ಕುಂದಗೋಳ: 3 ವರ್ಷಗಳ ಹಿಂದೆ ಇಲ್ಲಿನ ಹಿಂದೂ ಧರ್ಮದ ರುದ್ರಭೂಮಿ, ಮುಕ್ತಿಧಾಮ ಅಭಿವೃದ್ಧಿ ಕಾಮಗಾರಿಗೆ ರು. 45 ಲಕ್ಷ ಮಂಜೂರಾಗಿದ್ದರೂ ಪೂರ್ಣಗೊಳಿಸದ ಭೂಸೇನಾ ನಿಗಮದ ಅಭಿಯಂತ ಲಕ್ಷ್ಮೀ ನಾಯಕ ಅವರನ್ನು ಗುರುವಾರ ಪಪಂ ಮುಖ್ಯಾಧಿಕಾರಿ ಕಚೇರಿಯಲ್ಲಿ ಜನತೆ ಕೂಡಿ ಹಾಕಿ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಮಸಾರಿ ಪ್ಲಾಟ್‌ಗೆ ಬಳಿ ಪಂಚಗ್ರಹ ಹಿರೇಮಠಕ್ಕೆ ಸೇರಿದ 4 ಎಕರೆ ಜಮೀನನ್ನು ಹಿಂದೂ ಧರ್ಮದ ಮುಕ್ತಿಧಾಮ ಅಭಿವೃದ್ಧಿಗಾಗಿ ಶ್ರೀಗಳು ದಾನ ನೀಡಿದ್ದಾರೆ. ಅದನ್ನು ಪಪಂ 2010-11ರಲ್ಲಿ ರು. 45 ಲಕ್ಷದಲ್ಲಿ ಭೂ ಸೇನಾ ನಿಗಮ ಮಂಡಳಿಗೆ ಕಾಮಗಾರಿ ಗುತ್ತಿಗೆ ನೀಡಿ ಆರಂಭಿಸಿತ್ತು. ರುದ್ರ ಭೂಮಿ ಸುತ್ತ ಕಾಂಪೌಂಡ್, ಒಳಚರಂಡಿ, ಶೆಡ್, ಸುಗಮ ರಸ್ತೆ ನಿರ್ಮಾಣ, ಸಸಿಗಳನ್ನು ಹಚ್ಚುವಂತೆ ಅಂದಾಜು ಪತ್ರಿಕೆಯಲ್ಲಿ ನಮೂದಿಸಸಿದೆ. ಭೂ ಸೇನಾ ನಿಗಮ ರು. 28 ಲಕ್ಷದಲ್ಲಿ ಕಾಂಪೌಂಡ್ ನಿರ್ಮಿಸಿದೆ. ಅದೂ ಕಳಪೆಮಟ್ಟದ್ದಾಗಿದೆ. ಅಗತ್ಯವಿರುವ ಮೂಲಭೂತ ಸೌಕರ್ಯ ಕಾಮಗಾರಿ ಕೈಗೆತ್ತಿಕೊಳ್ಳದ ಕಾರಣ ಪಪಂ ಸದಸ್ಯರು, ಜನರು ಗುರುವಾರ ಅಧಿಕಾರಿಯನ್ನು 2 ತಾಸು ಕೂಡಿ ಹಾಕಿ ತರಾಟೆಗೆ ತೆಗೆದುಕೊಂಡರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಪಂ ಮುಖ್ಯ ಅಭಿಯಂತ ಕೆ. ಕಮ್ಮಾರ, ಭೂ ಸೇನಾ ನಿಗಮದ ಅಧಿಕಾರಿ ಲಕ್ಷ್ಮೀ ನಾಯಕಗೆ ಉಳಿದ ರು. 17 ಲಕ್ಷ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು. ಈ ಹಿಂದೆ ನಿರ್ಮಿಸಿದ ಕಳಪೆ ಕಾಂಪೌಂಡ್‌ನ್ನೂ ಸರಿಯಾಗಿ ನಿರ್ಮಿಸುವಂತೆ ಸೂಚಿಸಿದರು.
ಈ ಕುರಿತು ಡಿಸಿಗೂ ಮಾಹಿತಿ ನೀಡುವುದಾಗಿ ಭರವಸೆ ನೀಡಿ ಭೂಸೇನಾ ನಿಗಮದ ಅಧಿಕಾರಿಯಿಂದ ಪತ್ರ ಬರೆಯಿಸಿಕೊಂಡರು. ಆಗ ಜನ ಅಧಿಕಾರಿ ಬಿಡುಗಡೆ ಮಾಡಿದರು. ಯಲ್ಲವ್ವ ಭಜಂತ್ರಿ, ರಾಜೇಶ ಶಿವಳ್ಳಿ, ರಮೇಶ ಬಿಡನಾಳ, ಮೆಹಬೂಬ್‌ಅಲಿ ನದಾಫ್, ಬಸಮ್ಮ ಅಲ್ಲಾಪುರ, ದ್ಯಾಮವ್ವ ಬಿಡನಾಳ, ವಿಠ್ಠಲ ಚವ್ಹಾಣ, ಬಸವರಾಜ ದೊಡ್ಡಮನಿ, ಈಶ್ವರಪ್ಪ ಭಂಡಿವಾಡ, ಗಿರೀಶ ಗಾಣಗೇರ, ರಾಮಣ್ಣ ನೆಲಗುಡ್ಡ, ಶಿವಯ್ಯ ಹುಲಗೂರಮಠ, ಫಕ್ಕೀರಯ್ಯ ಮಣಕಟ್ಟಿಮಠ ಇದ್ದರು.