ಧಾರವಾಡ: ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಧಾರವಾಡ ಅಸ್ತವ್ಯಸ್ತಗೊಂಡಿದೆ. ಬುಧವಾರ, ಗುರುವಾರ ಬೆಳಗಿನವರೆಗೂ ಸುರಿಯಿತು. ಇಲ್ಲಿನ ರವಿವಾರಪೇಟ ಸೋಮಶೇಖರ ಕೋಟೂರ ಎಂಬುವರ ಮನೆಯ ಗೋಡೆ ಕುಸಿದಿದೆ. ಗುಲಗಂಜಿಕೊಪ್ಪದ ಹೊಸಓಣಿಯನಿಂಗಯ್ಯ ಹೆಬ್ಬಾಳಮಠ ಎಂಬುವರ ಮನೆ ಬಿದ್ದಿದೆ. ಬಾಡಿಗೆದಾರ ಪರವೀನ ಬೇಪಾರಿ ಎಂಬುವರು ರಂಜಾನ್ ನಿಮಿತ್ತ ಊರಿಗೆ ಹೋಗಿದ್ದರಿಂದ ಯಾವ ಪ್ರಾಣಾಪಾಯ ಸಂಭವಿಸಲಿಲ್ಲ.
ಕಿಚಿ-ಪಿಚಿ ಕೆಸರಿನಲ್ಲಿಯೇ ಜನರು ಓಡಾಡುತ್ತಿದ್ದರು. ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಅಂದಾಜು 20.2 ಮಿ.ಮೀ. ಮಳೆಯಾಗಿದೆ ಎಂದು ಮಾಹಿತಿ ಇದ್ದು, ಬುಧವಾರ ಮಧ್ಯಾಹ್ನ 2.30ರಿಂದ 5.30ರ ಅವಧಿಯಲ್ಲಷ್ಟೇ 15.20 ಮಿ.ಮೀ. ಮಳೆ ಸುರಿದಿದೆ. ಕಲಘಟಗಿ ಮತ್ತು ನವಲಗುಂದ ತಾಲೂಕುಗಳಿಗೆ ಹೋಲಿಸಿದರೆ ಹುಬ್ಬಳ್ಳಿ-ಧಾರವಾಡ ಮತ್ತು ಕುಂದಗೋಳ ತಾಲೂಕುಗಳಲ್ಲಿ ಹೆಚ್ಚು ಮಳೆ ಸುರಿದಿದೆ. ಮೋಡ ಕವಿದ ವಾತಾವರಣ ಹಾಗೂ ನಿರಂತರ ಮಳೆಯಿಂದಾಗಿ ಹವಾಮಾನದಲ್ಲೂ ವಿಪರೀತ ಏರುಪೇರಾಗಿದ್ದು, ಉಷ್ಣಾಂಶವೂ ಕುಸಿದಿದೆ. ಗರಿಷ್ಠ ತಾಪಮಾನ 24 ಡಿಗ್ರಿಗೆ ಕುಸಿದಿದ್ದು, ಕನಿಷ್ಠ ತಾಪಮಾನ 21 ಡಿಗ್ರಿಯಷ್ಟು ದಾಖಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಇಲ್ಲಿಯವರೆಗೆ ಒಟ್ಟು 449.4 ಮಿ.ಮೀನಷ್ಟು ಮಳೆಯಾಗಿದ್ದು, ಜುಲೈ ತಿಂಗಳಲ್ಲೇ ಅತಿ ಹೆಚ್ಚು ಅಂದರೆ 166.4 ಮಿ.ಮೀ. ಮಳೆ ದಾಖಲೆಯಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯು ವಿದ್ಯಾರ್ಥಿಗಳು, ನೌಕರಸ್ಥರು ಮತ್ತು ಇತರೆ ವರ್ಗದವರಿಗೆ ಸಾಕಷ್ಟು ಕಿರಿ ಕಿರಿ ಉಂಟುಮಾಡಿದೆ. ಮಾರುಕಟ್ಟೆ ಪ್ರದೇಶದಲ್ಲಿನ ಸಣ್ಣ ಪುಟ್ಟ ವ್ಯಾಪಾರಿಗಳು ಮತ್ತು ಖರೀದಿದಾರರಿಗೂ ಮಳೆ ಕಸಿವಿಸಿ ಮೂಡಿಸಿದೆ. ಅನೇಕ ಪ್ರದೇಶದ ರಸ್ತೆಗಳಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೂ ಅಡಚಣಿಯಾಗಿದ್ದು, ಎಲ್ಲೆಡೆ ಛತ್ರಿ, ಜಾಕಿಟ್, ಜರ್ಕೀನುಗಳಿಗೆ ಮೊರೆ ಹೋದವರೇ ಹೆಚ್ಚಾಗಿ ಕಾಣಸಿಗುತ್ತಿದ್ದಾರೆ.