ಸ್ವಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಿ: ಅಕ್ಕಿ
ಹಿರೇಕೆರೂರು: ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರ ಉಚಿತವಾಗಿ ವಿವಿಧ ತರಬೇತಿ ಗಳನ್ನು ನೀಡುತ್ತಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಮೂಲಕ ಸ್ವಾವಲಂಬಿಗಳಾಗಲು ಸಾಧ್ಯ ಎಂದು ನವೋದಯ ಹಾಗೂ ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಎಚ್.ಎಫ್. ಅಕ್ಕಿ ತಿಳಿಸಿದರು. ತಾಲೂಕಿನ ರಟ್ಟಿಹಳ್ಳಿಯ ಮಹಿಳಾ ಮಂಡಲದಲ್ಲಿ ನವೋದಯ ಹಾಗೂ ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಪಂಕ್ಷನಲ್ ವೋಕೇಶನ ಟ್ರೈನಿಂಗ್ ರಿಸರ್ಚ್ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಕೌಶಲ್ಯ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ಬೆಲೆ ಏರಿಕೆಯ ಪರಿಣಾಮವಾಗಿ ದೈನಂದಿನ ಜೀವನ ನಡೆಸುವುದು ದುಸ್ತರವಾಗಿದೆ. ದುಡಿಮೆ ಇಲ್ಲದಿದ್ದರೆ ಜೀವನ ನಡೆಸುವುದು ಕಷ್ಟಕರ. ಆದ್ದರಿಂದ ಪ್ರತಿಯೊಬ್ಬರೂ ಉದ್ಯೋಗ ಕೈಗೊಳ್ಳುವುದು ಅಗತ್ಯವಾಗಿದೆ. ಬದುಕನ್ನು ಹಸನಾಗಿ ಮಾಡಿಕೊಳ್ಳಲು ಉದ್ಯೋಗ ಮುಖ್ಯವಾಗಿದ್ದು, ಅದಕ್ಕಾಗಿ ಸರ್ಕಾರ ಉಚಿತವಾಗಿ ಕೌಶಲ್ಯ ಆಧಾರಿತ ತರಬೇತಿ ನೀಡುತ್ತಿದೆ. ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಅವರಿಗೆ ಉಚಿತವಾಗಿ ಹೊಲಿಗೆ ತರಬೇತಿ, ಮೊಬೈಲ್ ರಿಪೇರಿ ಸೇರಿದಂತೆ ಮೊದಲಾದ ತರಬೇತಿ ನೀಡುವುದಾಗಿದೆ. ಈ ರೀತಿ ಉಚಿತವಾಗಿ ನೀಡುವ ತರಬೇತಿಗಳ ಸದುಪಯೋಗಪಡಿಸಿಕೊಂಡು ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಗ್ರಾಪಂ ಸದಸ್ಯ ಮಾರುತೆಪ್ಪ ಸುಣಗಾರ, ಸಂಸ್ಥೆಯ ಯೋಜನಾ ಸಂಯೋಜಕ ಸಂತೋಷ ಸಣ್ಣತಮ್ಮಣ್ಣನವರ, ಸಂಪನ್ಮೂಲ ವ್ಯಕ್ತಿ ಮಂಜುಳಾ ಶಿಕಾರಿಪುರ, ಷಣ್ಮುಖಯ್ಯ ಕಬ್ಬಿಣಕಂಥಿಮಠದ, ಗಿರಿಜಮ್ಮ ತೊಗರ್ಸಿ, ಗೀತಾ ಕುಂಬಾರ, ರೂಪಾ ತೊಗರ್ಸಿ ಮೊದಲಾದವರು ಪಾಲ್ಗೊಂಡಿದ್ದರು.