ಹಾನಗಲ್ಲ: ತಾಲೂಕಿನ 24 ಸರ್ಕಾರಿ ಪ್ರೌಢಶಾಲೆಗಳ ಆಯ್ದ 104 ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಜಿಪಂ ಅಧ್ಯಕ್ಷೆ ಕಸ್ತೂರೆವ್ವ ವಡ್ಡರ ಚಾಲನೆ ನೀಡಿದರು.
ಮಕ್ಕಳು ಪ್ರೇಕ್ಷಣೀಯ ಸ್ಥಳಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ಸ್ವತಃ ಭೇಟಿ ನೀಡಿ ವೀಕ್ಷಣೆ ಮಾಡುವುದರಿಂದ ಜ್ಞಾನ ಸಂಪಾದಿಸಲು ಸಾಧ್ಯವಾಗುತ್ತದೆ. ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವ ಪ್ರವಾಸ ಕಾರ್ಯದಲ್ಲಿ ತೊಡಗಿರುವ ಮಕ್ಕಳು ಬಹಳ ವಿವೇಚನೆಯಿಂದ ಶಾಂತವಾಗಿ, ಶಿಸ್ತಿನಿಂದ ವರ್ತಿಸಬೇಕು.
ಭೇಟಿ ನೀಡಿದ ಸ್ಥಳಗಳ ಮಾಹಿತಿ ಪಡೆದುಕೊಳ್ಳಬೇಕು. ಮಾರ್ಗದರ್ಶಿ ಶಿಕ್ಷಕರೊಂದಿಗೆ ಸಭ್ಯ ರೀತಿಯಿಂದ ನಡೆದುಕೊಳ್ಳಬೇಕು ಎಂದು ಕಸ್ತೂರೆವ್ವ ಕರೆ ನೀಡಿದರು.
ತಾಪಂ ಅಧ್ಯಕ್ಷ ರಾಜೇಂದ್ರ ಬಾರ್ಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ಮಾತನಾಡಿದರು. ಶಿಕ್ಷಣ ಸಂಯೋಜಕರಾದ ಎ.ಆರ್. ಪ್ರಾಣೇಶ್ ರಾವ್, ಆರ್.ಕೆ. ಕರಗುದರಿ, ಎಂ.ಕೆ. ಸಣ್ಣಿಂಗಮ್ಮನವರ, ಮಾರ್ಗದರ್ಶಿ ಶಿಕ್ಷಕರಾದ ಶೈಲಜಾ ಸಿದ್ದಪ್ಪಗೌಡರ, ಅನಿತಾ ಗೊಲ್ಲರ, ವೆಂಕಟೇಶ ಚಲವಾದಿ, ಲಕ್ಷ್ಮಣ ಉಗಲವಾಟ ಉಪಸ್ಥಿತರಿದ್ದರು.