ರಾಣಿಬೆನ್ನೂರಿನಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಅವಕಾಶ ಕಲ್ಪಿಸಿ
ರಾಣಿಬೆನ್ನೂರು: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಬೇಕಾಗಿರುವ ಎಲ್ಲಾ ಮೂಲಭೂತ ಸೌಲಭ್ಯಗಳು ರಾಣಿಬೆನ್ನೂರು ನಗರದಲ್ಲಿದ್ದು, ಸಮ್ಮೇಳನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸರ್ವಪಕ್ಷದ ನಾಯಕರನ್ನೊಳಗೊಂಡ ನಿಯೋಗದಿಂದ ಮನವಿಪತ್ರ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಾಲೂಕು ಜೆಡಿಎಸ್ ಮುಖಂಡ ಮಂಜುನಾಥ ಗೌಡಶಿವಣ್ಣನವರ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆ ಎಂದಾಕ್ಷಣ ಜಿಲ್ಲಾ ಕೇಂದ್ರಕ್ಕೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಇದುವರೆಗೂ ನಡೆದಿರುವ 80 ಸಮ್ಮೇಳನಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಸಮ್ಮೇಳನಗಳು ಜಿಲ್ಲಾ ಕೇಂದ್ರ ಹೊರತುಪಡಿಸಿ ತಾಲೂಕು ಕೇಂದ್ರಗಳಲ್ಲಿ ನಡೆದಿವೆ. ಚಿತ್ರದುರ್ಗ ಜಿಲ್ಲೆಯ ಹೆಸರಿನಲ್ಲಿ ಘೋಷಣೆಯಾಗಿದ್ದ 2 ಸಮ್ಮೇಳನಗಳು ಪಕ್ಕದ ದಾವಣಗೆರೆಯಲ್ಲಿ ನಡೆದಿವೆ ಎಂದು ಅವರು ಹೇಳಿದರು.
ಡಾ. ಸಂಜಯ ನಾಯ್ಕ ಮಾತನಾಡಿ, 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಬೇಕಾಗಿರುವ ಮೂಲಭೂತ ಸೌಲಭ್ಯಗಳಾದ ವಸತಿ ಹಾಗೂ ನೀರಿನ ಸೌಲಭ್ಯ ಮತ್ತು ಸಮ್ಮೇಳನ ನಡೆಸಲು ಸುಸಜ್ಜಿತ ಸ್ಧಳ ಇಲ್ಲಿದೆ. ವಿಶಾಲವಾದ 11 ಕಲ್ಯಾಣಮಂಟಪಗಳು, 4 ಸರ್ಕಾರಿ ಪ್ರವಾಸಿ ಮಂದಿರಗಳು, 9 ವಸತಿ ಗೃಹಗಳು, ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಹಾಗೂ ವಾಹನಗಳನ್ನು ನಿಲ್ಲಿಸಲು, ಪುಸ್ತಕ ಮಳಿಗೆಗಳನ್ನು, ಊಟದ ವ್ಯವಸ್ಥೆಗೆ ಬೇಕಾಗುವ ವಿಶಾಲವಾದ ಶಾಲೆ ಮತ್ತು ಕಾಲೇಜು ಮೈದಾನಗಳು ಇಲ್ಲಿವೆ. ಆದ್ದರಿಂದ ರಾಣಿಬೆನ್ನೂರಿನಲ್ಲಿಯೇ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಕರಬಸಪ್ಪ ಮಾಕನೂರು, ರೇಣುಕಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ವಾಸಣ್ಣ ಲದ್ವಾ, ನೀಲಕಂಠ ಭೂತೆ, ಶಿವಾನಂದ ಕುಂದಾಪುರ, ರಾಜಶೇಖರಯ್ಯ ಸುರಳಿಕೇರಿಮಠ, ಮಾಲತೇಶ ಹಲಗೇರಿ, ಗೋಪಾಲ ಐರಣಿ ಇತರರು ಇದ್ದರು.