ಕೇಂದ್ರದಲ್ಲಿ ಮತ್ತೆ ಯುಪಿಎ ಅಧಿಕಾರಕ್ಕೆ
ಬ್ಯಾಡಗಿ: ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ರಚನೆಯಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತೆ ಈ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ವಿಶ್ವಾಸ ವ್ಯಕ್ತಪಡಿಸಿದರು. ಭಾನುವಾರ ತಾಲೂಕಿನ ಸೂಡಂಬಿ, ಚಿಕ್ಕಬಾಸೂರ, ಹಿರೇಹಳ್ಳಿ, ಕಾಗಿನೆಲೆ ಗ್ರಾಮಗಳಲ್ಲಿ ಕಾಂಗ್ರೆಸ್ ಪರ ಚುನಾವಣಾ ರ್ಯಾಲಿಗೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು. ಕಳೆದ ಅವಧಿಯಲ್ಲಿ ನಡೆದ ರಾಜಕೀಯ ದೊಂಬರಾಟ ಹಾಗೂ ಭ್ರಷ್ಟ ಶಾಸಕರು, ಮಂತ್ರಿಗಳು ನಡೆಸಿದ ದುರಾಡಳಿತದಿಂದ ಭ್ರಮನಿರಸನಗೊಂಡ ಜನತೆ ರಾಜ್ಯದಲ್ಲಿ ಕಾಂಗ್ರೆಸ್ಗೆ ಅಧಿಕಾರ ನೀಡಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಗೆಲ್ಲಿಸುವ ಮೂಲಕ ಯುಪಿಎ ಅಧಿಕಾರಕ್ಕೆ ಬರುವಂತೆ ಸಹಕರಿಸಲು ಮನವಿ ಮಾಡಿದರು.
ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿ ಬಿಎಸ್ವೈ ರೈತರಿಗೆ ತಪ್ಪು ಸಂದೇಶ ರವಾನಿಸಿ ಹಾವೇರಿ ಗೋಲಿಬಾರ್ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ ವಿಫಲವಾಗಿದ್ದಾರೆ. ಗೊಬ್ಬರ ಕೇಳಿದ ರೈತರನ್ನು ಗುಂಡಿಕ್ಕಿ ಕೊಂದಿಲ್ಲದೇ ಜೈಲು ಕಂಡ ಬಿಎಸ್ವೈ ಮತ್ತು ಬಿಜೆಪಿಯಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಪಕ್ಷ, ಅವರೇ ಪಕ್ಷದ ಆಸ್ತಿ. ಪಕ್ಷ ಸೂಚಿಸಿದವರಿಗೆ ಬೆಂಬಲ ವ್ಯಕ್ತಪಡಿಸಿ ಚುನಾವಣೆಯಲ್ಲಿ ಗೆಲ್ಲಿಸಲು ಪ್ರಯತ್ನಿಸಬೇಕಾಗಿದ್ದು, ಯಾರೇ ಚುನಾಯಿತರಾದರೂ ಅವರು ಕಾಂಗ್ರೆಸ್ ಸಂಸದರಾಗಿರುತ್ತಾರೆ ಎಂದರು.
ಮಾಧ್ಯಮಗಳೇ ತೀರ್ಮಾನಿಸಬೇಡಿ?: ಮಾಧ್ಯಮಗಳ ಕಾರ್ಯ ಚಟುವಟಿಕೆ ಬಗ್ಗೆ ವಿಶ್ವಾಸ ಹಾಗೂ ಗೌರವವಿದೆ. ಆದರೆ ಚುನಾವಣಾ ಪೂರ್ವ ಸಮೀಕ್ಷೆಗಳು ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬರುವುದಾಗಿ ಸುದ್ದಿ ಮಾಡುತ್ತಿವೆ. ಜನತೆ ತೆಗೆದುಕೊಳ್ಳುವ ತೀರ್ಮಾನವನ್ನು ಮೊದಲೇ ಫಲಿತಾಂಶಗಳ ಮೂಲಕ ಪ್ರಕಟಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಲ್ಲ ಮತ್ತು ಇದರಿಂದ ಮತದಾನದ ಗೌಪ್ಯತೆಯನ್ನು ಕಾಪಾಡಲು ಸಾಧ್ಯವಿಲ್ಲ ಮಾಧ್ಯಮಗಳು ಇಂತಹ ಫಲಿತಾಂಶ ಪ್ರಕಟಿಸದಿರುವಂತೆ ಮನವಿ ಮಾಡಿದರು. ತಾಲೂಕಾಧ್ಯಕ್ಷ ಎಚ್.ಎಚ್. ದೊಡಮನಿ ಕೇಂದ್ರ ಸರ್ಕಾರ ಜಾರಿಗೆ ತಂದ ಮಹತ್ವದ ಯೋಜನೆಗಳನ್ನು ಮತದಾರನಿಗೆ ತಲುಪಿಸುವ ಕಾರ್ಯಕ್ಕೆ ಕಾರ್ಯಕರ್ತರು ಮುಂದಾಗಬೇಕು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಕಾಂಗ್ರೆಸ್ ಕಲ್ಪಿಸಿದೆ ಎಂದರು.
ಮೆರವಣಿಗೆ: ಗ್ರಾಮದೆಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಶಾಸಕ ಬಸವರಾಜ ಶಿವಣ್ಣನವರ ಕೈಬೀಸಿ ಸಾಗಿದರು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ. ಶಿಡೇನೂರ, ತಾಪಂ ಮಾಜಿ ಅಧ್ಯಕ್ಷರಾದ ದಾನಪ್ಪ ಚೂರಿ, ಹನುಮಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ, ಸುರೇಶಗೌಡ ಪಾಟೀಲ, ರುದ್ರಪ್ಪ ಹೊಂಕಣ ಎಪಿಎಂಸಿ ಮಾಜಿ ಅಧ್ಯಕ್ಷ ಹುಚ್ಚನಗೌಡ ಲಿಂಗನಗೌಡ್ರ, ನ್ಯಾಯವಾದಿ ಬುಡ್ಡನಗೌಡ್ರ, ಭರಮಗೌಡ್ರ ರಾಯನಗೌಡ್ರ, ಮಂಜುನಗೌಡ್ರ ಲಿಂಗನಗೌಡ್ರ, ಅಯ್ಯೂಬಖಾನ ಮಲ್ಲೂರ, ಕರಬಸಪ್ಪ ವಾರದ, ಬಸವಂತಪ್ಪ ಕಿಳ್ಳಿ, ಈಶಪ್ಪ ಸಾಗರ ಇನ್ನಿತರರು ಇದ್ದರು.