ಜನಪರ ಕಾರ್ಯಗಳಿಂದ ಬದುಕು ಸಾರ್ಥಕ ಜನಪರ ಕಾರ್ಯಗಳಿಂದ ಬದುಕು ಸಾರ್ಥಕ
ಹಾನಗಲ್ಲ: ನಮ್ಮ ಹುಟ್ಟು ಆಕಸ್ಮಿಕ, ಆದರೆ ಬದುಕಿನುದ್ದಕ್ಕೂ ನಾವು ಮಾಡಿದ ಸಾಧನೆಗಳು, ಜನೋಪಯೋಗಿ ಕಾರ್ಯಗಳು, ಜನಸಾಮಾನ್ಯರ ನೆನಪಿನಲ್ಲಿ ಉಳಿಯುವಂತಾದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ಸಿ.ಎಂ. ಉದಾಸಿ ಅವರು ಹಾವೇರಿ ಜಿಲ್ಲೆಯಲ್ಲಿ ಕೈಗೊಂಡ ಕಾಮಗಾರಿಗಳು ಸಾಕ್ಷಿಯಾಗಿವೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ನುಡಿದರು.
ನಗರದ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಮಾಜಿ ಸಚಿವ ಉದಾಸಿ ಅವರ 78ನೇ ಹುಟ್ಟುಹಬ್ಬ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಧೀಮಂತ ವ್ಯಕ್ತಿಗಳ ಬದುಕಿನ ಆದರ್ಶಗಳನ್ನು ಹಾಗೂ ಕಾರ್ಯ ತತ್ಪರತೆಯನ್ನು ಅಳವಡಿಸಿಕೊಳ್ಳಬೇಕು. ಉದಾಸಿ ಅಂತಹವರ ಜೀವನ ಸಾಧನೆಗಳ ಕುರಿತು ಪುಸ್ತಕ ರೂಪದಲ್ಲಿ ಹೊರತಂದು ವಿದ್ಯಾರ್ಥಿಗಳಿಗೆ ನೀಡುವಂತಾದರೆ ಮುಂದಿನ ಪೀಳಿಗೆ ಬದುಕಿನಲ್ಲಿ ಸಾಧನೆ ಗುರಿ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಕ್ರಿಯಾಶಕ್ತಿಯ ವ್ಯಕ್ತಿತ್ವದ ಒಟ್ಟು ಮೊತ್ತದಂತಿರುವ ಉದಾಸಿಯವರು ಹಾನಗಲ್ಲ ಶ್ರೀಮಠದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ನೆನಪಿಸಿದರು.
ಹುಟ್ಟುಹಬ್ಬದ ಆತ್ಮೀಯ ಸನ್ಮಾನ ಸ್ವೀಕರಿಸಿ, ಕೇಕ್ ಕತ್ತರಿಸಿ ಮನದಾಳದ ಮಾತುಗಳನ್ನಾಡಿದ ಮಾಜಿ ಸಚಿವ ಸಿ.ಎಂ. ಉದಾಸಿ, ಅಧಿಕಾರಕ್ಕಿಂತ ಆರೋಗ್ಯ ಹೆಚ್ಚು ನೆಮ್ಮದಿ-ಸಂತೃಪ್ತಿ ನೀಡಿ ನಿರಂತರ ಚಟುವಟಿಕೆಯಲ್ಲಿರುವಂತೆ ಮಾಡುತ್ತದೆ. ಅಧಿಕಾರ ಬಂದಾಗ ಸಾರ್ವಜನಿಕರ ಸಹಕಾರದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಯಶಸ್ಸುಗಳಿಗೆ ಶ್ರದ್ಧೆ, ನಿರಂತರ ಪರಿಶ್ರಮ, ಸಾಮಾಜಿಕ ಕಳಕಳಿ, ಚಿಂತನೆ ಹಾಗೂ ಜನತೆಯ ಶುಭೇಚ್ಛಗಳು ಪೂರಕವಾಗುತ್ತವೆ. ಜಿಲ್ಲೆಯಾದ್ಯಂತ ಶಿಕ್ಷಣ, ನೀರಾವರಿ ವಿದ್ಯುತ್, ರಸ್ತೆ ಸರಿಪಡಿಸಿದರೆ ಆರ್ಥಿಕ ವಿಕಾಸ ಸಾಧ್ಯವಾಗುತ್ತದೆ. ಉನ್ನತ ವ್ಯಕ್ತಿಗಳ ಆದರ್ಶ ಸಾಧನೆಗಳನ್ನು ಎದುರಿಗಿಟ್ಟುಕೊಂಡು ಕೆಲಸ ಮಾಡಬೇಕು. ವಿಫಲತೆಯತ್ತ ಗಮನಹರಿಸಬಾರದು ಎಂದ ಅವರು, ಕಾಲಕಾಲಕ್ಕೆ ಜನತೆ, ಸಹಕಾರ, ಮಾರ್ಗದರ್ಶನ, ಸಲಹೆ ನೀಡಿದ್ದರ ಪರಿಣಾಮವಾಗಿ ತಾವೂ ಈ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಉದಾಸಿ ಅವರ ಧರ್ಮಪತ್ನಿ ನೀಲಮ್ಮ ಉದಾಸಿ, ಪುತ್ರ, ಸಂಸದ ಶಿವಕುಮಾರ ಉದಾಸಿ, ಸಹೋದರರಾದ ಚನ್ನವೀರಪ್ಪ ಉದಾಸಿ, ಸದಾಶಿವಪ್ಪ ಉದಾಸಿ, ಪುತ್ರಿ ಜಯಶ್ರೀ ತಿಳವಳ್ಳಿ ಹಾಗೂ ಕುಟುಂಬದ ಸದಸ್ಯರು ವೇದಿಕೆಯಲ್ಲಿದ್ದರು. ಸಂಸ್ಥೆಯ ನಿರ್ದೇಶಕರಾದ ಎನ್.ಜಿ. ಕುಂಬಾರಿ, ಜಿಎಸ್. ಕೊಂಡೋಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಿಇಡಿ ಕಾಲೇಜು ಪ್ರಾಚಾರ್ಯ ಎನ್. ಸದಾಶಿವಪ್ಪ ಸ್ವಾಗತಿಸಿದರು. ಪ.ಪೂ ಕಾಲೇಜು ಪ್ರಾಚಾರ್ಯ ಟಿ.ಎನ್.ಕಾಮನಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಡಿಇಡಿ ಕಾಲೇಜು ಪ್ರಾಚಾರ್ಯ ಎ.ಐ. ಮಳೆಣ್ಣನವರ ಕಾರ್ಯಕ್ರಮ ನಿರೂಪಿಸಿದರು. ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಎಸ್.ಸಿ. ವಿರಕ್ತಮಠ, ರಾಜೂ ಹೊಳಲದ, ಸಿ.ಎಸ್. ವಸ್ತ್ರದ, ಶ್ರೀಧರ ಉರಣಕರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಮ್ಮ ಹುಟ್ಟುಹಬ್ಬದ ನಿಮಿತ್ತ ಮಾಜಿ ಸಚಿವ ಸಿ.ಎಂ. ಉದಾಸಿ 5000 ಸಾವಿರ ನೋಟ್ ಬುಕ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ಬೃಹತ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 2
ಮಾಜಿ ಸಚಿವ ಸಿ.ಎಂ. ಉದಾಸಿಯವರ 78ನೇ ಹುಟ್ಟುಹಬ್ಬ ಆಚರಣೆ ನಿಮಿತ್ತ ರಕ್ತದಾನ ಶಿಬಿರ ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ನಡೆಯಿತು. ಉದಾಸಿಯವರ ಬೆಂಬಲಿಗ 78 ಕಾರ್ಯಕರ್ತರು ರಕ್ತದಾನ ಮಾಡಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ನೂರಾರು ಬೆಂಬಲಿಗರ ಸಮ್ಮುಖದಲ್ಲಿ ಬೃಹತ್ ಕೇಕ್ ಕತ್ತರಿಸುವ ಮೂಲಕ ಸಿ.ಎಂ. ಉದಾಸಿ ಹುಟ್ಟುಹಬ್ಬ ಆಚರಿಸಿಕೊಂಡರು.
ಇದೇ ಸಂದರ್ಭದಲ್ಲಿ ಸಿ.ಎಂ. ಉದಾಸಿಯವರ ಜೀವನ, ಸಾಧನೆ ಕುರಿತ ವೆಬ್‌ಸೈಟ್‌ನ್ನು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹಾಗೂ ಹರಸೂರ ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಉದ್ಘಾಟಿಸಿದರು.
ಮಾಜಿ ಸಚಿವ, ಶಾಸಕ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಶಾಸಕ ಯು.ಬಿ. ಬಣಕಾರ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ನೆಹರು ಓಲೇಕಾರ, ಜಿ. ಶಿವಣ್ಣ, ಸುರೇಶಗೌಡ ಪಾಟೀಲ, ಸಂಸದ ಶಿವಕುಮಾರ ಉದಾಸಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ, ತಾಪಂ ಅಧ್ಯಕ್ಷೆ ಲಕ್ಷ್ಮವ್ವ ಮೇಲ್ಮುರಿ, ಜಿಪಂ ಸದಸ್ಯರು, ಅಭಿಮಾನಿಗಳು, ಬೆಂಬಲಿಗರು ಮಾಜಿ ಸಚಿವ ಸಿ.ಎಂ. ಉದಾಸಿಯವರಿಗೆ ಶುಭಾಶಯ ಕೋರಿದರು.
ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಸುರೇಶಗೌಡ ಪಾಟೀಲ್, ಸಚಿವ ಎಚ್.ಕೆ. ಪಾಟೀಲ ಅವರ ದಬ್ಬಾಳಿಕೆಯಿಂದಾಗಿ ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಕೈತಪ್ಪಿದೆ ಎಂದು ಆರೋಪಿಸಿದರು.
ಮೆಡಿಕಲ್ ಕಾಲೇಜು ಬೇರೆ ಜಿಲ್ಲೆಗೆ ಹೋದರೂ ಜಿಲ್ಲೆಯ ಶಾಸಕರು ಕೈಕಟ್ಟಿ ಕುಳಿತಿದ್ದಾರೆ ಎಂದ ಸುರೇಶಗೌಡ, ಸರ್ಕಾರ ಜಿಲ್ಲೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.