ನಿತ್ಯಾನಂದನ ಬಂಧನಕ್ಕೆ ಆಗ್ರಹ: ಶವಯಾತ್ರೆ
ಹಿರೆಕೇರೂರ: ಕನ್ನಡದ ಸಾಫ್ಟ್‌ವೇರ್ ಎಂಜಿನಿಯರ್ ಭಾರದ್ವಾಜ ಅವರನ್ನು ಅಮೇರಿಕ ಸರ್ಕಾರ ಬಂಧಿಸಿದ್ದು, ಕೂಡಲೇ ಭಾರತ ಸರ್ಕಾರ ಅವರನ್ನು ಮರಳಿ ಭಾರತಕ್ಕೆ ವಾಪಸ್ ತರಬೇಕು ಹಾಗೂ ನಿತ್ಯಾನಂದನನ್ನು ಬಂಧಿಸಬೇಕು ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಿತ್ಯಾನಂದನ ಅಣಕು ಶವ ಯಾತ್ರೆನಡೆಸಿ, ಉಪತಹಸೀಲ್ದಾರ್ ಎ.ವಿ. ಶಿಗ್ಗಾವಿ ಅವರಿಗೆ ಮನವಿ ಸಲ್ಲಿಸಿದರು.
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಮೂಲಿಮನಿ ಮಾತನಾಡಿ, ವಿಕೃತಕಾಮಿ ನಿತ್ಯಾನಂದನ ಅಕ್ರಮ ಚಟುವಟಿಕೆ ವಿರುದ್ಧ ಧ್ವನಿಯೆತ್ತಿದ್ದಕ್ಕೆ ಮೈಸೂರಿನ ಮೂಲದವರಾದ ವಿನಯ ಭಾರದ್ವಾಜ್ ಅವರ ವಿರುದ್ಧ ಸುಳ್ಳು ಮೊಕದ್ದಮೆ ಹೂಡಿ ಬಂಧನಕ್ಕೆ ಒಳಪಡಿಸಲಾಗಿದೆ. ತಕ್ಷಣ ಅವರನ್ನು ಬಿಡುಗಡೆ ಗೊಳಿಸಬೇಕು ಎಂದು ಮನವಿ ಮಾಡಿಕೊಂಡರು. ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ರವಿ ಹದಡೆರ್ ಮಾತನಾಡಿ, ನಿತ್ಯಾನಂದನ ವಿರುದ್ಧ ಭೂಕಬಳಿಕೆ ಮತ್ತು ಅಕ್ರಮ ಚಟುವಟಿಕೆ ಆರೋಪಗಳಿದ್ದರೂ ಅವನ ವಿರುದ್ದ ಕನ್ನಡ ಪರ ಸಂಘಟನೆಗಳು ಪ್ರತಿಭಟಿಸಿದರೂ ಸರ್ಕಾರ ಯಾವುದೆ ಕ್ರಮ ತೆಗೆದುಕೊಳ್ಳದೆ ಮೃದು ಧೋರಣೆ ತೋರುತ್ತಿರುವುದು ಸರಿಯಲ್ಲ. ವಿನಯ ಭಾರದ್ವಾಜ ಅವರನ್ನು ಒಂದೆರೆಡು ದಿನಗಳಲ್ಲಿ ಮರಳಿ ಭಾರತಕ್ಕೆ ಕರೆತರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ವಿಧಾನಸೌಧ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಹಾವೇರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಶುರಾಮ ಶೆಟ್ಟರ್, ರಟ್ಟೀಹಳ್ಳಿ ಘಟಕದ ಅಧ್ಯಕ್ಷ ಶಂಕ್ರಪ್ಪ ಛಲವಾದಿ, ತಿಮ್ಮಪ್ಪ ವೆಂಕಣ್ಣನವರ, ಸಿದ್ದಾರೂಢ ಗುರು, ನಾಗರಾಜ ಮಲ್ಲಣ್ಣನವರ್, ಬಸುವರಾಜ ಕಟ್ಟಿಮನಿ, ನಾಗರಾಜ ಗಾವಡೆ, ರವಿ ಹರಿಜನ, ಸುರೇಶ ಚಲವಾದಿ, ಬಸವರಾಜ ಪೂಜಾರ, ನಾಗರಾಜ ಯಡಚೇರ್, ಗಣೇಶ ಬಿಳಚಿ ನಾಗರಾಜ ತಿಪ್ಪಣ್ಣನವರ್, ರಾಜು ಕುಪ್ಪೆಲೂರ, ನಾಗರಾಜ ದ್ಯಾವಕ್ಕಳವರ್ ಮೊದಲಾದವರು ಪಾಲ್ಗೊಂಡಿದ್ದರು.