ನಶಿಸುತ್ತಿರುವ ಗ್ರಾಮೀಣ ಕ್ರೀಡೆ: ಶಿವಣ್ಣನವರ ವಿಷಾದ
ಬ್ಯಾಡಗಿ: ಫೆ. 12 ರಿಂದ 16 ರವರೆಗೆ ಗೋವಾದಲ್ಲಿ ನಡೆಯಲಿರುವ ಖೋಖೋ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಜ್ಯೂನಿಯರ್ ಬಾಲಕಿಯರ ರಾಜ್ಯ ತಂಡಕ್ಕೆ ಬ್ಯಾಡಗಿ ಚಿಲ್ಲೀಸ್ ಕ್ಲಬ್ ಹಾಗೂ ರಾಜ್ಯ ಖೋಖೋ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ತರಬೇತಿ ಶಿಬಿರಕ್ಕೆ ಸ್ಥಳೀಯ ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ಬಸವರಾಜ ಶಿವಣ್ಣನವರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳು ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದು ವಿನಾಶದ ಅಂಚು ತಲುಪಿರುವುದು ಖೇದಕರ ಸಂಗತಿ. ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಕಲ್ಯಾಣ ಮಂಟಪ ವಿವಿಧ ಶಾಲೆಗಳಲ್ಲಿ ಉಳಿದು ತರಬೇತಿ ಪಡೆಯಬೇಕಾದ ದುಸ್ಥಿತಿ ಇದೆ ಎಂದರು.
ಇದಕ್ಕೆ ಸರ್ಕಾರಗಳೂ ಒಂದೆಡೆ ಕಾರಣವಾದರೇ ಪ್ರಾಯೋಜಕರ ಕೊರತೆಯಿಂದ ಆರ್ಥಿಕ ಸಂಕಷ್ಟದಲ್ಲಿ ಕ್ರೀಡಾ ಸಂಸ್ಥೆಗಳಿವೆ. ದೇಶದಲ್ಲಿ ಏಕರೂಪ ಕ್ರೀಡಾನೀತಿಗಾಗಿ ಒಲವು ಹೆಚ್ಚಿದ್ದು, ಈ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ಒಂದು ನಿರ್ಧಾರಕ್ಕೆ ಬರಲಿದೆ ಎಂದರು. ನಮ್ಮ ಅಧಿಕಾರಾವಧಿಯಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಬಡ್ಡಿ ವಸತಿ ಶಾಲೆ ನಿರ್ಮಾಣಕ್ಕೆ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಸಂಸ್ಥೆಗೆ ತಾವು ರು. 5 ಲಕ್ಷ ಅನುದಾನ ನೀಡಿದ್ದು, ಸುಸಜ್ಜಿತ ಕ್ರೀಡಾವಸತಿ ಶಾಲೆಯೊಂದನ್ನ್ನು ಆರಂಭಿಸಲಾಗುವುದು ಎಂದರು.
ಬ್ಯಾಡಗಿ ಮೆಣಸಿನಕಾಯಿ ಖ್ಯಾತಿಯಾದಂತೆ, ಕಬಡ್ಡಿ ಖೋಖೋ ಕ್ರೀಡೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳಿದ್ದು, ಕ್ರೀಡಾಪಟುಗಳನ್ನ್ನು ತರಬೇತುಗೊಳಿಸಿ ಕ್ರೀಡಾ ಉತ್ತೇಜನದಲ್ಲಿ ತೊಡಗಿದ್ದಾರೆ. ರಾಜ್ಯಮಟ್ಟದ ಬಹುತೇಕ ತರಬೇತಿ ಶಿಬಿರಗಳು ಪಟ್ಟಣದಲ್ಲಿ ಜರುಗುತ್ತಿದ್ದು, ಜನರ ಸಹಕಾರ ಹಾಗೂ ಪ್ರೋತ್ಸಾಹವೇ ಕಾರಣವೆಂದರು. ತಹಸೀಲ್ದಾರ್ ಶಿವಶಂಕರ ನಾಯಕ, ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಪುರಸಭೆ ಸದಸ್ಯ ಮಂಜುನಾಥ ಬೋವಿ, ಮಾಜಿ ತಾಪಂ ಅಧ್ಯಕ್ಷ ದಾನಪ್ಪ ಚೂರಿ, ಮುಖಂಡ ಬಸವರಾಜ ಸವಣೂರು, ರಾಜ್ಯ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ಮುಕುಂದ, ತರಬೇತುದಾರ ಶಿವರಾಜ ಗುಂಡೆ, ಶಂಕರ ದಡ್ಡಿ, ಪ್ರವೀಣ ಚೂರಿ ಎಂ.ಎಸ್. ಕರ್ಜಗಿ, ಎಸ್.ಆರ್. ಬಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.
ಜೀತೇಂದ್ರ ಸುಣಗಾರ ಸ್ವಾಗತಿಸಿದರು. ಎಂ.ಎಫ್. ಕರಿಯಣ್ಣನವರ ನಿರೂಪಿಸಿದರು. ಎಂ.ಎಸ್. ಹಿಟ್ಟಿಗುಡಿ ವಂದಿಸಿದರು.