ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅನ್ನದಲ್ಲಿ ಹುಳು: ಪ್ರತಿಭಟನೆ

Srinivasa Murthy VN
Updated On : 17 Mar 2014, 11:09 am

ಶಿಗ್ಗಾಂವಿ:  ಆಹಾರದಲ್ಲಿ ಹುಳುಗಳು ಬರುತ್ತಿವೆ. ಮೊಟ್ಟೆ, ಬಾಳೆ ಹಣ್ಣು ಸರಿಯಾಗಿ ವಿತರಿಸುತ್ತಿಲ್ಲ. ಕೆಲಸದವರ ನಿರ್ಲಕ್ಷ್ಯತನದಿಂದ ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದೇವೆ. ತಕ್ಷಣವೇ ಅವರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಪಟ್ಟಣದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಎಸ್‌ಎಫ್‌ಐ ಘಟಕದಿಂದ ದಿಢೀರ್ ಪ್ರತಿಭಟನೆ ಜರುಗಿತು.
ವಿದ್ಯಾರ್ಥಿಗಳಿಗೆ ಇಂದು ವಿತರಿಸಲಾದ ಮಧ್ಯಾಹ್ನದ ಊಟದಲ್ಲಿ ಬಿಳಿ ಹುಳುಗಳು ಕಾಣಿಸಿಕೊಂಡಿವೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ತಕ್ಷಣ ಅಡಿಗೆ ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಂದಿನಂತೆ ಸರಿಪಡಿಸುವ ಹಾರಿಕೆ ಉತ್ತರದೊಂದಿಗೆ ಜಾರಿಕೊಂಡ ಅಡುಗೆ ಸಿಬ್ಬಂದಿಗಳಾದ ಎಸ್.ಎಂ. ರಜಪೂತ ಮತ್ತು ಎಲ್.ಜಿ. ಸಾತ್ಪತಿ ವಿದ್ಯಾರ್ಥಿಗಳನ್ನು ಬೆದರಿಸಿ ಸುಮ್ಮನಾಗಲು ಸೂಚಿಸಿದ್ದಾರೆ. ನಿತ್ಯ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿಗಳು ಎಸ್‌ಎಫ್‌ಐ ಸಂಘಟನೆಯ ಬೆಂಬಲದೊಂದಿಗೆ ಸಿಬ್ಬಂದಿ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಎರಡು ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ಕೈಗೊಂಡರು.
ನಂತರ ಸ್ಥಳಕ್ಕೆ ಆಗಮಿಸಿದ ಸಮಾಜಕಲ್ಯಾಣ ಅಧಿಕಾರಿ ಪಿ.ಎ. ಭಜಂತ್ರಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನಕ್ಕೆ ಮುಂದಾದರು. ಅನ್ನದಲ್ಲಿ ಹುಳು ಬಂದಿರುವುದನ್ನು ಅಧಿಕಾರಿಗಳ ಮುಂದೆ ಪ್ರದರ್ಶಿಸಿದ ವಿದ್ಯಾರ್ಥಿಗಳು ಬಲವಂತವಾಗಿ ಇಡೀ ಹಾಸ್ಟೆಲ್‌ನ ಕಸ ಹೊಡೆಯುವುದು ಮತ್ತು ಸ್ವಚ್ಛಗೊಳಿಸುವ ಕೆಲಸವನ್ನು ಇಲ್ಲಿನ ಸಿಬ್ಬಂದಿ ಒತ್ತಾಯಪೂರ್ವಕವಾಗಿ ಮಾಡಿಸುತ್ತಾರೆ. ಮರಳಿ ಪ್ರಶ್ನಿಸಿದರೆ, ಕಳುವಿನ ಆರೋಪ ಹೊರಿಸಿ ವಿದ್ಯಾರ್ಥಿಗಳ ಕೈಯಲ್ಲಿ ಕರ್ಪೂರವಿಟ್ಟು ಬೆಂಕಿ ಹಚ್ಚಿ ಹಿಂಸೆ ನೀಡುತ್ತಾರೆ. ಸಮರ್ಪಕವಾಗಿ ಊಟ ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲ. ವಾರದ ಎರಡು ದಿನ ವಿತರಿಸುವ ಮೊಟ್ಟೆಯನ್ನು ನೀಡದೆ ಆರು ತಿಂಗಳಾಗಿದೆ ಎಂದು ವಿದ್ಯಾರ್ಥಿಗಳು ಅಧಿಕಾರಿಗಳ ಮುಂದೆ ಸಿಬ್ಬಂದಿಗಳ ವರ್ತನೆಯನ್ನು ವಿವರಿಸಿದರು. ಪ್ರತಿಭಟನಾಕಾರ ಮಾಂತೇಶ ಲಮಾಣಿ ಮಾತನಾಡಿ, ಸರ್ಕಾರದಿಂದ ನಮಗೆ ದೊರಕುವ ಯಾವುದೇ ರೀತಿಯ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ ಹಾಗೂ ವಸತಿ ನಿಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಡುಗೆ ಮಾಡುವವರು ನಮಗೆ ತೊಂದರೆ ನೀಡುತ್ತಿದ್ದು, ನಮ್ಮ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ವಸತಿ ನಿಲಯದ ಮೇಲ್ವಿಚಾರಕರು ಸರಿಯಾಗಿ ನಿಲಯಕ್ಕೆ ಬರುವುದಿಲ್ಲ. ವಸತಿ ನಿಲಯದಲ್ಲಿ ಈ ಹಿಂದೆ ಪೂರೈಕೆಯಾಗುತ್ತಿದ್ದ ಶುದ್ಧ ಕುಡಿಯುವ ನೀರು ಸ್ಥಗಿತಗೊಂಡು, ಆರು ತಿಂಗಳು ಗತಿಸಿವೆ. ನಿತ್ಯ ವಿದ್ಯಾರ್ಥಿಗಳು ಸವಳು ನೀರನ್ನು ಕುಡಿಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು. ಎಸ್‌ಎಫ್‌ಐ ಘಟಕದ ಜ್ಯೋತಿ ದೊಡ್ಡಮನಿ, ದೀಪಾ ದೊಡ್ಡಮನಿ, ಮಂಜುನಾಥ ಹರಿಜನ, ರಮೇಶ ನಾಯಕ, ಪ್ರಕಾಶ ಲಮಾಣಿ, ಸಂತೋಷ ಅರ್ಕಸಾಲಿ, ಮುತ್ತಪ್ಪ ಲಮಾಣಿ ಇನ್ನು ಅನೇಕ ವಿಧ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement