ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿದ್ಯಾರ್ಥಿಗಳ ಕಂಪ್ಯೂಟರ್ ಖರೀದಿಗೆ ರು. 3 ಲಕ್ಷ

Srinivasa Murthy VN
Updated On : 3 Feb 2014, 11:42 am

ಬ್ಯಾಡಗಿ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಾಸಕರ ಅನುದಾನದಲ್ಲಿ ರು. 3 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಖರೀದಿಗೆ ಅನುಕೂಲ ಕಲ್ಪಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ತಾಲೂಕಿನ ಶಿಡೇನೂರ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಯ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಮುಖ್ಯ ವಾಹಿನಿಗೆ: ಮಕ್ಕಳು ಶಿಕ್ಷಣದಿಂದ ವಂಚಿತರಾದಲ್ಲಿ ದೇಶ ಅಧೋಗತಿಗಿಳಿಯಲಿದೆ. ಆರ್ಥಿಕವಾಗಿ ದುರ್ಬಲರಿಗೆ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು, ಗುರುಕುಲ ವ್ಯವಸ್ಥೆಯ ಮಾದರಿಯಲ್ಲೇ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿದಾಗ ಮಾತ್ರ ಪ್ರಾಮಾಣಿಕತೆ ಮೌಲ್ಯಗಳು ಮುಂದಿನ ದಿನಗಳಲ್ಲಿ ಬೆಳೆಯಲಿವೆ ಎಂದರು.
ವಸತಿ ಶಾಲೆಯಿಂದ ಪ್ರತಿಭೆ ಮುಂದೆ ಬರಲಿ: ವಸತಿಯುತ ಶಾಲೆಗಳು ವಿದ್ಯಾರ್ಥಿಗಳನ್ನು ಶಾರೀರಿಕ, ಮಾನಸಿಕ ಹಾಗೂ ಶೈಕ್ಷಣಿಕ ಸಮ್ಮಿಲನವಾಗಿವೆ. ಬಡ ಕುಟುಂಬದ ಹಿನ್ನೆಲೆಯಿಂದ ಬಂದಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ರಾಷ್ಟ್ರ ಹಾಗೂ ವಿಶ್ವಕ್ಕೆ ಪರಿಚಯಿಸುವ ಕೆಲಸವಾಗಬೇಕಾಗಿದೆ ಎಂದರು.
ಶಿಕ್ಷಣದಿಂದ ಅಸಾಮಾನ್ಯ ಪ್ರತಿಭೆ: ಸಾನ್ನಿಧ್ಯ ವಹಿಸಿದ್ದ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಮಾತನಾಡಿ, ಮಕ್ಕಳ ಬೌದ್ಧಿಕ ಶಕ್ತಿ ವೃದ್ಧಿಸಲು ಶಿಕ್ಷಣದ ಅವಶ್ಯಕತೆಯಿದೆ. ಶೈಕ್ಷಣಿಕ ವ್ಯವಸ್ಥೆಯಿಂದಾಗಿ ವಿಶ್ವದಲ್ಲಿಯೇ ಅಸಮಾನ್ಯ ಪ್ರತಿಭೆಗಳು ಬೆಳಕಿಗೆ ಬರಲು ಕಾರಣವಾಗಿದ್ದು, ಅಲ್ಲಿ ಪಡೆದಂತಹ ಜ್ಞಾನದದಿಂದ ವ್ಯಕ್ತಿ ಸಮಾಜಕ್ಕೆ ಆದರ್ಶಪ್ರಾಯನಾಗಬಲ್ಲ ಎಂದರು.
ಸರ್ಕಾರದ ಸೌಲಭ್ಯಗಳು ಇಂದು ಶಿಕ್ಷಣವನ್ನು ಮನೆ ಬಾಗಿಲಿಗೆ ತಂದು ನಿಲ್ಲಿಸಿದ್ದು, ಅದನ್ನು ಪಡೆದಂತಹ ನೀವೆಲ್ಲ ಧನ್ಯರು. ವಿಶ್ವವನ್ನೇ ನಡುಗಿಸುವಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳು ದೇಶದಲ್ಲಿದ್ದಾರೆ ಎಂಬುದನ್ನು ಅಮೆರಿಕ ಅಧ್ಯಕ್ಷ ಒಬಾಮಾ ಅವರು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ ಎಂದರು.
ಅತಿಥಿ ಉಪನ್ಯಾಸ ನೀಡಿದ ಪ್ರೊ. ಎಸ್.ಡಿ. ಬಾಲಾಜಿರಾವ್ ಮಾತನಾಡಿ, ದೇಶದಲ್ಲಿ ಹೇರಳವಾಗಿ ದೊರೆಯುತ್ತಿರುವ ಮಾನವ ಸಂಪನ್ಮೂಲವನ್ನು ಸದ್ಭಳಕೆ ಮಾಡಿಕೊಳ್ಳಬೇಕಾಗಿದೆ. ಬುದ್ಧಿ ಇಲ್ಲದವನ ಜೀವನ ಹೋರಾಟಮಯವಾದರೆ, ಶಿಕ್ಷಣ ಪಡೆಯದ ವ್ಯಕ್ತಿಯ ಜೀವನ ಆರ್ಥಿಕ ಸಂಕಷ್ಟದಿಂದ ಬಳಲಬೇಕಾಗುತ್ತದೆ ಎಂದರು.
ದೇಶ ಕಟ್ಟುವಂಥ ತಮ್ಮ ಮೇಲಿರುವ ಗುರುತರ ಜವಾಬ್ದಾರಿ ನಿಭಾಯಿಸುವ ಶಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ದೇಶಭಕ್ತರ, ದಾರ್ಶನಿಕರ ಆದರ್ಶಗಳನ್ನು ರೂಢಿಸಿಕೊಳ್ಳುವ ಮೂಲಕ ತತ್ವ, ಸಿದ್ಧಾಂತಗಳೊಂದಿಗೆ ಆದರ್ಶಪ್ರಾಯ ಬದುಕನ್ನು ನಡೆಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಎಸ್.ಎನ್. ಯಮನಕ್ಕನವರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಸ್.ಸಿ. ಕದರಮಂಡಲಗಿ ವರದಿ ವಾಚಿಸಿದರು.
ವೇದಿಕೆಯಲ್ಲಿ ಜಿಪಂ ಸದಸ್ಯ ಶಂಕ್ರಣ್ಣ ಮಾತನವರ, ಮಾಜಿ ಅಧ್ಯಕ್ಷ ಎಸ್.ಸಿ. ಶಿಡೇನೂರ, ಎಪಿಎಂಸಿ ಸದಸ್ಯ ರಮೇಶ ಸುತ್ತಕೋಟಿ, ತಹಸೀಲ್ದಾರ್ ಶಿವಶಂಕರ ನಾಯಕ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ ಹೊರಪೇಟಿ, ತಾಲೂಕಾಧಿಕಾರಿ ಎಂ. ಅಣ್ಣಪ್ಪ, ಈರಣ್ಣ ಮಲ್ಲಾಡದ, ಪಾಂಡಪ್ಪ ಕಬ್ಬೂರ, ಪರಮೇಶಗೌಡ ತೆವರಿ, ಮಹದೇವಪ್ಪ ಕಿತ್ತೂರ, ಸಿದ್ದಪ್ಪ ಆಲದಕಟ್ಟಿ ಉಮರಸಾಬ್ ಬ್ಯಾಡಗಿ, ಭರಮಗೌಡ ರಾಯಣ್ಣನವರ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement