ಅಸಮರ್ಪಕ ವಿದ್ಯುತ್: ಪ್ರತಿಭಟನೆ
ಹಾನಗಲ್ಲ: ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಪೂರೈಕೆ ಇಲ್ಲದೇ ತೊಂದರೆ ಅನುಭವಿಸುತ್ತಿರುವ ಗ್ರಾಮಸ್ಥರು ಆಕ್ರೋಶಗೊಂಡು ಗ್ರಾಮದಲ್ಲಿನ 33 ಕೆವಿ ಕೇಂದ್ರಕ್ಕೆ ಶನಿವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಶೇಷಗಿರಿ ಗ್ರಾಮದಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ದುರ್ಗಮ್ಮದೇವಿ ಮತ್ತು ಮರಿಯಮ್ಮ ದೇವಿ ಜಾತ್ರಾಮಹೋತ್ಸವ ಆರಂಭಗೊಂಡಿದೆ. ಜಾತ್ರಾ ಮಹೋತ್ಸವದ ಕುರಿತು ಒಂದು ತಿಂಗಳು ಮೊದಲೇ ಹೆಸ್ಕಾಂ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಮನವಿ ಮಾಡಲಾಗಿದ್ದರೂ ಕೂಡ ಸೂಕ್ತ ಮುಂಜಾಗ್ರತೆವಹಿಸದ ಅಧಿಕಾರಿಗಳ ನಿರ್ಲಕ್ಷ್ಯತೆಯ ಕುರಿತು ಗ್ರಾಮಸ್ಥರು ಹರಿಹಾಯ್ದರು.
ಹೆಸ್ಕಾಂ ನಿರ್ಲಕ್ಷ್ಯದ ಕುರಿತು ಆಕ್ರೋಶಗೊಂಡ ಗ್ರಾಮಸ್ಥರು ದಿಢೀರನೇ 33 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ನುಗ್ಗಿ ಶಾಖಾಧಿಕಾರಿ ಮತ್ತು ಸಿಬ್ಬಂದಿಯನ್ನು ಹೊರಹಾಕಿ ಬೀಗ ಜಡಿದು ಆಕ್ರೋಶವ್ಯಕ್ತಪಡಿಸಿದರು. ಸಮರ್ಪಕ ಮತ್ತು ಗುಣಮಟ್ಟದ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳನ್ನು ತಕ್ಷಣವೇ ಅಳವಡಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದರು.
ಸಂಜೆಯ ಒಳಗೆ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇಲೆ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು. ಭರವಸೆಯಂತೆ ಹೆಸ್ಕಾಂ ಅಧಿಕಾರಿಗಳು ಪರಿವರ್ತಕಗಳನ್ನು ಅಳವಡಿಸಿ ಸಂಜೆ ವಿದ್ಯುತ್ ಪೂರೈಕೆ ಆರಂಭಿಸಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಮುಖಂಡರಾದ ಸಿದ್ಧಪ್ಪ ಕರಡಿ, ಶಂಕ್ರಣ್ಣ ಗುರಪ್ಪನವರ, ಶಿವಕುಮಾರ ಅಪ್ಪಾಜಿ, ಕುಮಾರ ಓಲೇಕಾರ, ಸಿದ್ಧಪ್ಪ ಅಂಬಿಗೇರ, ಮಹಾಲಿಂಗ ಸುಂಕದ, ಚಂದ್ರಶೇಖರ ರೊಟ್ಟಿ, ಧರ್ಮಣ್ಣ ರೊಟ್ಟಿ, ಸುರೇಶ ಕಟ್ಟಿಮನಿ, ಬಸವರಾಜ ಬಡೆಮ್ಮಿ, ಬಸವರಾಜ ಹಿತ್ತಲಮನಿ, ಸಿದ್ದಪ್ಪ ದೊಡ್ಡಮನಿ, ಅನಿಲ ಕಳಗೊಂಡ, ಸುನಿಲ ಕಳಗೊಂಡ, ಮಂಜಪ್ಪ ಬಡೆಮ್ಮಿ, ಪ್ರಭು ಚಕ್ರಸಾಲಿ, ಲಕ್ಷ್ಮಣ ರೊಟ್ಟಿ, ಮಂಜುನಾಥ ಕೊಂಡೋಜಿ, ಮಾಲತೇಶ ತಳವಾರ, ಮಹೇಶ ಸುಂಕದ, ಸಿದ್ಧಪ್ಪ ಸುಂಕದ, ಈರಪ್ಪ ಗುರ್ಕಿ, ಶಿವಾನಂದ ಪೂಜಾರ, ರವಿ ವಡ್ಡರ, ಬಸವರಾಜ್ ವಡ್ಡರ, ಶಿವಕುಮಾರ ಗುರ್ಕಿ, ಗಿರೀಶ ಗುರಪ್ಪನವರ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.