಅಡಿ ಎತ್ತರದ ಗುಡ್ಡವನ್ನು ಸುಮಾರು ಎರಡೂವರೆ ಕಿ.ಮೀಗಿಂತ ಹೆಚ್ಚು ಗುಡ್ಡದಡಿ ಸುರಂಗ ಮಾರ್ಗ ಮಾಡಿ ನೀರಿನ ಕಾಲುವೆ ನಿರ್ಮಿಸಿರುವುದು ನೋಡಲು ಅದ್ಭುತ. ಹಾಗೆಯೇ ಕೆರೆ ದಂಡೆಯಲ್ಲಿ ಮುಂದೆ ಸಾಗಿದರೆ ಕೆರೆಯೂ ಗುಡ್ಡ ಸೀಳಿ ಮುಂದೆ ಸಾಗಿರುವುದು ಇದೀಗ ಜಲಪಾತವಾಗಿ ಕಂಡು ಜೋಗ ಜಲಪಾತ ನೆನಪಿಸುವಂತಿದೆ.
ಅಲ್ಲಿಂದ ಮುಂದೆ ಸಾಗಿದ ಹೆಚ್ಚುವರಿ ನೀರು ಕುಮದ್ವತಿ ನದಿಯಾಗಿ ತಾಲೂಕಿನ ತಿಪ್ಪಾಯಿಕೊಪ್ಪ, ಮಾಸೂರು, ಖಂಡೇಬಾಗೂರು, ಹಿರೇಮೊರಬ, ಯಲಿವಾಲ, ತೋಟಗಂಟಿ, ರಟ್ಟಿಹಳ್ಳಿ, ಮಾದಾಪುರ, ರಾಣಿಬೆನ್ನೂರು ತಾಲೂಕಿನ ಚಿಕ್ಕಮಾಗನೂರು, ಹಿರೇಮಾಗನೂರು, ಗೋಡಿಹಾಳ, ಕುಪ್ಪೆಲೂರು ಮೂಲಕ ಹರಿದು ಅನ್ವೇರಿ ಬಳಿ ಇರುವ ಕೂಡಲ ಎಂಬಲ್ಲಿ ತುಂಗಭದ್ರಾ ನದಿ ಸೇರುತ್ತಿದೆ.
ಈ ಪ್ರವಾಸಿ ತಾಣ ಪ್ರವಾಸೋದ್ಯಮ ಇಲಾಖೆಗೂ ಹೆಚ್ಚಿನ ಲಾಭ ತರುವುದರಲ್ಲಿ ಸಂದೇಹವಿಲ್ಲ. ಈ ಭಾಗದ ಶಾಸಕರು ಪ್ರವಾಸೋದ್ಯಮ ಸಚಿವರ ಗಮನ ಸೆಳೆವ ಮೂಲಕ ತಾಲೂಕನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಶ್ರಮಿಸಬೇಕಿದೆ.