ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹೆಣ್ಣು ಭ್ರೂಣ ಹತ್ಯೆ ಅಮಾನವೀಯ

Srinivasa Murthy VN
Updated On : 5 Feb 2014, 12:31 pm

ಶಿಗ್ಗಾಂವಿ: ಹೆಣ್ಣುಭ್ರೂಣ ಹತ್ಯೆ ಅಮಾನವೀಯ ಕೃತ್ಯ. ಹೆಣ್ಣು ಗಂಡು ಎಂಬ ಭೇದ-ಭಾವ ಬೇಡ. ಇಂಥ ಅಮಾನವೀಯ ಕೃತ್ಯ ತೊಲಗಿಸಲು ಅಧಿಕಾರಿಗಳೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ನ್ಯಾಯಾಧೀಶೆ ಮಮತಾ ಡಿ. ಹೇಳಿದರು. ಪಟ್ಟಣದ ನ್ಯಾಯಾಲಯದಲ್ಲಿ ಮೇಘಾ ಲೋಕ ಅದಾಲತ್ ಹಾಗೂ ಸ್ತ್ರೀ ಭ್ರೂಣ ಹತ್ಯೆ ಹಾಗೂ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಹೆಣ್ಣುಭ್ರೂಣ ಹತ್ಯೆ ತಡೆಯಲು ಹಲವಾರು ಯೋಜನೆಗಳನ್ನು ರೂಪಿಸಿದೆ. ನ್ಯಾಯಾಲಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಂದ ತಿಳಿವಳಿಕೆ ಕಾರ್ಯಕ್ರಮಗಳನ್ನು ರೂಪಿಸಿದೆ. ಭಾಗ್ಯಲಕ್ಷ್ಮೀ ಯೋಜನೆ, ಸ್ತ್ರೀಯರಿಗೆ ಆಸ್ತಿಯಲ್ಲಿ ಸಮಪಾಲು ಇಂತಹ ಅನೇಕ ಯೋಜನೆಗಳಿವೆ. ಹೆಣ್ಣು ಎಂಬ ಭೇದ ಮಾಡದೆ ಎಲ್ಲ ಮಕ್ಕಳು ಒಂದೆ ಎಂದು ಕಾಣಿರಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಹನುಮಂತಪ್ಪ ಮಾತನಾಡಿ, ಎಲ್ಲ ಜೀವ ಸಂಕುಲ ಉಳಿಯಬೇಕು, ಬೆಳೆಯಬೇಕು ಎಂಬುದು ಪ್ರಕೃತಿ ನಿಯಮ. ಆದರೆ ನಾವು ನಿಯಮದ ವಿರುದ್ಧ ಹೋದಾಗ ವೈಪರೀತ್ಯ ಅನುಭವಿಸಬೇಕಾಗುತ್ತದೆ. ಸ್ತ್ರೀ ಭ್ರೂಣ ಹತ್ಯೆ ಮಾಡುವ ಮುಖಾಂತರ ನಮ್ಮ ಸಂತತಿಗೆ ನಾವೇ ಅನ್ಯಾಯವೆಸಗುತ್ತಿದ್ದೇವೆ ಎಂಬ ಭಾವನೆ ಜನರಲ್ಲಿ ಮೂಡಬೇಕಿದೆ. ಬರಿ ಅಧಿಕಾರಗಳು ಏನೂ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರೂ ಕೈಜೋಡಿಸಿದಲ್ಲಿ ಭ್ರೂಣ ಹತ್ಯೆ ತಡೆಯಲು ಸಾಧ್ಯ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಕೆ. ಅಕ್ಕಿ ಹಾಗೂ ನ್ಯಾಯವಾದಿ ಜಿ.ಎನ್. ಎಲಿಗಾರ ಭ್ರೂಣ ಹತ್ಯೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಜಿ. ಕೂಡಲಗಿಮಠ, ನ್ಯಾಯವಾದಿಗಳು, ಸಾರ್ವಜನಿಕರು ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ಶಾಲೆಗೆ ದತ್ತಿ ಕೊಡುಗೆ
ಹಾವೇರಿ: ಕೇಂದ್ರ ಅಬಕಾರಿ ಇಲಾಖೆಯ ಸೇವಾ ತೆರಿಗೆ ಅಧೀಕ್ಷಕ ಅಶೋಕ ಕೊಪ್ಪದ ಹಾಗೂ ಸೋದರ, ಸೋದರಿಯರು ತಾಲೂಕಿನ ಅಗಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1ಕ್ಕೆ ತಮ್ಮ ತಂದೆಯವರ ಸ್ಮರಣೆಗಾಗಿ ರು. 11 ಸಾವಿರ ದತ್ತಿ ನೀಡಿದ್ದಾರೆ. ದಿ. ಕೊಪ್ಪದ ಗುರುಗಳು ಇದೇ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಪ್ರಶಸ್ತಿ ಪುರಸ್ಕೃತರಾಗಿದ್ದರು ಎಂದು ಶಾಲೆಯ ಪ್ರಭು ಮರಗೂರ ಪ್ರಧಾನ ಗುರುಗಳು ತಿಳಿಸಿ ಅವರ ಮಕ್ಕಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪರೀಕ್ಷೆಯಲ್ಲಿ ಪ್ರಥಮ
ಹಾವೇರಿ: ಚಿಂತನ ವಿಜ್ಞಾನ ಪ್ರತಿಭಾ ಪರೀಕ್ಷೆಯಲ್ಲಿ ನಿವೇದಿತಾ ಯಾದಗುಡೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ. ತಾಲೂಕಿನ ಅಗಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1ರಲ್ಲಿ ಏಳನೇ ವರ್ಗದಲ್ಲಿ ಈ ಪ್ರತಿಭಾವಂತ ವಿದ್ಯಾರ್ಥಿನಿ ಓದುತ್ತಿದ್ದಾಳೆ ಎಂದು ಮುಖ್ಯಾಧ್ಯಾಪಕ ಪ್ರಭು ಮರಗೂರ ತಿಳಿಸಿದ್ದಾರೆ. ಗ್ರಾಮದ ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಹಾಗೂ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹನುಮಂತಗೌಡ ಗೊಲ್ಲರ ನಿವೇದಿತಾಳ ಸಾಧನೆಗೆ ಅಭಿನಂದಿಸಿದ್ದಾರೆ.

ಇಂದಿನಿಂದ ಖೋಖೋ ಪಂದ್ಯಾವಳಿ
ಶಿಗ್ಗಾಂವಿ: ಜಿ.ಬಿ. ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕರ್ನಾಟಕ ವಿಶ್ವ ವಿದ್ಯಾಲಯ ಇವುಗಳ ಆಶ್ರಯದಲ್ಲಿ ಕರ್ನಾಟಕ ವಿವಿ ಅಂತರ್ ಕಾಲೇಜು ಪುರುಷರ ಏಕವಲಯ ಖೋ-ಖೋ ಪಂದ್ಯಾವಳಿ ಫೆ. 5, 6ರಂದು ಪಟ್ಟಣದ ಜಿ.ಬಿ. ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿವೆ. ಶಾಸಕ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ವಿಪ ಸದಸ್ಯ ಸೋಮಣ್ಣ ಬೇವಿನಮರದ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಟಿ. ಲಮಾಣಿ ಅಧ್ಯಕ್ಷತೆ ವಹಿಸುವರು ಎಂದು ಪ್ರಾಚಾರ್ಯ ಬಿ.ಟಿ. ಲಮಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ನೀರು ಘಟಕ ಉದ್ಘಾಟನೆ
ಶಿಗ್ಗಾಂವಿ:  ತಾಲೂಕಿನ ಗಂಗೆಬಾಂವಿ ಕೆಎಸ್‌ಆರ್‌ಪಿ 10ನೇ ಪಡೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕದ ಉದ್ಘಾಟನೆ ಹಾಗೂ ಸ್ವ-ಸಹಾಯ ಸಂಘಗಳ ಸದಸ್ಯರ ಪ್ರಗತಿ ಚಿಂತನಾ ಸಮಾವೇಶ ಫೆ. 6ರಂದು ಸಂಜೆ 4ಕ್ಕೆ ಶುದ್ಧಗಂಗಾ ಘಟಕದ ಆವರಣ ಕೆಎಸ್‌ಆರ್‌ಪಿ ವಸತಿ ಸಮಚ್ಚಯದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ದರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸುವರು. ಸಂಸದ ಪ್ರಹ್ಲಾದ ಜೋಶಿ ಅಧ್ಯಕ್ಷತೆ ವಹಿಸುವರು. ಶಾಸಕ ಬಸವರಾಜ ಬೊಮ್ಮಾಯಿ ನೀರಿನ ಕ್ಯಾನ್ ವಿತರಿಸುವರು. ವಿಪ ಸದಸ್ಯರಾದ ಸೋಮಣ್ಣ ಬೇವಿನಮರದ, ನಾಗರಾಜ ಛಬ್ಬಿ, ಕೆಎಸ್‌ಆರ್‌ಪಿ ಕಮಾಂಡೆಂಟ್ ಬಿ. ದೇವೇಂದ್ರಪ್ಪ, ಪುರಸಭೆ ಸದಸ್ಯ ಪರಶುರಾಮ ಸೊನ್ನದ ಉಪಸ್ಥಿತರಿರುವರು ಎಂದು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಗಣಪತಿ ಮಾಳಂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಮಟ್ಟಕ್ಕೆ ಆಯ್ಕೆ
ಹಾವೇರಿ:  ಜಿಲ್ಲಾ ಬಾಲ ಭವನದ ವತಿಯಿಂದ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟದಲ್ಲಿ ತಾಲೂಕಿನ ಮಕ್ಕಳು ಹಾಗೂ ನಗರದ ಶಾಲಾ ಮಕ್ಕಳು ಭಾಗವಹಿಸಿದ್ದರು. ಈ ಕಮ್ಮಟದಲ್ಲಿ ಸೃಜನಾತ್ಮಕ ಬರವಣಿಗೆ (ಕಥೆ, ಕವನ ಮತ್ತು ಪ್ರಬಂಧ) ಕ್ಷೇತ್ರಗಳ ಆಯ್ಕೆಯನ್ನು ನಡೆಸಲಾಯಿತು. ಈ ಕಮ್ಮಟದಲ್ಲಿ ಭಾಗವಹಿಸಿದ ಹಾನಗಲ್ಲ ದಯಾನಂದ ವಿದ್ಯಾಭಾರತಿ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿ ಕಿರಣಕುಮಾರ ಕೊಪ್ಪರಸಿಕೊಪ್ಪ ಪ್ರಥಮ, ಹಾವೇರಿ ಗೆಳೆಯರ ಬಳಗ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸಾಯಿನಾಥ ರಜಪುರ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಶಿಗ್ಗಾಂವಿ ಚನ್ನಪ್ಪ ಕುನ್ನೂರ ಪ್ರೌಢಶಾಲೆ 8ನೇ ತರಗತಿ ವಿದ್ಯಾರ್ಥಿನಿ ಅಂಬಿಕಾ ರಾಮನಗೌಡ ಪಾಟೀಲ ಅವರು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಬಾಲಭವನ ಸಮಿತಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement