ಇಂದಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ
ಹಾವೇರಿ: ರಾಣಿಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿ, ಗಂಗಾ ಪರಮೇಶ್ವರಿ, ಅಂಬಾಡೇಶ್ವರಿ, ವಾಲ್ಮೀಕಿ, ಮಡಿವಾಳ ಮಾಚಯ್ಯ, ಚೌಡೇಶ್ವರಿ ದೇವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಸ್ಥಾನಗಳ ಉದ್ಘಾಟನೆ, ಧರ್ಮಸಭೆ ಹಾಗೂ ಸಾಮೂಹಿಕ ವಿವಾಹಗಳ ಸಮಾರಂಭ ಫೆ. 9 ಮತ್ತು 10ರಂದು ನಡೆಯಲಿದೆ.
ಫೆ. 9ರಂದು ಮಧ್ಯಾಹ್ನ 3 ಗಂಟೆಗೆ ನೂತನ ಮೂರ್ತಿಗಳ ಪುರಪ್ರವೇಶವು ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆಯಲ್ಲಿ ನಡೆಯುವುದು. ಫೆ. 10ರಂದು ಹೊನ್ನಾಳಿಯ ಹಿರೇಕಲ್ಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ರಟ್ಟಿಹಳ್ಳಿ ಕಬ್ಬಿಣ ಕಂತಿಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳ ಅಮೃತ ಹಸ್ತದಿಂದ ಬ್ರಾಹ್ಮಿ ಮಹೂರ್ತದಲ್ಲಿ ಅಭಿಷೇಕ, ಹೋಮ ನಂತರ ಬೆಳಗ್ಗೆ 9.20ಕ್ಕೆ ದೇವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನೆರವೇರುವುದು ಎಂದು ಮಾಜಿ ಜಿಪಂ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.