ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗೋವಿನ ಜೋಳ ಮಾರಲು ಹರಸಾಹಸ

Srinivasa Murthy VN
Updated On : 5 Feb 2014, 12:30 pm

ದಿನಕ್ಕೆ ಸಾವಿರಾರು ಹಣ ಖರ್ಚು ಮಾಡಿ ಟ್ರ್ಯಾಕ್ಟರ್ ಬಾಡಿಗೆ ತಂದು, ಬೆಳೆಯನ್ನು ಮಾರಾಟಕ್ಕೆ ತರುವ ರೈತರು ವಾರದ ನಂತರ ಬೆಳೆ ಮಾರಾಟ ಮಾಡಿ ಬಂದ ಅರ್ಧಕ್ಕೂ ಹೆಚ್ಚು ಹಣ ವಾಹನ ಮಾಲೀಕರಿಗೆ ನೀಡುವಂತಾಗಿದೆ. ಆಡಳಿತ ವರ್ಗದ ಮುಂದೆ ನಿತ್ಯವೂ ಮೌಖಿಕವಾಗಿ ಹೇಳಿದರೂ ಸಮಸ್ಯೆ ಆಲಿಸುವ ಆಡಳಿತ ವರ್ಗ ಮಾತ್ರ ಇತ್ತಗಮನ ಹರಿಸುತ್ತಿಲ್ಲ. ಖರೀದಿ ಕೇಂದ್ರ ತೆರೆದು ತಿಂಗಳು ಗತಿಸಿದರೂ ನಿಜವಾದ ರೈತರ ಗೋವಿನ ಜೋಳ ಖರೀದಿಕ್ಕಿಂತ ರೈತರ ಹೆಸರಿನಲ್ಲಿ ವ್ಯಾಪಾರಸ್ಥರ ಗೋವಿನ ಜೋಳವನ್ನೇ ಹೆಚ್ಚು ಖರೀದಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ, ಇದನ್ನು ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಪ್ರಶ್ನಿಸುತ್ತಿಲ್ಲ. ಅಧಿಕಾರಿಗಳ ಲಂಚಗುಳಿತನ ನಡೆಯುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ರೈತರ ಮೇಲಿನ ನಿರ್ಲಕ್ಷ್ಯ ಖಂಡಿಸಿ ಅನೇಕ ಬಾರಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ. ಆದರೆ ಪರಿಸ್ಥಿತಿ ಮಾತ್ರ ಹಾಗೆಯೇ ಮುಂದುವರಿದಿದೆ.
ಶಾಸಕರೂ ಸಹ ರೈತರ ಗೋವಿನ ಜೋಳ ಖರೀದಿಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಜನಪ್ರತಿನಿಧಿಗಳ ಬೆಂಬಲ ಇಲ್ಲದೇ, ಬೆಂಬಲ ಬೆಲೆಗೆ ಬೆಳೆ ಮಾರಾಟ ಮಾಡಲು ನಿತ್ಯವೂ ಹರಸಾಹಸ ಪಡುವಂತಾಗಿದೆ. ವರ್ಷ ಪೂರ್ತಿ ಕಷ್ಟಪಟ್ಟು ಸಾಲ ಮಾಡಿ ಬೆಳೆದ ಗೋವಿನ ಜೋಳದ ಬೆಳೆ ಮಾರಾಟದಿಂದ ತನ್ನ ಆರ್ಥಿಕ ಸಂಕಷ್ಟಕ್ಕೆ ಕೊಂಚ ನೆರವಾಗಬಲ್ಲದು ಎಂಬ ಮಹಾದಾಸೆಯಿಂದ ಹೊತ್ತು ತಂದ ಬೆಳೆ ಸರಿಯಾಗಿ ಖರೀದಿಯಾಗುತ್ತಿಲ್ಲ. ಪರ್ಯಾಯ ದಾರಿ ಕಾಣದೇ ರೈತರು ಹತಾಶೆಗೆ ಒಳಗಾಗುವಂತಾಗಿದೆ. ಎಪಿಎಂಸಿ ಆವರಣದಲ್ಲಿಯೇ ರೈತರು ವಾಸ್ತವ್ಯ ಹೂಡಿದ್ದಾರೆ.
ಎಪಿಎಂಸಿ ವಿಸ್ತಾರವಾದ ಆವರಣದೆಲ್ಲೆಡೆ ಸಾಲುಗಟ್ಟಿ ರೈತರ ಗೋವಿನ ಜೋಳ ಹೊತ್ತು ನಿಂತ ಟ್ರ್ಯಾಕ್ಟರ್ ಸರದಿ ಗಮನ ಸೆಳೆಯತ್ತಿದೆ. ಖರೀದಿ ಕೇಂದ್ರದ ಅಧಿಕಾರಿಗಳ ಅಟ್ಟಹಾಸದಿಂದ ರೈತನ ಗೋಳು ಇಲ್ಲಿ ಕೇಳುವವರಿಲ್ಲದಂತಾಗಿದೆ.  ಅಧಿಕಾರಿಗಳು ಹೇಳಿದಾಗಲೇ ಒಂದು ಬಾರಿ ತೂಕ ಮಾಡಿಸಿ ಮಾರಾಟಕ್ಕಾಗಿ ಸರದಿಯಲ್ಲಿ ನಿಂತಾಗ ಅಂದು ಆತನ ಸರದಿ ಬಾರದಿದ್ದಾಗ ಮರುದಿನ ಮತ್ತೊಂದು ಸಲ ತೂಕ ಮಾಡಿಸುವ ಅಧಿಕಾರಿಗಳ ಮಾತಿನಿಂದ ಆಕ್ರೋಶಗೊಂಡಿರುವ ರೈತರು ಪ್ರತಿ ಬಾರಿಯೂ ತೂಕಕ್ಕೆ ರು. 70 ನೀಡಬೇಕು. ಅದರಂತೆ ಮೂರು ಬಾರಿ ತೂಕ ಮಾಡಿಸಬೇಕಾದ ಅನಿವಾರ್ಯತೆಯೂ ಇಲ್ಲಿ ಸಾಮಾನ್ಯವಾಗಿದೆ.  
ಹಮಾಲರ್ ಕಿರಿಕ್: ಅಧಿಕಾರಿಗಳ ಕಿರಿಕ್ ಒಂದೆಡೆಯಾದರೆ, ಇನ್ನೊಂದೆಡೆ ಎಪಿಎಂಸಿ ಆವರಣದಲ್ಲಿ ಕೆಲಸ ಮಾಡುವ ಹಮಾಲರದ್ದು. ಚೀಲಕ್ಕೆ ಹಮಾಲಿ ಇಂತಿಷ್ಟು ಎಂದು ಸರ್ಕಾರ ದರ ನಿಗದಿಪಡಿಸಿದ್ದರೂ ವ್ಯಾಪಾರಸ್ಥರು ನೀಡುವ ಹೆಚ್ಚಿನ ಹಣಕ್ಕೆ ಹಮಾಲಿ ಮಾಡುತ್ತಿದ್ದಾರೆ. ವ್ಯಾಪಾರಸ್ಥರು ಕೊಟ್ಟಷ್ಟು ಹಣ ಕೊಟ್ಟರೆ ಮಾತ್ರ ಬರುತ್ತೇವೆ ಎನ್ನುತ್ತಾರೆ.
ಸರ್ಕಾರ ರೈತರ ಬೆಳೆದ ಗೋವಿನ ಜೋಳ ಖರೀದಿಗೆ ಇಲ್ಲಿ ಕೇಂದ್ರ ತೆರೆದರೂ ರೈತರ ಹೆಸರಿನಲ್ಲಿ ಗೋವಿನಜೋಳ ತರುವ ವ್ಯಾಪಾರಸ್ಥರು, ಕೇಂದ್ರದ ಅಧಿಕಾರಿಗಳಿಗೆ ಹಣ ಕೊಟ್ಟು ಒಂದೇ ಗಂಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಣ ಕೊಡದ ರೈತರು ಅಧಿಕಾರಿಗಳು ಹೇಳಿದಾಗ ಮಾರಾಟ ಮಾಡಬೇಕು. ಇದರಿಂದ ರೈತರು ಆಕ್ರೋಶಗೊಂಡಿದ್ದಾರೆ. ಕಳೆದ ಐದು ದಿನಗಳಿಂದ ಗೋವಿನ ಜೋಳ ಮಾರಾಟಕ್ಕೆ ಬಂದಿದ್ದ ರೈತರಿಗೆ ಖರೀದಿ ಕೇಂದ್ರದ ಅಧಿಕಾರಿಗಳು, ಗೋದಾಮು ಭರ್ತಿಯಾಗಿವೆ. ತಾತ್ಕಾಲಿಕವಾಗಿ ಖರೀದಿ ಸ್ಥಗಿತಗೊಳಿಸಲಾಗಿದೆ ಎಂದು ಕಾರ್ಯಾಲಯಕ್ಕೆ ನಾಮಫಲಕ ಅಂಟಿಸಿ, ಬೀಗ ಹಾಕಿದ್ದರಿಂದ ರೈತರು ಸೋಮವಾರ ಪ್ರತಿಭಟನೆಗಿಳಿದರು.  ಸುಮಾರು ಒಂದು ಗಂಟೆ ಪ್ರತಿಭಟನೆ ನಡೆಸಿದ ರೈತರು ಎರಡು ದಿನದಲ್ಲಿ ರೈತರ ಗೋವಿನ ಜೋಳ ಖರೀದಿ ಮಾಡಿಕೊಳ್ಳದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪರಿಹಾರ ಸಿಗುವವರೆಗೂ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement