ಗ್ಯಾಸ್ ಏಜೆನ್ಸಿ ವಿರುದ್ಧ ಕ್ರಮಕ್ಕೆ ಆಗ್ರಹ
ಶಿಗ್ಗಾಂವಿ: ಪಟ್ಟಣದ ವಿನಾಯಕ ಭಾರತ ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಂದ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಫಕ್ಕಿರೇಶ ಶಿಗ್ಗಾಂವಿ ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆಹಾರ ವಿಭಾಗಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಶಿಗ್ಗಾಂವಿ ನಗರವು ಸುಮಾರು 30 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ ಶೇ. 90ಕ್ಕಿಂತ ಹೆಚ್ಚು ಜನಸಂಖ್ಯೆ ಅಡುಗೆ ಅನಿಲವನ್ನು ಅವಲಂಬಿಸಿದೆ. ವಿನಾಯಕ ಭಾರತ ಗ್ಯಾಸ್ ಏಜೆನ್ಸಿಯವರು ನಾಗರಿಕರಿಗೆ ಸರಿಯಾಗಿ ಅಡುಗೆ ಅನಿಲ ವಿತರಣೆ ಮಾಡುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಅತ್ತಾವುಲ್ಲಾಖಾನ ಖಾಜಿಖಾನವರ, ವಿ.ವಿ. ವಡ್ಡರ, ತಿಮ್ಮಣ್ಣ ವಡ್ಡರ, ಸೈಯ್ಯದ ಖಲಂದರ, ಚಾಕಾಪುರ ಗಪೂರ ಮುಂತಾದವರು ಉಪಸ್ಥಿತರಿದ್ದರು.