-ನಾರಾಯಣ ಹೆಗಡೆ
ಹಾವೇರಿ: ಹಾವೇರಿ ಜಿಲ್ಲೆಗೆ ಒಲಿದಿದ್ದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಬೇರೆ ಜಿಲ್ಲೆ ಪಾಲಾದರೂ ಆಶ್ಚರ್ಯವಿಲ್ಲ.
ಹೌದು... ಸಮ್ಮೇಳನ ನಮ್ಮಲ್ಲೇ ಆಗಬೇಕು ಎಂದು ಹಾವೇರಿ ಹಾಗೂ ರಾಣಿಬೆನ್ನೂರು ಸಾಹಿತ್ಯಾಸಕ್ತರ ನಡುವೆ ನಡೆದಿರುವ ಪೈಪೋಟಿ ಈಗ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ಜು. 27ರಂದು ರಾಣಿಬೆನ್ನೂರಿನಲ್ಲೇ ಸಮ್ಮೇಳನ ನಡೆಸುವ ನಿರ್ಧಾರ ಕೈಗೊಂಡಿರುವುದು ಹಾವೇರಿ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಆದ್ದರಿಂದ ಇಲ್ಲಿಯ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ನಿರಂತರ ಸಭೆ ನಡೆಸಿ ಚರ್ಚಿಸುತ್ತಿದ್ದು, ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. ಹಾವೇರಿ ಬಂದ್‌ಗೆ ಕರೆ ಕೊಡಲೂ ಚಿಂತನೆ ನಡೆದಿದೆ. ಇದೇ ರೀತಿ ಗೊಂದಲ ಮುಂದುವರಿದರೆ ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಸಮ್ಮೇಳನವನ್ನು ಜಿಲ್ಲೆಯಿಂದಲೇ ಎತ್ತಂಗಡಿ ಮಾಡಿ ಬೇರೆ ಜಿಲ್ಲೆಗೆ ಆತಿಥ್ಯ ವಹಿಸುವ ಅಪಾಯವೂ ಈಗ ಎದುರಾಗಿದೆ.
ತೀವ್ರ ಅಸಮಾಧಾನ: ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಸಮ್ಮೇಳನ ಸ್ಥಳ ನಿಗದಿ ವಿಚಾರದಲ್ಲಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಹಾವೇರಿಗೆ ಸಮ್ಮೇಳನದ ಆತಿಥ್ಯ ನೀಡಬೇಕು ಎಂಬುದು ದಶಕಗಳ ಬೇಡಿಕೆ. ಏಕಾಏಕಿ ಸಮ್ಮೇಳನ ರಾಣಿಬೆನ್ನೂರಿಗೆ ಒಯ್ದರೆ ಸದ್ಯಕ್ಕೆ ಅಂಥ ಅವಕಾಶ ಸಿಗುವುದಿಲ್ಲ. ಆದ್ದರಿಂದ ಏನೇ ಬೆಲೆ ತೆತ್ತಾದರೂ ಅವಕಾಶ ಪಡೆಯಬೇಕು ಎಂಬುದು ಹಾವೇರಿಯ ಸಾಹಿತಿ, ಕಲಾವಿದರ ಬಳಗದ ಒತ್ತಾಯ.
ಆದರೆ, ಕಸಾಪ ಜಿಲ್ಲಾಧ್ಯಕ್ಷರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಲಕ್ಷಣ ಗೋಚರಿಸುತ್ತಿಲ್ಲ. ಆದ್ದರಿಂದ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ನಿತ್ಯವೂ ಸಭೆ ಸೇರುತ್ತಿರುವ ಬಳಗ, ಪೂರ್ವನಿಗದಿಯಂತೆ ಸಮ್ಮೇಳನ ಹಾವೇರಿಯಲ್ಲೇ ಆಗಬೇಕು. ಒಂದು ವೇಳೆ ಇಲ್ಲದಿದ್ದರೆ ಜಿಲ್ಲೆಯಿಂದ ಸಮ್ಮೇಳನ ಎತ್ತಂಗಡಿಯಾದರೂ ಚಿಂತೆಯಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ. ಜು. 30ರಂದು ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಿದೆ. ಮುಂದಿನ ವಾರ ಹಾವೇರಿ ಬಂದ್‌ಗೆ ಕರೆ ಕೊಡಲು ನಿರ್ಧರಿಸಲಾಗಿದೆ.
ಗೊಂದಲದ ಮಧ್ಯೆ ಸಮ್ಮೇಳನ ನಡೆಸುವ ಅಗತ್ಯವಿಲ್ಲ. ಪರಿಷತ್ತಿನ ಇತಿಹಾಸದಲ್ಲೇ ಈ ರೀತಿ ಸ್ಥಳ ವಿವಾದ ಆಗಿರಲಿಲ್ಲ. ಜಿಲ್ಲೆಗೆ ಸಿಕ್ಕ ಅವಕಾಶ ಕಳೆದುಕೊಳ್ಳದೇ ಎಲ್ಲರೂ ಒಗ್ಗೂಡಿ ನುಡಿ ಹಬ್ಬದ ಯಶಸ್ಸಿಗೆ ಶ್ರಮಿಸಬೇಕು. ಈ ಅವಕಾಶ ಕೈಚೆಲ್ಲಿದರೆ ಮತ್ತೆಂದೂ ಜಿಲ್ಲೆಗೆ ಆತಿಥ್ಯ ಸಿಗಲಾರದು. ಪ್ರತಿಭಟನೆಯಿಂದ ಕಸಾಪ ನಿರ್ಧಾರ ಬದಲಾಗುತ್ತದೆ ಎಂಬ ಭ್ರಮೆಯೂ ಬೇಡ. ಇದೇ ರೀತಿ ಗೊಂದಲ ಮುಂದುವರಿದರೆ ಆಗಸ್ಟ್ ಮೂರನೇ ವಾರದಲ್ಲಿ ನಡೆಯುವ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿಷಯ ಇಡುತ್ತೇನೆ. ಆಗ ಸಭೆ ಬೇರೆ ಜಿಲ್ಲೆಗೆ ಸಮ್ಮೇಳನ ನೀಡುವ ಬಗ್ಗೆ ನಿರ್ಧಾರ ಕೈಗೊಂಡರೂ ಆಶ್ಚರ್ಯವಿಲ್ಲ.
-ಪುಂಡಲೀಕ ಹಾಲಂಬಿ, ಕಸಾಪ ಅಧ್ಯಕ್ಷ