ಇಂದಿನಿಂದ ಬಸವಣ್ಣ, ವೀರಭದ್ರೇಶ್ವರ ಜಾತ್ರೆ
ಹಾನಗಲ್ಲ: ತಾಲೂಕಿನ ಸ್ಮಾರಕಗಳ ಗ್ರಾಮವೆಂದೇ ಕರೆಯಲಾಗುವ ಕಲಕೇರಿ ಶ್ರೀ ಬಸವಣ್ಣ ದೇವರ ರಥೋತ್ಸವ ಹಾಗೂ ವೀರಭದ್ರ ದೇವರ ಗುಗ್ಗುಳ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾ. 17ರಿಂದ 24 ರವರೆಗೆ ಜರುಗಲಿವೆ.
ಮಾ. 17ರಂದು ಗ್ರಾಮದ ಎಲ್ಲ ದೇವರುಗಳಿಗೆ ಕಂಕಣ ಧಾರಣ ನಡೆಯಲಿದೆ. ಮಾ. 20ರಂದು ಗ್ರಾಮದ ಬಸವಣ್ಣ ದೇವರು ಹಾಗೂ ಜಯಸಿಂಗೇಶ್ವರ ಶಿವಲಿಂಗಕ್ಕೆ ಮಹಾರುದ್ರಾಭಿಷೇಕ ನಡೆಯಲಿದೆ. ಮಾ. 22ರಂದು ಬೆಳಗ್ಗೆ 8 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುಷ್ಪ ರಥೋತ್ಸವ ಜರುಗುವುದು. ಮಾ. 23ರಂದು ವೀರಭದ್ರ ದೇವರಿಗೆ ಮಹಾರುದ್ರಾಭಿಷೇಕ ನಂತರ ವೀರಭದ್ರ ದೇವರ ಗುಗ್ಗಳದೊಂದಿಗೆ ಮಹಾ ರಥೋತ್ಸವ ಪ್ರಾರಂಭಗೊಳ್ಳುವುದು. ಸಂಜೆ 6 ಗಂಟೆಗೆ ನಡೆಯುವ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವನ್ನು ಹೇರೂರಿನ ನಂಜುಂಡೇಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಕಲಕೇರಿಯ ಮೂಖೇಶ್ವರಯ್ಯ ಹಿರೇಮಠ ಸಮ್ಮುಖ ವಹಿಸುವರು. ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ, ಡಾ. ಪಿ.ಎಸ್. ಬಣಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಶಾಸಕ ಮನೋಹರ ತಹಶೀಲ್ದಾರ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಎಚ್.ಜಿ. ಶೋಭಾ, ಜಿಪಂ ಸದಸ್ಯ ಮಹದೇವಪ್ಪ ಭಾಗಸರ, ತಾಪಂ ಸದಸ್ಯ ಮಧು ಪಾಣಿಗಟ್ಟಿ, ಗ್ರಾಪಂ ಅಧ್ಯಕ್ಷೆ ವಿನೋದಾ ಬಡಿಗೇರ, ಉಪಾಧ್ಯಕ್ಷೆ ಶಾಂತವ್ವ ತಳವಾರ, ಸದಸ್ಯರಾದ ಗಿರಿಜವ್ವ ಮೆಳ್ಳಿಹಳ್ಳಿ, ರಾಮಪ್ಪ ಕರೇಕ್ಯಾತನಹಳ್ಳಿ, ಬಸವರಾಜ ಪೂಜಾರ, ಭದ್ರಾವತಿಯ ಗಣೇಶಪ್ಪ ಕೊಪ್ಪದ ಪಾಲ್ಗೊಳ್ಳುವರು. ಸಂಜೆ 7.30 ಗಂಟೆಗೆ ಮಹಾಲಿಂಗಪುರದ ಕನ್ನಡದ ಕಬೀರ, ರಾಜ್ಯ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಹಾಗೂ ಸಂಗಡಿಗರಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಮಾ. 24 ರಂದು ಮಧ್ಯಾಹ್ನ 3 ಗಂಟೆಗೆ ಹೇರೂರು ಗುಬ್ಬಿ ಅಜ್ಜನ ಮಠದ ನಂಜುಂಡೇಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಓಕಳಿ ಬಂಡಿಗಳ ಮೆರವಣಿಗೆ ನಡೆಯುವುದು. ಜಾತ್ರೆಯ ನಿಮಿತ್ತ ಮಾ. 21 ರಿಂದ 24 ರವರೆಗೆ ಗ್ರಾಮದ ನಿಂಗನಗೌಡ ಪಾಟೀಲ ಅವರ ಹೊಲದಲ್ಲಿ ರೈತರಿಗಾಗಿ ದನಗಳ ಜಾತ್ರೆ ಜರುಗಲಿದೆ.
ಮಾ. 21ರಂದು ಮಧ್ಯಾಹ್ನ 1 ಗಂಟೆಗೆ ಬಸವಣ್ಣ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಉಚಿತ ಸಾಮೂಹಿಕ ವಿವಾಹಗಳು ಹಾಗೂ ಗಾಲಿ ಹಬ್ಬ ಜರುಗಲಿವೆ. ಮಾ. 23ರಂದು ಗ್ರಾಮದ ಹಿರಿಯ ನಾಗರಿಕರಾದ ಬಸವಣ್ಣೆಪ್ಪ ಹಾಲಮ್ಮನವರ, ಕಮಲವ್ವ ಬಿಷ್ಟಣ್ಣವರ, ಸೋಮಕ್ಕ ಕಮ್ಮಾರ ಹಾಗೂ ದಾನಿಗಳಾದ ಮಹದೇವಪ್ಪ ಭಾಗಸರ, ಬಾಬೂ ಗುಂಡೂರಾವ್, ಗದಿಗೆಪ್ಪ ಹರವಿ, ಈಶ್ವರ ಹರವಿ, ಗಣೇಶಪ್ಪ ಕೊಪ್ಪದ, ಶೇಕಪ್ಪ ಮೆಳ್ಳಿಹಳ್ಳಿ ಅವರನ್ನು ಸಮಿತಿಯಿಂದ ಸನ್ಮಾನಿಸಲಾಗುವುದು.
ನಾಟಕ ಪ್ರದರ್ಶನ: ಬಸವೇಶ್ವರ ರಥೋತ್ಸವದ ನಿಮಿತ್ತ ಮಾ. 25ರಂದು ರಾತ್ರಿ 10.30ಕ್ಕೆ ಕಲಕೇರಿಯ ಬಸವೇಶ್ವರ ಕಲಾ ನಾಟ್ಯ ಸಂಘದ ಕಲಾವಿದರಿಂದ ದಿಲ್ಲಿ ಹೊಕ್ಕ ಪುಂಡ ಹುಲಿ ಹಾಗೂ ಗುರುವಾರ ಮಾ. 27ರಂದು ಇದೇ ಗ್ರಾಮದ ಸೋಮೇಶ್ವರ ಕಲಾ ನಾಟ್ಯ ಸಂಘದ ಕಲಾವಿದರಿಂದ ರಾತ್ರಿ 10.30ಕ್ಕೆ ಹುಲಿ ಹೆಬ್ಬುಲಿ ನಾಟಕ ಪ್ರದರ್ಶನಗೊಳ್ಳಲಿವೆ ಎಂದು ಟ್ರಸ್ಟ್ ಕಮಿಟಿ ಪ್ರಕಟಣೆ ತಿಳಿಸಿದೆ.