ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನೌಕರನ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹ

Srinivasa Murthy VN
Updated On : 9 Feb 2014, 1:40 am

ಶಿಗ್ಗಾಂವಿ:  ಸವಣೂರು ಪುರಸಭೆಯಲ್ಲಿ ಕರ್ತವ್ಯನಿರತ ನೌಕರ ಎಚ್.ಎಲ್. ಹೊಸರಿತ್ತಿ ಇವರ ಮೇಲೆ ಮಕಬೂಲ ಅಹ್ಮದ ಪರಾಶ್ ಎಂಬ ವ್ಯಕ್ತಿ ಹಲ್ಲೆಗೊಳಿಸಿ ಗಂಭೀರ ಸ್ವರೂಪ ಗಾಯಗೊಳಿಸಿದ್ದನ್ನು ಹಾವೇರಿ ಜಿಲ್ಲಾ ಪೌರನೌಕರರ ಸಂಘ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಜಿಲ್ಲಾ ಪೌರನೌಕರರ ಸಂಘದ ಅಧ್ಯಕ್ಷ ಏಸು ಬೆಂಗಳೂರು ಹಾಗೂ ರಾಜ್ಯ ಪರಿಷತ್ ಸದಸ್ಯ ಪರಶುರಾಮ ಧನೋಜಿ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್. ಹುಲ್ಲಮ್ಮನವರ ಇವರು ಜಂಟಿ ಪತ್ರಿಕಾ ಹೇಳಿಕೆ ನೀಡಿ, ಹಲ್ಲೆಗೊಳಿಸಿದ ವ್ಯಕ್ತಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಆಗ್ರಹಿಸಿ ಕರ್ತವ್ಯ ನಿರತ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಲು ವಿನಂತಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಗೊಂಡಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.
ಸ್ಥಳೀಯ ನೌಕರ ಸಂಘದ ಪದಾಧಿಕಾರಿಗಳಾದ ನಿಂಗಪ್ಪ  ಡಿ. ಹೊಸಮನಿ, ರುದ್ರಪ್ಪ ಪೂಜಾರ, ಬೀರಪ್ಪ ಶಿ. ಗಿಡ್ಡಣ್ಣವರ, ಎನ್.ಕೆ. ಡೊಂಬರ್ ಗಂಗಾಧರ ಸಾನಕ್ಯಾನವರ, ಮಂಜುನಾಥ ಪುಟ್ಟಣ್ಣನವರ, ಎಸ್.ಪಿ. ಅಶ್ವಿನಿ, ಆರ್.ಎಸ್. ಬಂಕಾಪುರ, ಉಮೇಶ ಕೋತಂಬ್ರಿ ಮತ್ತಿತರು ಉಪಸ್ಥಿತರಿದ್ದರು.

ವಾರ್ಷಿಕ ಸ್ನೇಹ ಸಮೇಳನ
ಸವಣೂರ:  ಮಕ್ಕಳ ಮನೋವಿಕಾಸಕ್ಕೆ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಕರು ಸಮನಾಗಿ ಶ್ರಮಿಸಿದಲ್ಲಿ ಮಾತ್ರ ಮಕ್ಕಳ ಮುಂದಿನ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯನ್ನು ಉನ್ನತ ಮಟ್ಟದಲ್ಲಿ ಕಾಣಬಹುದಾಗಿದೆ ಎಂದು ಎಸ್.ವಿ. ಕುಲಕರ್ಣಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ನಡೆದ  ವಾರ್ಷಿಕ ಸ್ನೇಹ ಸಮೇಳನ ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಾಮಾಣಿಕ ದಕ್ಷತೆಯಿಂದ ಪ್ರತಿಯೊಂದು ಕಷ್ಟ ಕಾರ್ಪಣ್ಯಗಳಿಗೆ  ಮಾತೃ ಹೃದಯವನ್ನು ಶಾಲೆಯ ಶಿಕ್ಷಕರಲ್ಲಿ ಕಾಣುತ್ತೇವೆ ಎಂದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಾವ ರೀತಿ ಎದುರಿಸಬೇಕು ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.
ತಾಪಂ ಅಧ್ಯಕ್ಷ ರಮೇಶ ಅರಗೋಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಿದಾನಂದ ಬಡಿಗೇರ, ಶಿವಾನಂದ ಬೀಳೆಕುದುರಿ, ಬಸನಗೌಡ ಪಾಟೀಲ, ರಮೇಶ ಕಂಬಳಿ, ಮಂಜುನಾಥ ಮರಿತಮ್ಮನವರ, ಸಿಬ್ಬಂದಿ ಸೇರಿದಂತೆ ಪಾಲಕರು ಪಾಲ್ಗೊಂಡಿದರು.  

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಶೆಟ್ಟರ್
ಹಾನಗಲ್ಲ:  ಹಾವೇರಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಹಾನಗಲ್ಲಿನ ಕುಮಾರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ, ಪುರಸಭಾ ಸದಸ್ಯ ಕಲ್ಯಾಣಕುಮಾರ ಶೆಟ್ಟರ್ ಆಯ್ಕೆಯಾಗಿದ್ದಾರೆ.
ಹಾವೇರಿಯ ಜಿಲ್ಲಾ ಯೂನಿಯನ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಶಂಬಣ್ಣ ಬಸೇಗಣ್ಣಿ ಅವರ ವಿರುದ್ಧ ಒಂದು ಮತಗಳ ಅಂತರದಲ್ಲಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸವಣೂರ ತಾಲೂಕಿನ ಧರಿಯಪ್ಪಗೌಡ ಪಾಟೀಲ ಅವಿರೋಧ ಆಯ್ಕೆಯಾದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಮಾಜಿ ಸಚಿವರಾದ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಯು.ಬಿ. ಬಣಕಾರ, ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ನೆಹರು ಓಲೇಕಾರ, ಶಿವರಾಜ ಸಜ್ಜನರ, ಸುರೇಶಗೌಡ ಪಾಟೀಲ, ಜಿ.ಶಿವಣ್ಣ ಅಭಿನಂದಿಸಿದ್ದಾರೆ.

ವಿದ್ಯುತ್ ಅವಘಡ: ಮನೆ ಭಸ್ಮ
ಹಾವೇರಿ:  ಮನೆ ಮೇಲೆ ಹಾದು ಹೋಗಿರುವ 11ಕೆವಿ ವಿದ್ಯುತ್ ತಂತಿ ಆಕಸ್ಮಿಕವಾಗಿ ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಹೊತ್ತಿ ಎರಡು ಮನೆಗಳು ಸುಟ್ಟ ಘಟನೆ ತಾಲೂಕಿನ ಹಳೆಕಿತ್ತೂರಿನ ರಾಜೀವಗಾಂಧಿ ಬಡಾವಣೆಯಲ್ಲಿ ಸಂಭವಿಸಿದೆ. ಮನೆಗಳು ಶೇಖವ್ವ ಗು. ಮೈದೂರು ಹಾಗೂ ನಾಗವ್ವ ನಿಂ. ಮೈದೂರು ಎಂಬುವವರಿಗೆ ಸೇರಿವೆ. ಮನೆಯಲ್ಲಿದ್ದ ರು. 25 ಸಾವಿರ, ಒಡವೆ, ಧವಸ ಧಾನ್ಯ, ಸಾಮಗ್ರಿಗಳೆಲ್ಲ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಹಾಲಗಿ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement