ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ
ಶಿಗ್ಗಾಂವಿ: ತಾಲೂಕಿನ ಹೊಸೂರ ಯತ್ತಿನಹಳ್ಳಿಯ ನೂತನ ಜಿನಮಂದಿರದಲ್ಲಿ ಭಗವಾನ್ 1008 ಚಂದ್ರಪ್ರಭ ತೀರ್ಥಂಕರ ಜಿನಮೂರ್ತಿಯ ಪ್ರತಿಷ್ಠಾಪನೆ ಹಾಗೂ ಮಾನಸ್ತಂಭೋಪರಿ ಚತುರ್ಸುಖ ಜಿನಬಿಂಬದ ಪ್ರತಿಷ್ಠಾಪನೆ ಮತ್ತು ಗೋಪುರದ ಶಿಖರ ಕಳಶ ಸ್ಥಾಪನಾ ಮಂಗಲ ಕಾರ್ಯಕ್ರಮಗಳಿಗೆ ಶನಿವಾರ ಚಾಲನೆ ನೀಡಲಾಯಿತು.
5 ದಿನಗಳ ಮಂಗಲ ಶುಭ ಕಾರ್ಯಗಳು ವಾತ್ಸಲ್ಯಮೂರ್ತಿ 108 ಪುಣ್ಯಸಾಗರ ಮುನಿ ಮಹಾರಾಜ್ ಹಾಗೂ ಕ್ಷುಲ್ಲಕ ರತ್ನ 105 ಸುಧರ್ಮಗುಪ್ತ ಮಹಾರಾಜ್ ರವರ ಸತ್ಪ್ರೇರಣೆ, ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದಲ್ಲಿ ಆರಂಭಗೊಂಡವು. ಬೆಳಗ್ಗೆ ಸೌಧರ್ಮೇಂದ್ರ ದಂಪತಿ, ಜಿನಮಾತಾಪಿತೃ, ಯಜಮಾನ- ಯಜಮಾನತಿ ಹಾಗೂ ಇತರ ಕಂಕಣಧಾರಿರವರ ಸ್ವಾಗತ ಕಾರ್ಯಕ್ರಮವು ಹರ್ಷೋಲ್ಲಾಸದಲ್ಲಿ ನಡೆಯಿತು. ಇದರೊಡನೆ ಇತರ ಸ್ವರ್ಗ ದೇವತಾ ಪರಿವಾರದ ಕಂಕಣಧಾರಿಗಳು, ಅಷ್ಟಕನ್ನಿಕೆಯರು ವೇಷಭೂಷಣ ಕಿರೀಟ ಧಾರಣೆಗಳೊಂದಿಗೆ ಈ ಸಂದರ್ಭದಲ್ಲಿ ಭಾಗಿಗಳಾಗಿದ್ದರು.
ನಂತರ ನೂತನ ಜಿನಮಂದಿರದ ಮಾನಸ್ತಂಭದ ಮುಂದೆ ಸುವರ್ಣಾಕ್ಷರ ಪೂಜೆಯು, ಪೂಜ್ಯರ ಸಮ್ಮುಖದಲ್ಲಿ ಭಕ್ತಿ ಭಾವದಲ್ಲಿ ಕಂಕಣಬದ್ದ ಪೂಜಾಕರ್ತರಿಂದ ನಡೆಯಿತು. ಪ್ರತಿಷ್ಠಾಪನಾಚಾರ್ಯ ಶ್ರೀಮಂದರ ಭ. ಉಪಾಧ್ಯೆರವರಿಂದ ಮಂತ್ರೋಚ್ಚಾರ, ನಿರೂಪಣೆಯು ಮತ್ತು ಪುರೋಹಿತ ಬಳಗದವರ ಶುಭ ಮಂಗಲ ಮಂತ್ರವಾಚನದಲ್ಲಿ ಧ್ವಜಾರೋಹಣ ವಿಧಿ ಕಾರ್ಯಕ್ರಮವು ನಡೆಯಿತು. ನಂತರ ಧಾರ್ಮಿಕ ಪೂಜಾ ಮಂಟಪದ ಮುಂದೆ ಧ್ವಜಾರೋಹಣ ಹಾಗೂ ಮಂಟಪ ಉದ್ಘಾಟನೆಗಳು ವಿಧಿವತ್ತಾಗಿ ನಡೆದವು.
ಜ್ಯೋತಿ ಪ್ರಜ್ವಲನೆಯೊಂದಿಗೆ ಪಂಚಕಲ್ಯಾಣ ಜಿನಮಹೋತ್ಸವದ ವಿಧಿ ವಿಧಾನಗಳು ಜೈನ ಆಗಮೋಕ್ತಿಯಂತೆ ಪ್ರಾರಂಭಗೊಂಡವು. ಪ್ರಥಮದಿನದ ಗರ್ಭಾವತರಣ ಕಲ್ಯಾಣದ ಪೂಜಾ ವಿಧಿಗಳು ಭಕ್ತ ಸಮೂಹದ ಜಯಕಾರಗಳೊಂದಿಗೆ ಮುನ್ನಡೆದವು. ಈ ಸಂಗೀತಮಯ ಪೂಜಾ ಕಾರ್ಯಗಳಿಗೆ ಅಥಣಿಯ ನೇಮಿನಾಥ್ ಮತ್ತು ಸಂಗಡಿಗರು ಭಕ್ತಿ ಗೀತೆಗಳನ್ನು ಸುಂದರವಾಗಿ ಸಂಯೋಜಿಸಿದ್ದರು. ಮಂಟಪದವರೆಗೊ ಅದ್ಧೂರಿಗೊಂಡ ಮೆರವಣಿಗೆಯಲ್ಲಿ ಆನೆ, ಕುದುರೆಗಳು ಹಾಗೂ ವಾದ್ಯಗೋಷ್ಠಿ ವೃಂದ ಭಾಗಿಗಳಾಗಿ ಶೋಭಾಯಾತ್ರೆಯನ್ನು ವೈಭವೀಕರಿಸಲ್ಪಟ್ಟು, ಆನಂದೋಲ್ಲಾಸವನ್ನು ಬರಿಸಿತು. ಅಲಗೂರಿನ ಆದಿನಾಥ ಮೆಲೋಡಿಯಸ್ ಬ್ಯಾಂಡ್ ವಾದ್ಯದವರು ಸುಶ್ರಾವ್ಯ ಜಿನ ಭಕ್ತಿ ಗೀತೆಗಳನ್ನು ಹಾಡಿ ಮೆರವಣಿಗೆಯನ್ನು ಆಕರ್ಷಕಗೊಳಿಸಿದರು.
ಸೋಮಶೇಖರ್ ಆಯ್ಕೆ
ಹಾವೇರಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾಗಿ ಸೋಮಶೇಖರ ಸುಂಕದ ಆಯ್ಕೆಯಾಗಿದ್ದಾರೆ ಎಂದು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹೇಶ ತಳಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.