ಹಾನಗಲ್ಲ: ವಿದ್ಯುತ್ ಅವಘಡದಲ್ಲಿ ತನ್ನೆರಡೂ ಮುಂಗೈಗಳನ್ನು ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ಹಾನಗಲ್ಲ ತಾಲೂಕಿನ ಮಲಗುಂದ ಗ್ರಾಮದ ದಯಾನಂದ ಯಲ್ಲಪ್ಪ ಹರಿಜನ ಎಂಬ ಯುವಕನ ಸಂಕಷ್ಟಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದೆ.
ಕುಟುಂಬದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ದೂರದ ಮಂಗಳೂರಿಗೆ ದುಡಿಯಲು ತೆರಳಿದ್ದ ದಯಾನಂದ ವಿದ್ಯುತ್ ಅವಘಡದಲ್ಲಿ ಮುಂಗೈಗಳನ್ನು ಕಳೆದುಕೊಂಡು ಇದೀಗ ಹೆತ್ತವರ ಆರೈಕೆಯಲ್ಲಿದ್ದಾನೆ. ಇಳಿ ವಯಸ್ಸಿನಲ್ಲಿರುವ ತಂದೆ-ತಾಯಿಯನ್ನು ಆರೈಕೆ ಮಾಡಬೇಕಿದ್ದ ದಯಾನಂದನೇ ಇದೀಗ ತಂದೆ-ತಾಯಿಯ ಆರೈಕೆಯಲ್ಲಿರುವುದು ವಿಪರ್ಯಾಸ.
ಯುವಕನ ಸಂಕಷ್ಟಕ್ಕೆ ಸ್ಪಂದಿಸಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಯಾನಂದನಿಗೆ ಪ್ರತಿ ತಿಂಗಳು ರು. 1,200 ಮಾಸಾಶನ ನೀಡಲು ಮುಂದಾಗಿದೆ. ಈ ಕುರಿತು ಯೋಜನೆಯ ಜಿಲ್ಲಾ ನಿರ್ದೇಶಕ ವಸಂತ ಸಾಲಿಯಾನ ಸ್ವತಃ ದಯಾನಂದನ ಮನೆಗೆ ಭೇಟಿ ನೀಡಿ ಮಾಸಾಶನ ಮಂಜೂರಿ ಕುರಿತ ಆದೇಶ ಪ್ರತಿ ನೀಡಿದರು.
ಈ ಸಂದರ್ಭ ವಸಂತ ಸಾಲಿಯಾನ ಮಾತನಾಡಿ, ದಯಾನಂದನ ಕುಟುಂಬದಲ್ಲಿ ಮತ್ತೆ ಬೆಳಕು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಕುಟುಂಬಕ್ಕೀಗ ಅನುಕಂಪದ ಬದಲಿಗೆ ಆತ್ಮಸ್ಥೈರ್ಯದ ಅಗತ್ಯವಿದೆ. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಸದಾಶಯದಂತೆ ಗ್ರಾಮಾಭಿವೃದ್ಧಿ ಯೋಜನೆ ದಯಾನಂದನಿಗೆ ಮಾಸಾಶನ ಮಂಜೂರಿ ಮಾಡುವ ಮೂಲಕ ಕುಟುಂಬದ ಬೆನ್ನಿಗೆ ನಿಂತಿದೆ ಎಂದರು.ಯೋಜನೆ ಹಾನಗಲ್ಲ ತಾಲೂಕು ಯೋಜನಾಧಿಕಾರಿ ಕೆ. ಸದಾನಂದ, ಮೇಲ್ವಿಚಾರಕ ರಾಜೂ ಮರಾಠೆ, ಕೃಷಿ ಅಧಿಕಾರಿ ಜಿ.ಡಿ. ಪೊಲೀಸ್‌ಪಾಟೀಲ, ಈರಮ್ಮ, ಯಶೋದಾ, ಯಲ್ಲಪ್ಪ ಹರಿಜನ, ರತ್ನವ್ವ ಹರಿಜನ, ಸೇವಾ ಪ್ರತಿನಿಧಿ ರೇಣುಕಾ ಇದ್ದರು.